ಕಲಬುರಗಿ: ಕಾಂಗ್ರೆಸ್ ಕುಡಿಯಲು ಶುದ್ಧ ನೀರು ಕೊಡಲು ಲಾಯಕ್ಕಿಲ್ಲ
ಕಲಬುರ್ಗಿ, ಏಪ್ರಿಲ್ 28: ಕಾಂಗ್ರೆಸ್ ಆಡಳಿತದಲ್ಲಿ ಈ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿತ್ತು. ಇಲ್ಲಿನ ನಲ್ಲಿಗಳಲ್ಲಿ ಯುಜಿಡಿ ನೀರು ಬರುವುದನ್ನು ಅಂದು ಕಂಡಿದ್ದೇನೆ. ಕಾಂಗ್ರೆಸ್ ನಾಯಕರು ಕುಡಿಯುವ ಶುದ್ಧ ನೀರು ಕೊಡಲೂ ಲಾಯಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶುಕ್ರವಾರ ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಪರವಾಗಿ ಪ್ರಚಾರ ಕಾರ್ಯ ನಡೆಸಿದರು. ಜೋರು ಮಳೆಯ ನಡುವೆಯು ಅವರು ಕೊಡೆ ಹಿಡಿದು ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೊಡ್ಡ ಪ್ರಮಾಣದ ಅನುದಾನ ನೀಡಿ ಜಿಲ್ಲೆ ವ್ಯಾಪ್ತಿಯ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸಲಾಗಿದೆ. ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕರು ಈ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ. ಜಾತಿ ಮತ ಪಂಥ ಎಲ್ಲ ಬೇಧವನ್ನು ಮರೆತು ಕಲಬುರಗಿ ಉತ್ತರದ ಸಮಗ್ರ ಅಭಿವೃದ್ಧಿ ಗೆ ಬಿಜೆಪಿಗೆ ಬೆಂಬಲಿಸಬೇಕು.
ಕಲಬುರಗಿಯ ಉತ್ತರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ನಮ್ಮ ಚಂದು ಪಾಟೀಲ್ ಶಾಸಕರಲ್ಲದೆಯೂ ಈ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಪಡೆದುಕೊಳ್ಳಲು ನನ್ನ ಬಳಿ ಬರುತ್ತಿದ್ದರು. ಅವರಿಗೆ ಅಭಿವೃದ್ಧಿ ಮಾಡಬೇಕೆಂಬ ಹಠ ಛಲ ಇದೆ. ಯಾವ ನಾಯಕನಿಗೆ ಹಠ, ಛಲ ಇರುತ್ತದೋ ಅವರು ಮಾತ್ರ ಅಭಿವೃದ್ಧಿ ಮಾಡಲು ಸಾಧ್ಯ ಎಂದು ಬಿಜೆಪಿ ಅಭ್ಯರ್ಥಿಯನ್ನು ಹೊಗಳಿ ಮತಯಾಚಿಸಿದರು.
ಈ ಭಾಗದ ಚಿತ್ರಣ ಬದಲು: ಸಿಎಂ ವಿಶ್ವಾಸ
ಮೇ 10 ರಂದು ಸಮಯ ಕಳೆದುಕೊಂಡರೆ ಐದು ವರ್ಷ ಮತ್ತೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ನೀವು ಚಂದು ಪಾಟೀಲರನ್ನು ವಿಧಾನಸಭೆಗೆ ಕಳುಹಿಸಿ, ಈ ಕ್ಷೇತ್ರಕ್ಕೆ ಬೇಕಾಗುವ ಎಲ್ಲ ಅನುದಾನ ನಾವು ನೀಡುತ್ತೇವೆ. ಈ ವರ್ಷ ನಾವು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಐದು ಸಾವಿರ ಕೋಟಿ ರೂ. ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡದೇ ನಿರಂತರ ನಿರ್ಲಕ್ಷ್ಯ, ಮೋಸ, ಭ್ರಷ್ಟಾಚಾರ ಮಾಡುತ್ತಾ ಬಂದಿದೆ. ನಮ್ಮ ಶಾಸಕರು ಅನುದಾನ ತಂದು ಇಡೀ ಕಲ್ಯಾಣ ಕರ್ನಾಟಕದ ಚಿತ್ರಣ ಬದಲಿಸಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಲಬುರಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿದೆ
ಕಲಬುರಗಿ ನಗರಕ್ಕೆ ಉಜ್ವಲ ಭವಿಷ್ಯವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುತ್ತದೆ. ನಮ್ಮ ಪ್ರಧಾನಿಗಳು ಈ ಪ್ರದೇಶದ ಅಭಿವೃದ್ಧಿಗೆ ಮೆಗಾ ಟೆಕ್ಸ್ ಟೈಲ್ ಪಾರ್ಕ್ ಮಂಜೂರಾತಿ ಮಾಡಿದ್ದಾರೆ. 50 ಸಾವಿರ ಕೋಟಿ ಬಂಡವಾಳ ಹರಿದು ಬರಲಿದೆ. ಇದರಿಂದ ಒಂದು ಲಕ್ಷ ಯುವಕ ಯುವತಿಯರಿಗೆ ಉದ್ಯೋಗ ದೊರೆಯಲಿದೆ. ಅದರಲ್ಲಿ ಉತ್ತರದ ಯುಕ ಯುವತಿಯರಿಗೆ ಸಿಂಹಪಾಲು ಇರುತ್ತದೆ ಎಂದರು.
