ಗುಲಬರ್ಗಾ ವಿವಿ ಘಟಿಕೋತ್ಸವ; ಪುತ್ರಿಗೆ 14 ಚಿನ್ನದ ಪದಕ, ತಂದೆ ಭಾವುಕ
ಕಲಬುರಗಿ, ಜೂನ್ 20; ಗುಲಬರ್ಗಾ ವಿಶ್ವವಿದ್ಯಾಲಯದ ಘಟಿಕೋತ್ಸವ ನಡೆಯಿತು. ಎಂಎ (ಕನ್ನಡ) ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿಶ್ವವಿದ್ಯಾಲಯದಲ್ಲಿಯೇ ಅತಿ ಹೆಚ್ಚು ಚಿನ್ನದ ಪಡೆದ ಕೀರ್ತಿಗೆ ಪಾತ್ರರಾದರು. ಮಗಳ ಸಾಧನೆ ಕಂಡು ತಂದೆ ಭಾವುಕರಾದರು.
ಸೋಮವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ. ಬಿ. ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ 41ನೇ ಘಟಿಕೋತ್ಸವ ನಡೆಯಿತು. ಗುಲಬರ್ಗಾ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆಯ ಕಲಬುರಗಿ ತಾಲೂಕಿನ ಆಲಗೂಡ ಮೂಲದ ಎಂಎ (ಕನ್ನಡ) ವಿಭಾಗದ ವಿದ್ಯಾರ್ಥಿನಿ ರುಕ್ಮಿಣಿ ಹಣಮಂತ್ರಾಯ 14 ಚಿನ್ನದ ಪದಕ ಪಡೆದು ವಿವಿ ಯಲ್ಲಿಯೇ ಅತೀ ಹೆಚ್ಚು ಚಿನ್ನದ ಪಡೆದ ಕೀರ್ತಿಗೆ ಪಾತ್ರರಾದರು. ಅವರು ಈಗಾಗಲೇ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು, ನೇಮಕಾತಿ ಪತ್ರ ಇನ್ನಷ್ಟೇ ಬರಬೇಕಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದೆ ಸಾಗುವ ಗುರಿಯನ್ನು ಚಿನ್ನದ ಹುಡುಗಿ ಹೊಂದಿದ್ದಾರೆ.
ಭಾವುಕರಾದ ತಂದೆ; ರುಕ್ಮಿಣಿ ಹಣಮಂತ್ರಾಯ ಸಾಧನೆ ಕಂಡು ತಂದೆ ಹಣಮಂತ್ರಾಯ ಭಾವುಕರಾದರು. ಅವರು ಮಾತನಾಡಿ, "ನಾನು 3ನೇ ತರಗತಿ ತನಕ ಶಾಲಿ ಕಲ್ತೀನ್ರಿ. 4 ಜನ ಹೆಣ್ಮಕ್ಳು, ಒಬ್ಬ ಗಂಡು ಹುಡುಗ ಇದಾನ್ರೀ. ರುಕ್ಮಿಣಿ ಕೊನೆಯವಳ್ರಿ. ನನಗೇನ್ ಹೆಚ್ಚಿಗ್ ಗೊತ್ತಿಲ್ರಿ. ಕೆಲಸ ಹುಡಕೊಂಡು ಊರು ಬಿಟ್ಟು ಹೋಗಿದ್ದೆ. ಇಜೇರಿ ಪ್ರಾಥಮಿಕ ಆರೋಗ್ಯ ಕೇಂದ್ರಲ್ಲಿ ಪಿವನ್ ಕೆಲಸ ಸಿಕ್ತು. 2 ವರ್ಷದ ಹಿಂದೆ ರಿಟೈರ್‍ಮೆಂಟ್ ಆಗೀನ್ರಿ. ಮಗಳು ಓದ್ಯಾಳ್ರಿ" ಎಂದು ಕಣ್ತುಂಬಿಕೊಂಡರು.
ವಿದ್ಯಾರ್ಥಿನಿ ರುಕ್ಮಿಣಿ ಮಾತನಾಡಿ, "ತಮ್ಮ ಈ ಸಾಧನೆಗೆ ಉಪನ್ಯಾಸಕರ ಮಾರ್ಗದರ್ಶನ ಮತ್ತು ತಂದೆ-ತಾಯಿಯವರ ಮತ್ತು ಕುಟುಂಬಸ್ಥರ ಸಹಕಾರವೇ ಇದಕ್ಕೆ ಕಾರಣ. ವಿವಿಯಲ್ಲಿನ ಗ್ರಂಥಾಲಯಗಳು ತುಂಬಾ ನೆರವಿಗೆ ಬಂದಿವೆ. ತಾವು ಬಿಎಡ್ ಸಹ ಮಾಡಿದ್ದರಿಂದ ಈಗಾಗಲೇ ಶಿಕ್ಷಕಿ ಹುದ್ದೆಗೆ ಆಯ್ಕೆಯಾಗಿದ್ದು, ಇನ್ನಷ್ಟೆ ನೇಮಕಾತಿ ಪತ್ರ ಬರಬೇಕಿದೆ" ಎಂದರು.
ಪ್ರಾಣಿಶಾಸ್ತ್ರ ವಿಭಾಗದಲ್ಲಿ 9 ಚಿನ್ನದ ಪದಕವನ್ನು ಬೀದರ್ ಮೂಲದ ಆದಿತಿ ರೆಡ್ಡಿ ಪಡೆದರು. ಅವರು ಮಾತನಾಡಿ, ಮುಂದೆ ಪಿಎಚ್‌ಡಿ ಮಾಡುವುದಾಗಿ ತಿಳಿಸಿದರು.
ಯಾದಗಿರಿ ಜಿಲ್ಲೆಯ ಸುರಪೂರ ಮೂಲದ ಬಿ.ರಾಜಶ್ರೀ ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ 7 ಚಿನ್ನದ ಪದಕವನ್ನು ಪಡೆದರು. "ತಮ್ಮ ಈ ಸಾಧನೆಯನ್ನು ತಂದೆ-ತಾಯಿ ಹಾಗೂ ತಮ್ಮ ಅಜ್ಜನಿಗೆ ಅರ್ಪಿಸುತ್ತೇನೆ. ಉಪನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವೆ" ಎಂದರು.
ರಾಜ್ಯ ಶಿಕ್ಷಣ ನೀತಿ ಜಾರಿಗೆ; ಘಟಿಕೋತ್ಸವದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ, "ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗಿ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲಾಗುವುದು" ಎಂದರು.
"ಈಗಾಗಲೇ ರಾಜ್ಯದಲ್ಲಿ ಎರಡು ವರ್ಷದ ಹಿಂದೆ ಎನ್. ಇ. ಪಿ. ಜಾರಿ ಮಾಡಲಾಗಿದೆ. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಶಿಕ್ಷಣ ತಜ್ಞರ ಸಭೆ ಕರೆದು ಸಾಧಕ-ಬಾಧಕ ಚರ್ಚಿಸಿಯೇ ಎಸ್. ಇ. ಪಿ. ಜಾರಿಗೆ ತರಲಾಗುವುದು" ಎಂದು ಹೇಳಿದರು.
"ಪ್ರಸ್ತುತ ರಾಜ್ಯದಲ್ಲಿ 32 ಸರ್ಕಾರಿ ವಿಶ್ವವಿದ್ಯಾಲಯಗಳಿದ್ದು, ಗುಲಬರ್ಗಾ ವಿವಿ ಸೇರಿದಂತೆ ಒಟ್ಟಾರೆ 15 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಉಪನ್ಯಾಸಕ ಹುದ್ದೆ ಭರ್ತಿಗೆ ಮುಂದಿನ ದಿನದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
"ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣ ಸೇರಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟಾರೆ ಶೇ.6ರಷ್ಟು ಅನುದಾನ ಆಯವ್ಯಯದಲ್ಲಿ ಹಂಚಿಕೆ ಮಾಡಲಾಗುತ್ತದೆ. ಇದರಲ್ಲಿ ಉನ್ನತ ಶಿಕ್ಷಣಕ್ಕೆ ಲಭ್ಯವಾಗುವುದು ಶೇ.1.70 ರಷ್ಟು ಮಾತ್ರ. ಹಂಚಿಕೆಯಾದ ಅನುದಾನದಲ್ಲಿ ಶೇ.88ರಷ್ಟು ಉಪನ್ಯಾಸಕರ ಸಂಬಳಕ್ಕೆ ವಿನಿಯೋಗಿಸಲಾಗುತ್ತಿದೆ" ಎಂದು ತಿಳಿಸಿದರು.
"ಇನ್ನು ರಾಜ್ಯದಲ್ಲಿ ಕಳೆದ 10 ವರ್ಷದಿಂದ ಇಲಾಖೆಗೆ ಹಂಚಿಕೆಯಾಗುವ ಅನುದಾನದಲ್ಲಿ ಹೆಚ್ಚಳ ಮಾಡಿಲ್ಲ. ಇದರಿಂದ ಶೈಕ್ಷಣಿಕ ಚಟುವಟಿಕೆ ಗುಣಪಡಿಸಲು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಬರುವಂತಹ ಆಯವ್ಯಯದಲ್ಲಿ ಇಲಾಖೆಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ" ಎಂದರು.
"ಉನ್ನತ ಶಿಕ್ಷಣ ಸುಧಾರಣೆ ಮತ್ತು ವಿವಿ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ತಾವು ಸಚಿವರಾದ ನಂತರ ರಾಜ್ಯದ ವಿವಿ ಕುಲಪತಿಗಳೊಂದಿಗೆ ಒಂದು ಸುತ್ತಿನ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ವಿವಿ ಯಲ್ಲಿನ ನೇಮಕಾತಿ, ಶೈಕ್ಷಣಿಕ ಕ್ಷೇತ್ರದ ಬಲವರ್ಧನೆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ವಿಸಿಗಳ ಸಭೆ ಕರೆದು ಅದಕ್ಕೆ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ಭರವಸೆ ನೀಡಿದರು.












Click it and Unblock the Notifications