ರೈತ ಹೋರಾಟಗಾರ ಸಿಪಿಎಂ ಮುಖಂಡ ಮಾರುತಿ ಮಾನ್ಪಡೆ ನಿಧನ
ಕಲಬುರ್ಗಿ, ಅಕ್ಟೋಬರ್ 20: ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ರಾಜ್ಯ ಸಿಪಿಎಂ ಮುಖಂಡ ಮತ್ತು ರೈತ ಹೋರಾಟಗಾರ ಮಾರುತಿ ಮಾನ್ಪಡೆ (65) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಮಾರುತಿ ಮಾನ್ಪಡೆ ಅವರು ಅಕ್ಟೋಬರ್ 3ರಂದು ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಅವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಾರದ ಹಿನ್ನೆಲೆಯಲ್ಲಿ ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಕಳೆದ ಮೂರು ದಿನಗಳಿಂದ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಫಲಕಾರಿಯಾಗದೆ ಅವರು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಮೃತಪಟ್ಟಿದ್ದಾರೆ.
ಸಿಪಿಐ (ಎಂ) ಪಕ್ಷದ ಸದಸ್ಯರಾಗಿದ್ದ ಅವರು ಅನೇಕ ರೈತ ಹೋರಾಟಗಳನ್ನು ಸಂಘಟಿಸಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಬೆಂಗಳೂರು, ಕಲಬುರಗಿ ಸೇರಿದಂತೆ ಅನೇಕ ಕಡೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಿರುದ್ಧ ವಿವಿಧ ಹೋರಾಟಗಳನ್ನು ರೂಪಿಸಿದ್ದರು.
ಸುಮಾರು ನಾಲ್ಕು ದಶಕಗಳಿಂದ ರೈತ ಹೋರಾಟಗಳಲ್ಲಿ ತೊಡಗಿದ್ದ ಮಾರುತಿ ಮಾನ್ಪಡೆ ಅವರು ಪತ್ನಿ ಮತ್ತು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ.