Kalaburagi: ಜಿಲ್ಲೆಯಲ್ಲಿ ರಾಜ್ಯದ ಅತೀ ಗರಿಷ್ಠ ತಾಪಮಾನ ದಾಖಲು: ಉಷ್ಣ ಅಲೆ ಎಚ್ಚರಿಕೆ
ಕಲಬುರಗಿ, ಮಾರ್ಚ್ 17: ಕರ್ನಾಟಕದಾದ್ಯಂತ ಒಣಹವೆ ಮುಂದುವರಿದಿದೆ. ಈ ನಡುವೆ ಒಂದೆರಡು ಜಿಲ್ಲೆಗಳ ಅಲ್ಲಲ್ಲಿ ಗುಡಗು ಮಿಂಚು ಸಹಿತ ಮಳೆ ಆಗಿದ್ದು, ಪೂರ್ವ ಮುಂಗಾರು ಪ್ರವೇಶವಾಗಿದೆ. ಇತ್ತ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಸೂರ್ಯನ ಶಾಖಕ್ಕೆ ಕಾದು ಕೆಂಡಂದಂತಾಗಿವೆ. ಉರಿ ಬಿಸಿಲಿಗೆ ಜನರು ತತ್ತರಿಸಿದ್ದು, ರಾಜ್ಯದ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಉಷ್ಣ ಅಲೆಯ ವಾತಾವರಣ ಕಂಡು ಬಂದಿದೆ.
ರಾಜ್ಯದಲ್ಲಿ ಕಲಬುರಗಿಯಲ್ಲಿ ಕಳೆದ ಐದು ದಿನಗಳಲ್ಲಿ ಗರಿಷ್ಠ ತಾಪಮಾನ 39.5ರಿಂದ 40.5 ಡಿಗ್ರಿ ಸೆಲ್ಸಿಯಸ್‌್ವರೆಗೆ ದಾಖಲಾಗುತ್ತಿದೆ. ಮನೆಯಿಂದ ಹೊರ ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಮಳೆ ಬರುತ್ತಿರುವ ಕಾರಣ, ವಾತಾವರಣದಲ್ಲಿ ಬದಲಾವಣೆ ಕಾರಣದಿಂದಾಗಿ ಈ ಭಾಗದಲ್ಲಿ ಸಂಜೆ ಬಳಿಕ ಕೊಂಚ ತಂಪು ಗಾಳಿ ಬೀಸುತ್ತಿದೆ.

ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಹೀಗೆ ಹಾವೇರಿ, ಬೆಳಗಾವಿ, ಗದಗ, ಕೊಪ್ಪಳ, ಬೀದರ್, ಕಲಬುರಗಿ, ಬಾಗಲಕೋಟೆ, ಯಾದಗಿರಿ, ವಿಜಯಪುರ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿ ಕನಿಷ್ಠ 35 ರಿಂದ 36 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ಪೈಕಿ ಕಲಬುರಗಿಯಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ.
ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 41 ಡಿ.ಸೆ.ಗೆ ಏರಿಕೆ
ಮಾರ್ಚ್ 13ರಿಂದ ನಿರಂತರವಾಗಿ ಕಲಬುರಗಿಯಲ್ಲಿ 39 ಮತ್ತು 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಇಲ್ಲಿ ಕನಿಷ್ಠ ತಾಪಮಾನವೇ 25 ಡಿಗ್ರಿ ಸೆಲ್ಸಿಯಸ್ ಇದ್ದು, ಮಾರ್ಚ್ ತಿಂಗಳಾಂತ್ಯಕ್ಕೆ 41 ಡಿಗ್ರಿ ಸೆಲ್ಸಿಯಸ್ ತಲುಪಲಿದೆ. ಏಪ್ರಿಲ್ ತಿಂಗಳಲ್ಲಿ ಕೆಲವು ದಿನ ಜಿಲ್ಲೆಯಲ್ಲಿ ನಿರಂತರವಾಗಿ 40 ಇಲ್ಲವೇ 41 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಗಾಳಿಯ ಗುಣಮಟ್ಟ ಹೇಗಿದೆ?
ಇಂದು ಕಲಬುರಗಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 09 ಕಿಲೋ ಮೀಟರ್ ಇದ್ದು, ಮುಂದಿನ ದಿನಗಳಲ್ಲಿ ಅದರ ವೇಗ ಕ್ರಮೇಣ 13, 15 ಹಾಗೂ 19 ಕಿಲೋ ಮೀಟರ್‌ನಂತೆ ನಿರಂತರವಾಗಿ ಏರಿಕೆ ಆಗಲಿದೆ. ಗಂಟೆಗೊಮ್ಮೆ ಗಾಳಿಯ ವೇಗ, ಬಿಸಿಲಿನ ದಾಖಲಾತಿಯಲ್ಲಿ ವ್ಯತ್ಯಾಸ ಆಗಲಿದೆ. ಜನರು ವಾತಾವರಣದಲ್ಲಿನ ಈ ಕ್ಷಣ ಕ್ಷಣದ ಬದಲಾವಣೆಗೆ ತತ್ತರಿಸುತ್ತಿದ್ದಾರೆ. ಜಿಲ್ಲೆಯ ಗಾಳಿಯ ಗುಣಮಟ್ಟ ಉತ್ತಮವಾಗಿದೆ.
ಕಲಬುರಗಿ ಸೇರಿ ಉತ್ತರ ಕರ್ನಾಟಕದಲ್ಲಿ ಉಷ್ಣ ಅಲೆ ಎಚ್ಚರಿಕೆ ನೀಡಲಾಗಿದೆ. ಅತ್ಯಧಿಕ ತಾಪಮಾನ ಕರಾವಳಿ ಜೊತೆಗೆ ಉತ್ತರ ಒಳನಾಡಿನಲ್ಲಿ ದಾಖಲಾಗುತ್ತಿದೆ. ಇನ್ನೂ ದಕ್ಷಿಣ ಒಳನಾಡಿನಲ್ಲೂ ಅಲ್ಲಲ್ಲಿ ಅಧಿಕ ಉಷ್ಣಾಂಶವು ಇದೆ. ಕೆಲವೆಡೆ ಹಗುರ ಮಳೆ ಆಗುತ್ತಿದೆ. ಈ ವಾತಾವರಣ ಈವಾರ ಪೂರ್ತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications