ಕಲಬುರಗಿ: ಮೆಗಾ ಟೆಕ್ಸ್ಟೈಲ್ ಪಾರ್ಕ್‌ನಿಂದ ಜಿಲ್ಲೆ ಗೇಮ್ ಚೇಂಜರ್ ಆಗಲಿದೆ, 'ವಂದೇ ಭಾರತ್' ರೈಲು ವಿಸ್ತರಣೆಗೆ ಮನವಿ
ಕಲಬುರಗಿ, ಮಾರ್ಚ್ 28: ವಿವಿಧ ಮೂಲ ಸೌಕರ್ಯಗಳನ್ನು ಹೊಂದಿರುವ ಮುಂಬೈ-ಬೆಂಗಳೂರು-ಹೈದರಾಬಾದ್ ನಗರಗಳಿಗೆ ಕೇಂದ್ರೀತವಾದ ಕಲಬುರಗಿ ನಗರ (ಜಿಲ್ಲೆ) ಭಾರತದ ದೇಶದ ಭವಿಷ್ಯದ ನಗರವಾಗಿ ಹೊರ ಹೊಮ್ಮಲಿದೆ. ಇದಕ್ಕೆ ಪೂರಕವಾಗಿ ನೂತನ ಟೆಕ್ಸ್‍ಟೈಲ್ ಪಾರ್ಕ್ ಆರ್ಥಿಕ ಚೇತರಿಕೆಯ ಮೊದಲ ಹೆಜ್ಜೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಕಲಬುರಗಿಯಲ್ಲಿ ಮಂಗಳವಾರ ನಡೆದ ಭಾರತ ಸರ್ಕಾರದ ಜವಳಿ ಮಂತ್ರಾಲಯ ಮತ್ತು ರಾಜ್ಯದ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಮಾರಂಭದಲ್ಲಿ 'ಕೇಂದ್ರ ಸರ್ಕಾರದ ಪಿಎಂ-ಮಿತ್ರ ಯೋಜನೆಯಡಿ ಮಂಜೂರಾಗಿರುವ ಕಲಬುರಗಿ 'ಮೆಗಾ ಟೆಕ್ಸ್‍ಟೈಲ್ ಪಾರ್ಕ್' ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಲ್ಲಿ ಟೆಕ್ಸ್‍ಟೈಲ್ ಪಾರ್ಕ್ ನಿರ್ಮಾಣದ ಮೂಲಕ 10 ಸಾವಿರ ಕೋಟಿ ರೂಪಾಯಿ ಹೂಡಿಕೆ ಹರಿದು ಬಂದಿದ್ದು, ಇದು ದೇಶದ ಆರ್ಥಿಕತೆಗೆ ಪೂರಕವಾಗಿದೆ. ಕಲಬುರಗಿ ಹಿಂದುಳಿದ ಪ್ರದೇಶ. ಪ್ರತಿ ವರ್ಷ ಇಲ್ಲಿಂದ ಉದ್ಯೋಗ ಅರಸಿ ಬೆಂಗಳೂರು, ಮುಂಬೈ ಹೊರಡುವವರ ಸಂಖ್ಯೆಗೇನು ಕಮ್ಮಿ ಇಲ್ಲ. ಇದನ್ನು ತಪ್ಪಿಸುವುದು ಸವಾಲಿನ ಕೆಲಸ. ಈ ಸಂಬಂಧ ಇವರಿಗೆಲ್ಲ ಸ್ಥಳೀಯವಾಗಿಯೇ ಉದ್ಯೋಗ ಸಿಗುವಂತೆ ಮಾಡಲು ದೇಶದಾದ್ಯಂತ ಸ್ಥಾಪಿಸಲಾಗುತ್ತಿರುವ 7 ಟೆಕ್ಸ್‍ಟೈಲ್‍ನಲ್ಲಿ ಕಲಬುರಗಿಗೆ ತಂದಿದ್ದೇವೆ ಎಂದರು.
ಈ ಟೆಕ್ಸ್‌ಟೈಲ್ ಪಾರ್ಕ್‌ನಿಂದ ಲಕ್ಷಾಂತರ ಜನರ ಬದುಕು ಬದಲಾಯಿಸುವ ಕೆಲಸವಾಗಲಿದೆ. ದೇಶದಲ್ಲಿಯೇ ಮಾದರಿಯಾಗಿ ಉದ್ಯೋಗ ನೀತಿ ಜಾರಿಗೆ ತಂದ ರಾಜ್ಯ ಕರ್ನಾಟಕದ್ದು. ಜವಳಿ ಪಾರ್ಕ್‌ನಲ್ಲಿನ ಉದ್ಯೋಗಿಗೆ ಮಾಸಿಕ 3,000 ರೂ. ಇನ್ಸೆನ್ಟಿವ್ ನೀಡಲಾಗುತ್ತದೆ. ನಗರದಲ್ಲಿ ಕೈಗಾರಿಕೆ ಸ್ಥಾಪನೆಗಾಗಿ ನೀರು, ವಿದ್ಯುತ್ ರಿಯಾಯಿತಿ ಒದಗಿಸಲಾಗುತ್ತಿದೆ. 1,000 ಎಕರೆ ಜಮೀನು ಕೇಂದ್ರಕ್ಕೆ ಉಚಿತ ನೀಡಲಾಗಿದೆ ಎಂದು ಕಲಬುರಗಿ ಅಭಿವೃದ್ಧಿ ಕುರಿತು ತಿಳಿಸಿದರು.

