ಕಲಬುರಗಿಯಲ್ಲಿ ಮಳೆ; ನದಿ ದಂಡೆಗೆ ಹೋಗದಂತೆ ಡಿಸಿ ಮನವಿ
ಕಲಬುರಗಿ, ಜುಲೈ 23; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಅಬ್ಬರಿಸುತ್ತಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಬರದ ಛಾಯೆ ನಿಧಾನವಾಗಿ ಮರೆಯಾಗುತ್ತಿದೆ. ಜುಲೈ 25ರ ತನಕ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರಗಿ ಜಿಲ್ಲೆಯಲ್ಲಿಯೂ ಕಳೆದೆರಡು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಮುಂದಿನ ಒಂದು ವಾರ ನಿರಂತರ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಜಿಲ್ಲೆಯ ನದಿ, ಹಳ್ಳ, ಕೆರೆ ದಂಡೆಗೆ ಸಾರ್ವಜನಿಕರು ಹೋಗದಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

ನದಿ ದಂಡೆಗೆ ಜಾನುವಾರುಗಳನ್ನು ಬಿಡಬಾರದು. ದಡದ ಬಳಿ ಬಟ್ಟೆ ಸ್ವಚ್ಛಗೊಳಿಸುವುದು, ಈಜಾಡುವುದನ್ನು ಮಾಡಬಾರದು. ಅಪಾಯವಿರುವ ಸೇತುವೆಗಳ ಮೇಲೆ ಸಂಚರಿಸಬಾರದು. ನದಿ ದಂಡೆಯಲ್ಲಿ ಬರುವ ದೇವಾಲಯ, ಮಸೀದಿ, ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸುವವರನ್ನು ನದಿ ದಂಡೆಗೆ ಹೋಗದಂತೆ ಮನವಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪ್ರವಾಹ ಕುರಿತು ಡಂಗುರ ಸಾರಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತೆ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಹಜವಾಗಿ ನದಿ, ಕೆರೆ, ಹಳ್ಳಗಳು ತುಂಬಿ ರಮಣೀಯ ದೃಶ್ಯ ನೋಡುಗರನ್ನು ಸೆಳೆಯುತ್ತದೆ. ಆದರೆ ಮಳೆ ನಿರಂತರ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ತಾಣಗಳಲ್ಲಿ ಸೆಲ್ಫಿ, ಫೋಟೋಶೂಟ್ ಮಾಡಬಾರದೆಂದು ಜಿಲ್ಲಾಡಳಿತ ಹೇಳಿದೆ.
ಪ್ರವಾಹ ಪರಿಸ್ಥಿತಿ ಕುರಿತು ಎಚ್ಚರ; ಭಾರೀ ಮಳೆಯಿಂದ ಉಂಟಾಗುವ ನೆರೆ ಪರಿಸ್ಥಿತಿಯನ್ನು ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆಯನ್ನು ವಹಿಸಬೇಕಿದ್ದು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿದಿನ ದಿನದ ನೆರೆ ಹಾನಿ ವರದಿಯನ್ನು ಸಲ್ಲಿಸುವಂತೆ ಫೌಜಿಯಾ ತರನ್ನುಮ್ ಸೂಚನೆ ನೀಡಿದ್ದಾರೆ.
ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಗೆ ಸ್ಥಳಾಂತರಿಸುವುದು, ಅವಶ್ಯಕವೆನಿಸಿದರೆ ಮಾತ್ರ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದಾರೆ. ಮಳೆಯಿಂದ ಅಪಾಯವಿರುವ ಮನೆ, ಶಾಲೆ ಹಾಗೂ ಇತರೆ ಕಟ್ಟಡಗಳ ಕುಸಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸುರಕ್ಷಾ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.
ಪ್ರವಾಹ, ನೆರೆ ಹಾವಳಿ ಸಂದರ್ಭದಲ್ಲಿ ವಿಪತ್ತು ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಹೇಳಿದ್ದು, ನಿರ್ಲಕ್ಷ್ಯ ವಹಿಸುವಂತಹ ಅಧಿಕಾರಿ/ ಸಿಬ್ಬಂದಿಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ-2005ರಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಮೈದಂಬಿ ಹರಿಯುತ್ತಿರುವ ನದಿಗಳು; ಕರ್ನಾಟಕದ ನೆರೆಯ ಮಹಾರಾಷ್ಟ್ರದಲ್ಲಿಯೂ ಭಾರೀ ಮಳೆಯಾಗುತ್ತಿರುವ ಕಾರಣ ಉತ್ತರ ಕರ್ನಾಟಕ ಭಾಗದ ನದಿಗಳು ಮೈದುಂಬಿ ಹರಿಯುತ್ತಿರುವೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಬಳಿಯಲ್ಲಿನ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದೆ, ನದಿ ದಂಡೆಯ ಬಳಿ ಹೋಗಬೇಡಿ ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಶುಕ್ರವಾರದಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಬಿತ್ತನೆ ಮಾಡಿದ್ದ ಹೊಲಗಳು ಸಹ ಜಲಾವೃತವಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಜಲಾಶಯಗಳಿಗೆ ಸಹ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಿಲ್ಲೆಯಲ್ಲಿ ಸತತವಾಗಿ ಸುಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಒಟ್ಟು 117 ಮನೆಗಳಿಗೆ ಹಾನಿಯಾಗಿದೆ. ಮಳೆಯಿಂದ ಹಾನಿಯಾದ ಮನೆಗಳಿಗೆ ಕೂಡಲೇ ಪರಿಹಾರ ವಿತರಣೆ ಮಾಡಲು ಸಹ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಹಲವು ಕಡೆ ಹೊಲಗಳು ಜಲಾವೃತಗೊಂಡಿವೆ. ಸೇತುವೆಗಳ ಮೇಲೆ ನೀರು ಹರಿಯುತ್ತಿದ್ದು, ಹಲವಾರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.












Click it and Unblock the Notifications