Chittapura Assembly Constituency: ಪ್ರಿಯಾಂಕ್ ಖರ್ಗೆಗೆ ಅಗ್ನಿಪರೀಕ್ಷೆ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನಿಂದಲೂ ಕಲಬುರಗಿ ಜಿಲ್ಲಾದ್ಯಂತ ತಮ್ಮದೇ ಪ್ರಬಲ ಉಳಿಸಿಕೊಂಡವರು.
ಕಲಬುರಗಿ, ಫೆಬ್ರವರಿ 22: ಕಾಂಗ್ರೆಸ್‌ನ ಭದ್ರಕೋಟೆಯಂತಿರುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಈಗ ಅಗ್ನಿಪರೀಕ್ಷೆ ಎದುರಾಗಲಿದೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹಿಂದಿನಿಂದಲೂ ಕಲಬುರಗಿ ಜಿಲ್ಲಾದ್ಯಂತ ತಮ್ಮದೇ ಪ್ರಬಲ ಉಳಿಸಿಕೊಂಡವರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಉಮೇಶ್ ಜಾಧವ್ ವಿರುದ್ಧ ಸೋತಿದ್ದರು. ಈಗ ಚಿತ್ತಾಪುರದಾದ್ಯಂತ ಪ್ರಿಯಾಂಕ್ ಖರ್ಗೆ ಪ್ರಬಲ್ಯವಿದೆ. ಆದರೆ ಮೊದಲಿನ ಚುನಾವಣೆಯಷ್ಟು ಪ್ರಿಯಾಂಕ್ ಖರ್ಗೆ ಗೆಲುವು ಈಗ ಸುಲಭವಿಲ್ಲ.
ಈಗಾಗಲೇ ಬಿಜೆಪಿ ಇಲ್ಲಿ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದ್ದು, ತಂದೆಯಂತೆ ಪ್ರಿಯಾಂಕ್ ಅವರನ್ನು ಸೋಲಿಸಲು ತಂತ್ರ ಮಾಡುತ್ತಿದೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಚಿತ್ತಾಪುರದಲ್ಲಿ ಮೊದಲ ಚುನಾವಣೆಯಲ್ಲಿ ಮೊದಲು ಮಲ್ಲಿಕಾರ್ಜುನ ಖರ್ಗೆ ಗೆದ್ದರೆ ಎರಡು ಬಾರಿ ಪ್ರಿಯಾಂಕ್ ಖರ್ಗೆ ಗೆದ್ದಿದ್ದಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದ ಬಳಿಕ ಈ ಕ್ಷೇತ್ರ ಮೀಸಲು ಕ್ಷೇತ್ರವಾಯಿತು. ಇಲ್ಲಿ ಮೊದಲ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆಗೆ ಸೋಲಿನ ಅನುಭವವಾಗಿತ್ತು. ಅವರನ್ನು ಬಿಜೆಪಿಯ ದಿವಂಗತ ವಾಲ್ಮೀಕಿ ನಾಯಕ್ ಸೋಲಿಸಿದ್ದರು.
ಆದರೆ 2013 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರು. ಈಗ ಅವರು ಹ್ಯಾಟ್ರಿಕ್ ಬಾರಿಸುವ ತವಕದಲ್ಲಿದ್ದಾರೆ. ಅದಕ್ಕಾಗಿಯೇ ಆಡಳಿತರೂಢ ಬಿಜೆಪಿ ಅವರನ್ನು ಮಣಿಸಲು ಎಲ್ಲಿಲ್ಲದ ತಂತ್ರ ಮಾಡುತ್ತಿದೆ. ತಂದೆಯಷ್ಟು ಪ್ರಾಬಲ್ಯ ಪ್ರಿಯಾಂಕ್ ಹೊಂದಿಲ್ಲದಿದ್ದರೂ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪ್ರಭಾವ ಇದೆ.
ಅಲ್ಲದೆ ಪ್ರಿಯಾಂಕ್ ತಮ್ಮ ಸಂಘಟನೆ ಬಲ ಹೊಂದಿದ್ದಾರೆ. ತಮ್ಮ ಗೆಲವಿಗೆ ಎಲ್ಲ ತಂತ್ರಗಳನ್ನು ಬಲ್ಲವರು. ಈಗ ಚಿತ್ತಾಪುರದಲ್ಲಿ ಪ್ರಿಯಾಂಕ್ ಖರ್ಗೆ ಗೆಲ್ಲಲೇಬೇಕಿದೆ. ಇಲ್ಲವಾದಲ್ಲಿ ತಂದೆ ಎಐಸಿಸಿ ಅಧ್ಯಕ್ಷರಾಗಿದ್ದು ಮಗನನ್ನು ಗೆಲ್ಲಿಸಲಾಗಲಿಲ್ಲ ಎಂಬ ಅಪವಾದ ಬರುತ್ತದೆ.
ಬಿಜೆಪಿ ಇಲ್ಲಿ ಪ್ರಬಲ ಅಭ್ಯರ್ಥಿಯ ಚಿಂತೆ ಬಹಳದಿದೆ. ಆದರೆ ಪ್ರಿಯಾಂಕ್ ಖರ್ಗೆ ಅವರಿಗೆ ಸ್ಪರ್ಧೆ ಒಡ್ಡಲು ಗದಗ ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಸುಭಾಶ್ಚಂದ್ರ ರಾಠೋಡ್ ಅವರು ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದು, ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇವರಿಗೆ ಬಹುತೇಕ ಟಿಕೆಟ್ ಸಿಗುವ ಸಾಧ್ಯತೆ ಇದೆ.

ಶಾಸಕನಾಗುವುದು ನನ್ನ ಬಯಕೆ: ಸುಭಾಶ್ಚಂದ್ರ ರಾಠೋಡ್
ಚುನಾವಣಾ ಸುಧಾರಣೆಗಳನ್ನು ತರುವುದು ಅವರ ದೊಡ್ಡ ಉದ್ದೇಶವಾಗಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗದ ನಂತರ ನ್ಯಾಯಾಂಗದ ಪಾತ್ರವು ಕೊನೆಯ ಸ್ಥಾನದಲ್ಲಿದೆ. ನ್ಯಾಯಾಂಗವು ನ್ಯಾಯಾಲಯವನ್ನು ಸಂಪರ್ಕಿಸಿದಾಗ ನ್ಯಾಯಾಂಗವು ಕಾನೂನುಗಳನ್ನು ಅರ್ಥೈಸಬಲ್ಲದು. ಹಾಗಾಗಿ, ಕಾನೂನು ರಚನೆಯ ಮೂಲಕ ಸಾಮಾಜಿಕ ಬದಲಾವಣೆಗಳನ್ನು ತರಬಲ್ಲ ಶಾಸಕನಾಗುವುದು ನನ್ನ ಬಯಕೆಯಾಗಿತ್ತು. ಕಾನೂನುಗಳು, ಇನ್ನೊಂದು ತುದಿಯಲ್ಲಿ, ನ್ಯಾಯಾಧೀಶನಾಗಿ, ನಾನು ಭ್ರಷ್ಟಾಚಾರದಂತಹ ಸಾಮಾಜಿಕ ಬೆದರಿಕೆಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

4 ಸಾವಿರಕ್ಕೂ ಮತಗಳ ಅಂತರದಿಂದ ಗೆದ್ದಿದ್ದ ಪ್ರಿಯಾಂಕ್
ಕಳೆದ ಬಾರಿ 4 ಸಾವಿರಕ್ಕೂ ಮತಗಳ ಅಂತರದಿಂದ ಗೆದ್ದಿದ್ದ ಪ್ರಿಯಾಂಕ್ ಖರ್ಗೆ ವಿರುದ್ಧ ಚಿತ್ತಾಪುರದಾದ್ಯಂತ ಕಳೆದ ವರ್ಷ ನವೆಂಬರ್‌ನಲ್ಲಿ 'ಪ್ರಿಯಾಂಕ್ ಖರ್ಗೆ ನಾಪತ್ತೆ' ಎಂಬ ಪೋಸ್ಟರ್‌ಗಳನ್ನು ಅಂಟಿಸಿ ಶಾಸಕರ ವಿರುದ್ಧ ಕಿಡಿಕಾರುವುದರ ಜೊತೆಗೆ ಪ್ರಮುಖ ಸಮುದಾಯಗಳ ಮತದಾರರನ್ನು ಓಲೈಸುವ ಮೂಲಕ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಬಿಜೆಪಿ ತನ್ನ ಎಲ್ಲಾ ಶಕ್ತಿಯನ್ನು ಹಾಕುತ್ತಿದೆ. ಬಿಜೆಪಿಯಿಂದ ಮಣಿಕಂಠ ರಾಥೋಡ್ ಅವರು ಸ್ಪರ್ಧಿಸಬಹುದು ಎನ್ನಲಾಗಿದೆ. ಇವರಲ್ಲದೆ ವಿಠ್ಠಲ್ ನಾಯಕ, ಅರವಿಂದ ಚವ್ಹಾಣ್, ಬಸವರಾಜ ಬೆಣ್ಣೆಶಿರೂರ, ಧರ್ಮಣ್ಣ ಇಟಗಿ ಇತರರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ.

ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಪ್ರಿಯಾಂಕ್
ಲಿಂಗಾಯತರು, ಲಂಬಾಣಿ, ಕೋಲಿ, ಕಬ್ಬಲಿಗ ಸೇರಿ ಮೇಲ್ವರ್ಗದ ಮತಗಳು ಹೊಡೆದು ಹೋಗದಂತೆ ನೋಡಿಕೊಳ್ಳುವ ಜತೆಗೆ ಕಾಂಗ್ರೆಸ್ ಅತಿಯಾಗಿ ನಂಬಿದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತ(ಅಹಿಂದ) ವರ್ಗದ ಸ್ವಲ್ಪ ಮತಕ್ಕೆ ಲಗ್ಗೆಯಿಟ್ಟರೆ ಜಯದ ಹಾದಿ ಸುಗಮವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ ಹಾಕಿದೆ. ಕಳೆದ ವರ್ಷ ಪ್ರಿಯಾಂಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಹಗರಣವನ್ನು ಬಯಲಿಗೆಳೆದು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ಆ ಸಿಟ್ಟು ಬಿಜೆಪಿಗೆ ಇದ್ದೇ ಇದೆ.

ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ 69,700 ಮತ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ 69,700 ಮತಗಳು, ಬಿಜೆಪಿಯ ವಾಲ್ಮೀಕಿ ನಾಯಕ್ 65,307 ಮತಗಳು ಹಾಗೂ ಬಿಎಸ್‌ಪಿಯ ದೇವರಾಜು ವಿಕೆ ಅವರು 1,218 ಮತಗಳನ್ನು ಪಡೆದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಬಿಜೆಪಿ ಮುಖಂಡರು ಎಸ್ಟಿ ಮೀಸಲಾತಿ ಬೇಡಿಕೆ ಈಡೇರಿಸುವ ಭರವಸೆ ನೀಡಿ ಕೋಲಿ-ಕಬ್ಬಲಿಗರನ್ನು ಓಲೈಸಲು ಯತ್ನಿಸುತ್ತಿದ್ದಾರೆ.












Click it and Unblock the Notifications