ಹೆಚ್ಚೆಚ್ಚು ಜನರಿಗೆ ಉದ್ಯೋಗ ನೀಡುವ ಕ್ಷೇತ್ರಗಳು ಪೈಕಿ ಜವಳಿ ಉದ್ಯಮವು ಒಂದು. ಕಲಬುರಗಿಯಲ್ಲಿ ಮೆಗಾ ಟೆಕ್ಸ್‍ಟೈಲ್ಸ್ ಹೊರತುಪಡಿಸಿ, ರಾಯಚೂರು ಮತ್ತು ವಿಜಯಪುರದಲ್ಲಿ ಟೆಕ್ಸ್‍ಟೈಲ್ ಪಾರ್ಕ್ ಮತ್ತು 25 ಜಿಲ್ಲಾ ಕೇಂದ್ರದಲ್ಲಿ ಮಿನಿ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಬಜೆಟ್‌ನಲ್ಲಿ ಘೋಷಿಸಲಾಗಿದೆ ಎಂದು ವಿವರಿಸಿದರು.
ಟೆಕ್ಸ್‌ಟೈಲ್ ಪಾಕ್ ಜಿಲ್ಲೆಯ ಗೇಮ್ ಚೇಂಜರ್
ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತ ಸಾರ್ವಜನಿಕ ಸರಬರಾಜು ಹಾಗೂ ಜವಳಿ ಖಾತೆ ಸಚಿವ ಪಿಯುಶ್ ಗೋಯಲ್ ಅವರು, ಕಲಬುರಗಿಯಲ್ಲಿ ತಲೆ ತ್ತಲಿರುವ ಈ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಪ್ರದೇಶದ ಅಭಿವೃದ್ಧಿಗೆ ಗೇಮ್ ಚೇಂಜರ್ ಆಗಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 3 ಲಕ್ಷ ಉದ್ಯೋಗ ಸೃಷ್ಠಿಯಾಗಲಿದೆ. ಜವಳಿ ಕ್ಷೇತ್ರದಲ್ಲಿ ಭಾರತವು ಜಾಗತೀಕವಾಗಿ ಸ್ಪರ್ಧೆಯೊಡ್ಡಿದೆ ಎಂದದು ಹೇಳಿದರು.
10 ಸಾವಿರ ಕೋಟಿ ರೂ. ಹೂಡಿಕೆ
ಕೇಂದ್ರದ ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನ ವಿ. ಜರ್ದೋಶ್ ಮಾತನಾಡಿ, ದೇಶದಾದ್ಯಂತ 12 ರಾಜ್ಯಗಳಿಂದ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಪ್ರಸ್ತಾವನೆ ಬಂದಿವೆ. ಇದರಲ್ಲಿ ಕಲಬುರಗಿಗೆ ಸೇರಿದಂತೆ 7 ಕಡೆ ಸ್ಥಾಪಿಸಲು ಕೇಂದ್ರ ಅನುಮೋದನೆ ನೀಡಿದೆ. ಈ ಯೋಜನೆಯಿಂದಾಗಿ ಒಂದೊಂದಕ್ಕೆ ತಲಾ 800 ಕೋಟಿ ರೂ. ಗಳಂತೆ 2027-28ರ ವರೆಗೆ ಒಟ್ಟಾರೆ 4,400 ಕೋಟಿ ರೂ. ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗುತ್ತದೆ. ಕಲಬುರಗಿಯಲ್ಲಿ 10 ಸಾವಿರ ಕೋಟಿ ರೂ. ಹೂಡಿಕೆಯ ನಿರೀಕ್ಷೆ ಇದೆ ಎಂದರು.
ಕಲಬುರಗಿದೆ ವಂದೇ ಭಾರತ್ ರೈಲು:ಮನವಿ
ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಿ. ಜಾಧವ ಅವರು, ಕಲಬುರಗಿ ಜಿಲ್ಲೆ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕರು ಹೆಚ್ಚಿದ್ದಾರೆ. ಅವರಿಗೆಲ್ಲ ಉದ್ಯೋಗ ನೀಡಲು ಇಲ್ಲಿಗೆ ಜವಳಿ ಪಾರ್ಕ್ ಸ್ಥಾಪಿಸಲಾಗಿರುವುದು ಸಂತಸ ತಂದಿದೆ. ಮುಂಬೈ-ಸೋಲಾಪೂರ ನಡುವೆ ಘೋಷಿಸಿರುವ ವಂದೇ ಭಾರತ್ ರೈಲು ಕಲಬುರಗಿವರೆಗೂ ವಿಸ್ತರಿಸಬೇಕು ಎಂದು ಅವರು ಕಾರ್ಯಕ್ರಮದಲ್ಲಿದ್ದ ರೈಲ್ವೆ ಖಾತೆ ರಾಜ್ಯ ಸಚಿವರಿಗೆ ಮನವಿ ಮಾಡಿದರು.












Click it and Unblock the Notifications