ಅನುಕಂಪದ ಮೇಲೆ ಎರಡೇ ದಿನದಲ್ಲಿ ನೌಕರಿ ನೀಡಿ ಮಾನವೀಯತೆ ಮೆರೆದ ಕಲಬುರಗಿ ಡಿಸಿ
ಕಲಬುರಗಿ, ಜನವರಿ 29: ಸರ್ಕಾರಿ ನೌಕರಿಯಲ್ಲಿರುವ ಗಂಡ ಮೃತಪಟ್ಟರೆ ಅನುಕಂಪದ ಅಧಾರದ ಮೇಲೆ ಪತ್ನಿ ಅಥವಾ ಪುತ್ರನಿಗೆ ನೌಕರಿ ನೀಡಲಾಗುತ್ತದೆ. ಇದನ್ನು ಪಡೆಯಲು ಹಿರಿಯ ಅಧಿಕಾರಿಗಳು ಹಾಗೂ ರಾಜಕಾರಣಿಗಳ ಮನೆ ಬಾಗಿಲಿಗೆ ಹತ್ತಾರು ಬಾರಿ ಅಲೆದಾಡಬೇಕಾಗುತ್ತದೆ.
ಇನ್ನು ಸಣ್ಣ ಕೆಲಸಕ್ಕೂ ಸರ್ಕಾರಿ ಹಲವು ಬಾರಿ ಓಡಾಡಿದರೂ ಕೆಲಸವಾಗದೇ ಅನೇಕರು ಪರದಾಡುವ ಘಟನೆಗಳು ನಡೆಯುತ್ತಿವೆ. ಆದರೆ ಕಲಬುರಗಿ ಜಿಲ್ಲಾಧಿಕಾರಿ ನಡೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ತನ್ನ ಪತಿ ಮೃತರಾದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಕೇವಲ ಎರಡೇ ದಿನದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್. ವಿ. ಗುರುಕರ್ ಉದ್ಯೋಗ ನೀಡಿ, ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ. ಆ ಮೂಲಕ ಕಲಬುರಗಿ ತಾಲೂಕಿನ ಕುಸನೂರು ಗ್ರಾಮದ ಶಿವಲಿಂಗಮ್ಮ ಎಂಬುವವರು ಗಂಡ ದಿ. ಮಾಳಿಂಗರಾಯ ಅವರ ನೌಕರಿ ಪಡೆದಿದ್ದಾರೆ.

ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಜನವರಿ 25ರಂದು ತಮ್ಮ ಕಚೇರಿ ಮುಂದೆ ಇಬ್ಬರು ಮಕ್ಕಳೊಂದಿಗೆ ಕಾದು ಕುಳಿತಿರುವುದನ್ನು ಕಂಡು ಸ್ವತಃ ಜಿಲ್ಲಾಧಿಕಾರಿಗಳೇ ಮಹಿಳೆಯ ಬಳಿ ತೆರಳಿದರು.
ಏನು ನಿಮ್ಮ ಸಮಸ್ಯೆ? ಎಂದು ಕೇಳಿದಾಗ, ತನ್ನ ಗಂಡ ಆಳಂದ ತಾಲ್ಲೂಕಿನ ಖಜೂರಿ ನಾಡಾ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದು, ಕರ್ತವ್ಯದಲ್ಲಿದ್ದಾಗ ದಿನಾಂಕ: 16-03-2021ರಂದು ಹೃದಯ ಸಂಬಂಧಿ ಕಾಯಿಲೆಯಿಂದ ಮೃತಪಟ್ಟಿದ್ದು, ಅನುಕಂಪ ಆಧಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಕೂಡಲೇ ಜಿಲ್ಲಾಧಿಕಾರಿಗಳು, ಈ ಮಹಿಳೆಗೆ 2 ದಿನದಲ್ಲಿ ನೌಕರಿ ಆದೇಶ ನೀಡಲು ಕ್ರಮವಹಿಸಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದೀಗ ಇಂದು ಮಹಿಳೆ ಕೋರಿದ ಸ್ಥಳವಾದ ಕಲಬುರಗಿ ತಹಶೀಲ್ದಾರ ಕಚೇರಿಯ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ನೇಮಕಾತಿಯ ಆದೇಶ ನೀಡಿ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಮಾನವೀಯತೆ ಮೆರೆದಿದ್ದಾರೆ.












Click it and Unblock the Notifications