ಚಿತ್ತಾಪುರ: ಬಿಜೆಪಿ ಪರ ಮತ ಹಾಕಿಸಿದ ಆರೋಪ; ಬೂತ್ ಮಟ್ಟದ ಅಧಿಕಾರಿ ಬದಲಾವಣೆ
ಕಲಬುರಗಿ, ಮೇ 10: ಇಂದು (ಬುಧವಾರ, ಮೇ 10) 2023ರ ವಿಧಾನಸಭೆ ಚುನಾವಣೆಗೆ ಕರ್ನಾಟಕದ ಎಲ್ಲ 224 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ರಾಜ್ಯದ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಇನ್ನು ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಮತ ಹಾಕಿಸುತ್ತಿದ್ದಾರೆ ಎನ್ನುವ ಆರೋಪದ ಮೇರೆಗೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಚಾಮನೂರು ಗ್ರಾಮದಲ್ಲಿನ ಮತಗಟ್ಟೆ ಬೂತ್ ಮಟ್ಟದ ಅಧಿಕಾರಿ (ಬಿಎಲ್ಓ)ಯನ್ನು ಬದಲಾವಣೆ ಮಾಡಲಾಗಿದೆ.

ಚಾಮನೂರು ಮತಗಟ್ಟೆ ಚುನಾವಣಾ ಸಿಬ್ಬಂದಿ ವಿರುದ್ಧ ಕಾಂಗ್ರೆಸ್ ಏಜೆಂಟ್ ಆಕ್ಷೇಪಣೆ ವ್ಯಕ್ತಪಡಿಸಿದ ಹಿನ್ನೆಲೆ ಕೂಡಲೇ ಮತಗಟ್ಟೆಯ ಓರ್ವ ಬೂತ್ ಮಟ್ಟದ ಅಧಿಕಾರಿಯನ್ನು ಚುನಾವಣಾ ಮೇಲಾಧಿಕಾರಿಗಳು ಬದಲಾವಣೆ ಮಾಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರವು ರಾಜ್ಯದ ಜಿದ್ದಾಜಿದ್ದಿನಿಂದ ಕೂಡಿದ್ದು, ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್‌ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುತ್ತಿದ್ದಾರೆ.
ಇನ್ನು ಬಿಜೆಪಿಯಿಂದ 26 ವರ್ಷದ ಮಣಿಕಂಠ ರಾಠೋಡ್ ಅವರು ಮೊದಲ ಬಾರಿ ವಿಧಾನಸಭೆ ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿಯಿಂದ ಕೂಡಿದೆ.
ಚಿತ್ತಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ರಾಷ್ಟ್ರೀಯ ನಾಯಕರು ತಮ್ಮ ಅಭ್ಯರ್ಥಿಯ ಪರವಾಗಿ ಅಬ್ಬರದ ಪ್ರಚಾರ ನಡೆಸಿದ್ದರು. ಅಂತಿಮವಾಗಿ ಈ ಬಾರಿ ಕ್ಷೇತ್ರದ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಆರಂಭವಾಗಿದ್ದು, ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. 224 ಕ್ಷೇತ್ರ, 2,615 ಅಭ್ಯರ್ಥಿಗಳ ಹಣೆ ಬರಹವನ್ನು ರಾಜ್ಯದ 5,31,33,054 ಮತದಾರರು ನಿರ್ಧರಿಸಲಿದ್ದಾರೆ.












Click it and Unblock the Notifications