ಕಲಬುರಗಿ; ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ತಡೆಯಲು ಡಿಸಿ ಖಡಕ್ ಸೂಚನೆ
ಕಲಬುರಗಿ, ಸೆಪ್ಟೆಂಬರ್ 06; ಕಲಬುರಗಿ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಸಾಗುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಕಡಿವಾಣ ಹಾಕಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಅಕ್ರಮ ಮರಳು ಮಾಫಿಯಾ ಕೆಲವು ತಿಂಗಳ ಹಿಂದೆ ಪೊಲೀಸ್ ಅಧಿಕಾರಿಯನ್ನು ಜಿಲ್ಲೆಯಲ್ಲಿ ಹತ್ಯೆ ಮಾಡಿತ್ತು.
ಬಿ. ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್, ಜಿಲ್ಲಾ ಮರಳು ಸಮಿತಿ ಹಾಗೂ ಜಿಲ್ಲಾ ಕಲ್ಲುಪುಡಿ ಘಟಕಗಳ ಪರವಾನಿಗೆ ಮತ್ತು ನಿಯಂತ್ರಣ ಸಮಿತಿಗಳ ಸಭೆಯನ್ನು ನಡೆಸಿದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.

ಜಿಲ್ಲಾಧಿಕಾರಿಗಳು ಮಾತನಾಡಿ, " ಕಂದಾಯ, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ, ಆರ್‌ಟಿಓ, ಪರಿಸರ ನಿಯಂತ್ರಣ ಮಂಡಳಿ ಹೀಗೆ ಎಲ್ಲಾ ಇಲಾಖೆ ಅಧಿಕಾರಿಗಳು ಸಂಘಟಿತವಾಗಿ ಗಸ್ತು ಮಾಡುವ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣ, ಸಾಗಟದ ನಿಯಂತ್ರಣಕ್ಕೆ ಮುಂದಾಗಬೇಕು" ಎಂದು ನಿರ್ದೇಶನ ಕೊಟ್ಟರು.
ತಾಲೂಕು ಹಂತದಲ್ಲಿ ಸಮಿತಿ ರಚನೆ; ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಬೇಕು. ಪರವಾನಿಗೆ, ರಾಯಲ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ತಪಾಸಣೆ ಮಾಡಬೇಕು. ಅತಿಭಾರದೊಂದಿಗೆ ಸಾಗುವ ವಾಹನಗಳಿಗೆ ದಂಡ ಹಾಕುವುದಲ್ಲದೇ ಎಫ್‌ಐಆರ್ ದಾಖಲಿಸಬೇಕು. ಇನ್ನು ತಾಲೂಕು ಹಂತದಲ್ಲಿ ಸಹಾಯಕ ಆಯುಕ್ತರ ಸಮಿತಿ ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ನಿಗಾ ವಹಿಸಬೇಕು ಎಂದರು.
ಸಭೆಯಲ್ಲಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ರೋಹಿತ್, "ಜಿಲ್ಲೆಯಲ್ಲಿ ಕಲ್ಲುಪುಡಿ ಘಟಕ ತೆರೆಯಲು ಹೊಸದಾಗಿ 6 ಅರ್ಜಿ ಸಲ್ಲಿಕೆಯಾಗಿವೆ" ಎಂದರು. ಮಾನದಂಡಗಳನ್ವಯ ಪರಿಶೀಲಿಸಿ ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಚಿವರು ಸೂಚಿಸಿದ್ದರು; ಕೆಲವು ದಿನಗಳ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಹ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಜಿಲ್ಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಅಕ್ರಮ ಮರಳು ಸಂಗ್ರಹಣೆ ಮತ್ತು ಮಾರಾಟ, ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದರು.
"ಇನ್ನು ಮುಂದೆ ಅಕ್ರಮ ಮರಳು, ಕಲ್ಲು ಗಣಗಾರಿಕೆ ಕುರಿತು ಯಾವುದೇ ದೂರು ಬಂದಲ್ಲಿ ಪೊಲೀಸ್, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು" ಎಂದು ಎಚ್ಚರಿಕೆಯನ್ನು ನೀಡಿದ್ದರು.
ಸಭೆಯಲ್ಲಿ ಸಚಿವರು, "ಅಕ್ರಮ ಮರಳು ಮಾಫಿಯಾಗಿ ಇತ್ತೀಚೆಗೆ ನೆಲೋಗಿ ಪೊಲೀಸ್ ಠಾಣೆಯ ಮಯೂರ್ ಚವ್ಹಾಣ್ ಸಾವನಪ್ಪಿದ್ದು, ಅವರು ಕುಟಂಬದ ಆಧಾರ ಸ್ಥಂಬವೇ ಇಲ್ಲದಂತಾಗಿದೆ. ನಿಮ್ಮ ಇಲಾಖೆಯ ಓರ್ವ ಸಿಬ್ಬಂದಿ ಮಾಫಿಯಾಗೆ ಬಲಿಯಾಗಿದ್ದಾನೆ. ರಾಜಕೀಯ ನಾಯಕರು, ಪೊಲೀಸ್ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳ ಶ್ರೀರಕ್ಷೆ ಇಲ್ಲದೆ ಇದೆಲ್ಲ ನಡೆಯಲ್ಲ. ಇದಕ್ಕೆ ಕಡಿವಾಣ ಹಾಕಲೇಬೇಕು" ಎಂದು ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳಿಗೆ ಸಚಿವರು ಹೇಳಿದ್ದರು.
ಈ ಸಭೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ, ಕಲ್ಲು ಗಣಿಗಾರಿಕೆಯಲ್ಲಿ ಭಾಗಿಯಾಗುವ ವಾಹನಗಳನ್ನು ಆರ್‌ಟಿಓ ಅಧಿಕಾರಿಗಳು ಸೀಜ್ ಮಾಡಬೇಕು. ರಾಯಲ್ಟಿಕ್ಕಿಂತ ಹೆಚ್ಚಿನ ಟ್ರಿಪ್ ಸಾಗಾಣಿಕೆಯಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಚರ್ಚೆ ಮಾಡಲಾಗಿತ್ತು.
ಅಕ್ರಮ ಅಕ್ಕಿ ಸಾಗಾಣಿಕೆ ಮೇಲೂ ನಿಗಾ ಇಡಬೇಕು. ಓವರ್ ಲೋಡೆಡ್ ವಾಹನಗಳನ್ನು ವಶಕ್ಕೆ ಪಡೆಯಬೇಕು. ಸಿಮೆಂಟ್ ಕಾರ್ಖಾನೆಗಳಿಗೆ ಈ ಸಂಬಂಧ ಪತ್ರ ಬರೆದು ಎಚ್ಚರಿಕೆ ನೀಡಬೇಕು. ಓವರ್ ಲೋಡೆಡ್ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗುತ್ತಿದೆ ಎಂದು ಚರ್ಚೆ ನಡೆದಿತ್ತು.












Click it and Unblock the Notifications