Kagwad Election: ಬಿಜೆಪಿ-ಕಾಂಗ್ರೆಸ್‌ಗೆ ನೇರ ಪೈಪೋಟಿ, ಕಾಗವಾಡ ಮರಳಿ ಪಡೆಯುತ್ತಾ ಕಾಂಗ್ರೆಸ್?
ಬೆಂಗಳೂರು, ಮಾರ್ಚ್ 25: ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಮಲ ಅರಳಿದ್ದು, ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಅವರ ಆಡಳಿತವಿದೆ. 2023ರ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್-ಬಿಜೆಪಿಯು ತೀವ್ರ ಪೈಪೋಟಿ ಎದರಿಸಲಿವೆ.
ಕರ್ನಾಟಕ ರಾಜ್ಯದ ದೊಡ್ಡ ಜಿಲ್ಲೆ ಎನ್ನಲಾಗುವ ಬೆಳಗಾವಿ ವ್ಯಾಪ್ತಿಯಲ್ಲಿ ಬರುವ 18 ವಿಧಾನಸಭಾ ಕ್ಷೇತ್ರದಲ್ಲಿ ಈ ಕಾಗವಾಡ ವಿಧಾನಸಭಾ ಕ್ಷೇತ್ರವು ಒಂದು. ಇಲ್ಲಿ ಈ ಹಿಂದಿನ ಜನಗಣತಿ ಆಧಾರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿದ್ದಾರೆ.

ಕಾಗವಾಡ ರಾಜಕೀಯ ಇತಿಹಾಸ ನೋಡುವುದಾದರೆ ಇಲ್ಲಿ ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವೇ ಸಾರ್ವಭೌಮ ವಾಗಿತ್ತು. 1962ರಿಂದ ಕಾಂಗ್ರೆಸ್ ವಿಜಯ ಸಾಧಿಸುತ್ತಾ ಕ್ಷೇತ್ರದ ಮೇಲೆ ಹಿಡಿತ ಹೊಂದಿತ್ತು. 2008 ಹಾಗೂ 2013ರ ರಲ್ಲಿ ಕಾಂಗ್ರೆಸ್ ಓಟಕ್ಕೆ ಬಿಜೆಪಿ ಬ್ರೇಕ್ ಹಾಕಿತ್ತು. ಕ್ಷೇತ್ರದಲ್ಲಿ ಬಿಜೆಪಿಗೆ ಬಲ ಇದೆ ಎಂಬುದನ್ನು ತೋರ್ಪಡಿತ್ತು. ಇದರಿಂದ ಹಿನ್ನಡೆ ಅನುಭವಿದ್ದ ಕಾಂಗ್ರೆಸ್ ಸಾಕಷ್ಟು ಪ್ರಯತ್ನಗಳ ನಂತರ 2018ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರ ಹಿಡಿಯುವಲ್ಲಿ ಸಫಲವಾಯಿತು.
ಆದರೆ ಅನಿವಾರ್ಯ ಕಾರಣಗಳಿಂದ 2019ರಲ್ಲಿ ಇದೇ ಕ್ಷೇತ್ರವು ಉಪ ಚುನಾವಣೆ ಎದುರಿಸಿತು. ಆಗ ಬಿಜೆಪಿ ಪಕ್ಷದ ಅಭ್ಯರ್ಥಿ ಹಾಲಿ ಶಾಸಕ ಶ್ರೀಮಂತ ಪಾಟೀಲ ಅವರು ಚುನಾಯಿತರಾದರು. 2018ರಲ್ಲಿ ಸ್ಪಷ್ಟ ಬಹುಮತ ಸಿಗದ ಕಾರಣ ಕಾಂಗ್ರೆಸ್‌ನಿಂದ ಸುಮಾರು 17ಮಂದಿ ಬಿಜೆಪಿಗೆ ಸೇರಿದ್ದರು. ಈ ವೇಳೆ ಶ್ರೀಮಂತ ಪಾಟೀಲ್ ಸಹ ಒಬ್ಬರು. ಈ ಕಾರಣದಿಂದ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು.
ಅಭ್ಯರ್ಥಿಗಳ ಪಕ್ಷ ಅದಲು-ಬದಲ: ಬಿಜೆಪಿಗೆ ಜಯ
ಉಪಚುನಾವಣೆಗೂ ಮುನ್ನ ಶ್ರೀಮಂತ ಪಾಟೀಲ್ ಕಾಂಗ್ರೆಸ್‌ನಲ್ಲಿದ್ದರು. ಭರಮಗೌಡ ಕಾಗೆ ಅವರು ಬಿಜೆಪಿಯಲ್ಲಿದ್ದರು. ಕಾಗವಾಡದಲ್ಲಿ 2018ರಲ್ಲಿ ಸ್ಪರ್ಧಿಸಿದ್ದರು. ಯಾವಾಗ ಆಪರೇಷನ್ ಕಮಲದ ಮೂಲಕ ಉಪಚುನಾವಣೆ ನಿಶ್ಚಿವಾಯಿತೋ ಆಗ ಆ ಚುನಾವಣೆಯಲ್ಲಿ ಅಭ್ಯರ್ಥಿಗಳು ಅವರೇ ಇದ್ದರೂ ಸಹ ಪಕ್ಷಗಳು ಮಾತ್ರ ಬದಲಾಗಿದ್ದವು. ಶ್ರೀಮಂತ ಪಾಟೀಲ್ ಕಾಂಗ್ರೆಸ್‌ನಿಂದ ಬಿಜೆಪಿ ಬಂದು ಗೆದ್ದರು. ಬಿಜೆಯಲ್ಲಿದ್ದ ಭರಮಗೌಡ ಕಾಗೆ ಅವರು ಕಾಂಗ್ರೆಸ್‌ಗೆ ಹೋದ ಬಳಿಕ ಸೋಲು ಕಂಡರು. ಇದೇ ವಿಚಾರವಾಗೇ ಈ ಕ್ಷೇತ್ರ ಸಾಕಷ್ಟು ಗಮನ ಸೆಳೆದಿತ್ತು.

