ಮನೆಗೆ ಮಾತ್ರೆ ತಲುಪಿಸಿ ಹೃದಯ ಗೆದ್ದ ಕೊರೊನಾ ಸೈನಿಕರು
ಕಲಬುರಗಿ, ಏಪ್ರಿಲ್ 15: ಕಲಬುರಗಿಯ ಕೊರೊನಾ ವಾರಿಯರ್ಸ್ ಮೂತ್ರಪಿಂಡ ಹಾಗೂ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ಇಬ್ಬರು ರೋಗಿಗಳಿಗೆ ತುರ್ತಾಗಿ ಬೇಕಾಗಿರುವ ಮಾತ್ರೆಗಳನ್ನು ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ (67) ಎಂಬ ವೃದ್ದೆಗೆ ಒಂದು ವರ್ಷದ ಹಿಂದೆ ಮೂತ್ರಪಿಂಡ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಇವರು ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ನಿಂಬರಗಾ ಗ್ರಾಮಕ್ಕೆ ಕೊರೊನಾ ಸೈನಿಕರಾದ ನಾಗರಾಜ್ ತಲುಪಿಸಿದ್ದಾರೆ.
ಸೇಡಂ ತಾಲೂಕಿನ ಹಂಗನಳ್ಳಿ ಗ್ರಾಮದ ನಾಗಮ್ಮ (58) ಎಂಬ ವೃದ್ದೆಗೆ ಆರು ತಿಂಗಳ ಹಿಂದೆಯೆ ಅತೀಯಾದ ರಕ್ತದೊತ್ತಡ ಇರುವ ಪ್ರಯುಕ್ತ ಗುಲಬರ್ಗಾ ಹಾರ್ಟ್ ಫೌಂಡೇಶನ್ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಇವರಿಗೆ ವೈದ್ಯರು ಆರು ತಿಂಗಳು ತಪ್ಪದೇ ಮಾತ್ರೆಗಳನ್ನು ಸೇವಿಸಲು ತಿಳಿಸಿದ್ದರು.

ಲಾಕ್‍ಡೌನ್ ಪ್ರಯುಕ್ತ ಇವರು ಕಲಬುರಗಿಗೆ ಬಂದು ಮಾತ್ರೆಗಳನ್ನು ಪಡೆಯಲು ಅಸಾಧ್ಯವಾಗಿತ್ತು. ಕೊರೊನಾ ಸೈನಿಕರಾದ ಹರ್ಷಲ್ ನಾಗರೇ ಮತ್ತು ರಾಜು ಜೇವರ್ಗಿ ಅವರು ತಮ್ಮ ಸ್ವಂತ ವಾಹನದಲ್ಲಿ ಹಂಗನಳ್ಳಿ ಗ್ರಾಮಕ್ಕೆ ಹೋಗಿ ಮಾತ್ರೆ ತಲುಪಿಸಿದ್ದಾರೆ.
ಕಸ್ತೂರಿಬಾಯಿ ಮೊಮ್ಮಗ ಹಾಗೂ ನಾಗಮ್ಮ ಅವರ ಪುತ್ರಿ ಕರ್ನಾಟಕ ಕೊರೊನಾ ಸೈನಿಕರ ತಂಡದ ವಾಟ್ಸ್‌ಅಪ್ ಗ್ರೂಪ್‍ನಲ್ಲಿ ಲಾಕ್‍ಡೌನ್ ಇರುವ ಪ್ರಯುಕ್ತ ಮಾತ್ರೆಗಳನ್ನು ಪೂರೈಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕಲಬುರಗಿ ಕೊರೊನಾ ಸೈನಿಕರು ಮಾತ್ರೆಗಳನ್ನು ತಲುಪಿಸುವ ಕೆಲಸ ಮಾಡಿದ್ದಾರೆ.












Click it and Unblock the Notifications