2013 ರಿಂದ 2018ರ ಅವಧಿಯ ಕಾಂಗ್ರೆಸ್ ಸರ್ಕಾರ ದೌರ್ಭಾಗ್ಯದ ಸರ್ಕಾರ. ರಾಜ್ಯದ ಜನತೆಗೆ ದೌರ್ಭಾಗ್ಯಗಳನ್ನಷ್ಟೇ ನೀಡಿದರು. ಯಾವ ಭಾಗ್ಯಗಳೂ ಜನರನ್ನು ಮುಟ್ಟಲಿಲ್ಲ. ಬರೀ ಏಜಂಟರಿಗೆ ಮಾತ್ರ ಭಾಗ್ಯ ಸಿಕ್ಕಿತ್ತು. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರತಿವ್ಯಕ್ತಿಗೆ 10 ಕೆಜಿಯಂತೆ ಒಂದು ಕುಟುಂಬಕ್ಕೆ 30 ಕೆಜಿ ಅಕ್ಕಿ ಕೊಡುತ್ತಿದ್ದೆವು. 2 ವರ್ಷ ಗರೀಬ್ ಕಲ್ಯಾಣ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿಯವರು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಮೋದಿಯವರ ಅಕ್ಕಿಗೆ ತಮ್ಮ ಫೊಟೊ ಹಾಕಿಕೊಂಡು ಪ್ರಚಾರ ಪಡೆದರು ಎಂದು ದೂರಿದರು.
ಕ್ಷೇತ್ರದಲ್ಲಿ ಬದಲಾವಣೆ ಅಗತ್ಯವಿದೆ
ಕಲಬುರಗಿ ಉತ್ತರದಲ್ಲಿ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯತೆ ಇದ್ದು, ಈ ಭಾಗದಲ್ಲಿ ಕಮಲ ಅರಳಲಿದೆ. ಇದರಿಂದ ಚಂದು ಪಾಟೀಲ್ ವಿಧಾನಸಭೆಯ ಪ್ರವೇಶ ಮಾಡುತ್ತಾರೆ. ನಾನು ಉತ್ತರ ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ನಮ್ಮ ನಾಯಕರಿಗೆ ಆಶ್ವಾಸನೆ ಕೊಟ್ಟಿದ್ದೇನೆ. ನೀವು ದಣಿವರಿಯದೇ ಇವರನ್ನು ಗೆಲ್ಲಿಸಿಕೊಂಡು ಬಂದು ವಿಜಯೋತ್ಸವ ಮಾಡಬೇಕು. ಕಾಂಗ್ರೆಸ್ ನಿಂದ ಕಲಬುರಗಿಗೆ ಕಾರ್ಮೊಡ ಕವಿದಿದೆ. ಇಲ್ಲಿ ಚಂದ್ರನ ದರ್ಶನ ಆಗಬೇಕು ಎಂದು ಅವರು ಹೇಳಿದರು.












Click it and Unblock the Notifications