ಅಭ್ಯರ್ಥಿ ಘೋಷಿಸಿದ ಸಾಹುಕಾರ್
ಈ ಬಿಜೆಪಿಯಿಂದ ಹಾಲಿ ಶಾಸಕರಿಗೇ ಟಿಕೆಟ್ ಎಂದು ಗೋಕಾಕ್ ಶಾಸಕ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇತ್ತೀಚೆಗೆ ಹೇಳಿದ್ದರು. ಈ ಸಂಬಂಧ ಬೆಳಗಾವಿಯ ಅಥಣಿಯಲ್ಲಿ ಗೌಪ್ಯ ಸ್ಥಳದಲ್ಲಿ ರಮೇಶ್ ಜಾರಕಿಹೊಳಿ ಅವರು ಸಭೆ ನಡೆಸಿದ್ದರು. ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದರ ತಂಡದ ನಾಯಕತ್ವ ವಹಿಸಿದ್ದೆ ಈ ಸಾಹುಕಾರ್ ರಮೇಶ್ ಜಾರಕಿಹೊಳಿಯವರು. ಹೀಗಾಗಿ ಅವರು ಟಿಕೆಟ್ ಬಗ್ಗೆ ಪಕ್ಷಕ್ಕೂ ಮೊದಲು ಖಚಿತ ಪಡಿಸಿದ್ದರು ಎನ್ನಲಾಗಿದೆ.
ಇತ್ತ ಕಾಂಗ್ರೆಸ್‌ನಿಂದ ಭರಮಗೌಡ ಕಾಗೆ ಅವರನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ. ಇತ್ತ ಜೆಡಿಎಸ್‌ನ ಸುಳಿವು ಇಲ್ಲ ಎನ್ನಲಾಗಿದೆ. ಗೆದ್ದು ಕಳೆದುಕೊಂಡ ಕ್ಷೇತ್ರವನ್ನು ಪುನಃ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯೋನ್ಮುಖವಾಗಿದೆ.

ಜಾತಿವಾರು ಮತದಾರರು
ಕ್ಷೇತ್ರದಲ್ಲಿ 2011ರ ಜಾತಿ ಜನಗಣತಿ ಪ್ರಕಾರ, ಪರಿಶಿಷ್ಟ ಜಾತಿ ಸಮುದಾಯದ ಮತಗಳು ಒಟ್ಟು ಶೇಕಡಾ 16.29ರಷ್ಟಿದೆ. ಪರಿಶಿಷ್ಟ ಪಂಗಡದ ಮತಗಳು ಶೇ.3.35ರಷ್ಟಿದೆ. ಉಳಿದಂತೆ ಮುಸ್ಲಿಂ ಸಮುದಾಯದ ಮತಗಳು ಶೇಕಡಾ 12.5ರಷ್ಟು ಇದೆ.ಲಿಂಗಾಯತ ಸೇರಿದಂತೆ ಇನ್ನಿತರ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಬಿಜೆಪಿಯಲ್ಲೂ ಸೋಲು ಮತ್ತು ಕಾಂಗ್ರೆಸ್ ಗೆ ಬಂದ ಮೇಲೂ ಸೋಲು ಕಂಡಿದ್ದ ಭರಮಗೌಡ ಕಾಗೆ ಅವರು ಕ್ಷೇತ್ರದ ತುಂಬೆಲ್ಲ ಅಬ್ಬರದ ಪ್ರಚಾರ ನಡೆಸಿದ್ದಾರೆ. ಸಾಕಷ್ಟು ಭರವಸೆ ನೀಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಇದೊಂದು ಪ್ರತಿಷ್ಠೆಯ ಮತ್ತು ಜಿದ್ದಾ ಜಿದ್ದಿಯ ಕಣವಾಗಿ ಬದಲಾಗಲಿದೆ.












Click it and Unblock the Notifications