PU Exam: ಕಾಪಿ ಮಾಡಲು ಬಿಟ್ಟಿಲ್ಲವೆಂದು ಪೊಲೀಸ್ ಪೇದೆ ಮೇಲೆ ಹಲ್ಲೆ: ವಿಡಿಯೋ ವೈರಲ್
ಕಲಬುರಗಿ, ಮಾರ್ಚ್ 22: ಪರೀಕ್ಷೆ ವೇಳೆ ಕಾಪಿ ಮಾಡಲು ಅವಕಾಶ ನೀಡಲಿಲ್ಲ ಎಂದು ಇಬ್ಬರು ವ್ಯಕ್ತಿಗಳು ಪೊಲೀಸ್ ಮುಖ್ಯ ಪೇದೆ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಲಾಠಿ ಕಸಿದು, ಕಲ್ಲಿನಿಂದ ಹೊಡೆದ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಕರಜಗಿ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಮಾರ್ಚ್ 20ರಂದು ಹಲ್ಲೇ ಮಾಡಿದ ಆರೋಪಿಗಳ ಪೈಕಿ ಒಬ್ಬರ ಸಹೋದರಿಯ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಈ ಆಕೆಯ ಅಣ್ಣ ತಾನು ತಂಗಿಗೆ ಸಹಾಯ ಮಾಡಲು ಮುಂದಾಗಿದ್ದ. ಈ ವೇಳೆ ಆತನನ್ನು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ತಡೆದಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಸಹೋದರ ಪೋಲಸ್ ಅಂತಲೂ ನೋಡದೇ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ
ಘಟನೆ ದಿನ ಪರೀಕ್ಷಾ ಕೇಂದ್ರದ ಬಳಿ ಹೆಡ್ ಕಾನ್ಸ್‌ಟೇಬಲ್ ಪಂಡಿತ್ ಪಾಂಡ್ರೆ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕೈಲಾಸ ಸಕ್ಕರಗಿ ಎಂಬಾತ ಪೊಲೀಸ್ ಸಿಬ್ಬಂದಿ ಬಳಿ ತೆರಳಿ ನನ್ನ ತಂಗಿ ಪರೀಕ್ಷೆಗೆ ಕುಳಿತಿದ್ದಾಳೆ. ಹೀಗಾಗಿ ನನಗೆ ಒಳಗಡೆ ಹೋಗಲು ಬಿಡಿ ಎಂದು ಕಿರಿ ಕಿರಿ ಮಾಡಿದ್ದಾನೆ. ಆದರೆ, ಸಿಬ್ಬಂದಿ ಆತನ ಮಾತನ್ನು ನಿರ್ಲಕ್ಷಿಸಿದ್ದಾರೆ.
'ನೀವೇನು ದೊಡ್ಡ ನೌಕರಿ ಮಾಡುತ್ತಿದ್ದಿಯಾ ನಮಗೆ ಒಳಗಡೆ ಹೋಗಲು ಬಿಡು, ಇಲ್ಲವಾದರೆ ನಿನಗೆ ಬೇರೆನೇ ಮಾಡಬೇಕಾಗುತ್ತದೆ ನೋಡು' ಎಂದು ಪೊಲೀಸ್ ಸಿಬ್ಬಂದಿಗೆ ಈ ಸಹೋದರ ಧಮ್ಮಿ ಹಾಕಿದ್ದಾನೆ. ಒಳಗಡೆ ಬಿಡಲು ಆಗುವುದಿಲ್ಲ ಎಂದರೂ ಒಳಪ್ರವೇಶಿಸಲು ಯತ್ನಿಸಿದ್ದಾನೆ.
ಪೇದೆ ಲಾಠಿ ಕಸಿದ ಹಲ್ಲೆ
ಪರೀಕ್ಷಾ ಕೇಂದ್ರದ ಒಳಗಡೆ ನುಗ್ಗಲು ಯತ್ನಿಸಿ ದ್ದರಿಂದ ಆತನನ್ನು ತಡೆಯಲಾಗಿದೆ. ಈ ವೇಳೆ ಕರ್ತವ್ಯನಿರತ ಪೋಲಿಸ್ ಸಿಬ್ಬಂದಿಯ ಲಾಠಿ ಕಸಿದುಕೊಂಡು ಆರೋಪಿಗಳಾದ ಕೈಲಾಸ ಸಕ್ಕರಗಿ ಹಾಗೂ ಸಮೀರ ನಡುವಿನಕೇರಿ ಸೇರಿಕೊಂಡು ಪೊಲೀಸ್ ಮೇಲೆ ಹಲ್ಲೆ ಮಾಡಿದ್ದಾರೆ.
ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಘಟನೆ ಬಗ್ಗೆ ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಗಳಾದ ಕೈಲಾಸ ಸಕ್ಕರಗಿ ಹಾಗೂ ಸಮೀರ ನಡುವಿನಕೇರಿ ಇಬ್ಬರನ್ನು ಪೊಲೀರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.












Click it and Unblock the Notifications