ರಾಜಸ್ಥಾನ: ಅಶೋಕ್ ಗೆಹ್ಲೋಟ್ ಸರ್ಕಾರದಿಂದ ಬಿಟಿಬಿ ಶಾಸಕರ ಬೆಂಬಲ ವಾಪಸ್
ಜೈಪುರ, ಡಿಸೆಂಬರ್ 11: ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಬೆಂಬಲ ನೀಡಿದ್ದ ಭಾರತೀಯ ಟ್ರೈಬಲ್ ಪಾರ್ಟಿಯ (ಬಿಟಿಪಿ) ಇಬ್ಬರು ಶಾಸಕರು, ರಾಜಸ್ಥಾನ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಶುಕ್ರವಾರ ಹಿಂದಕ್ಕೆ ಪಡೆದುಕೊಂಡಿದ್ದಾರೆ.
ರಾಜಸ್ಥಾನ ಪಂಚಾಯತ್ ರಾಜ್ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ. ಚುನಾವಣೆಯಲ್ಲಿ ತಮಗೆ ಕಾಂಗ್ರೆಸ್ ಬೆಂಬಲ ನೀಡಿರಲಿಲ್ಲ ಎಂದು ಇಬ್ಬರೂ ಶಾಸಕರು ಆರೋಪಿಸಿದ್ದಾರೆ.
ರಾಜಸ್ಥಾನದ ಪಂಚಾಯತ್ ರಾಜ್ ಚುನಾವಣೆಯಲ್ಲಿ ಕಾಂಗ್ರೆಸ್ ಎದುರು ತಾನು ಜಯಭೇರಿ ಬಾರಿಸಿರುವುದಾಗಿ ಬಿಜೆಪಿ ಹೇಳಿದೆ. ರಾಜ್ಯದಾದ್ಯಂತ 4,371 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಹೊರ ಬಂದ ಫಲಿತಾಂಶದ ಆಧಾರದಲ್ಲಿ 222 ಸಮಿತಿಗಳನ್ನು ಪ್ರಕಟಿಸಲಾಗಿದೆ. 4371 ಕ್ಷೇತ್ರಗಳ ಪೈಕಿ ಬಿಜೆಪಿ 1812ರಲ್ಲಿ ಮತ್ತು ಕಾಂಗ್ರೆಸ್ 1695ರಲ್ಲಿ ಗೆದ್ದಿರುವುದಾಗಿ ಹೇಳಿಕೊಂಡಿವೆ.

ಉಪ ಮುಖ್ಯಮಂತ್ರಿಯಾಗಿದ್ದ ಸಚಿನ್ ಪೈಲಟ್ ಅವರು ಬಂಡಾಯವೆದ್ದ ಬಳಿಕ ಉಂಟಾದ ರಾಜಕೀಯ ಬಿಕ್ಕಟ್ಟಿನಲ್ಲಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ಪತನಗೊಳ್ಳುವ ಭೀತಿ ಎದುರಿಸಿತ್ತು. ಆಗಸ್ಟ್‌ನಲ್ಲಿ ರಾಜಸ್ಥಾನದ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಬಿಟಿಪಿಯ ಇಬ್ಬರು ಶಾಸಕರು ಗೆಹ್ಲೋಟ್ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಬಿಟಿಪಿಯು 2018ರಿಂದಲೂ ಅಶೋಕ್ ಗೆಹ್ಲೋಟ್ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಾ ಬಂದಿತ್ತು.
ಕಳೆದ ತಿಂಗಳು ಬಿಟಿಪಿಯ ಇಬ್ಬರು ಶಾಸಕರ ವಿರುದ್ಧ ಬಿಜೆಪಿ ಆರೋಪಿಸಿತ್ತು. ಗೆಹ್ಲೋಟ್ ಸರ್ಕಾರವನ್ನು ಬೆಂಬಲಿಸಲು ಇಬ್ಬರೂ ಶಾಸಕರು ತಲಾ ಹತ್ತು ಕೋಟಿ ರೂ ಪಡೆದಿದ್ದಾರೆ ಎಂದು ಅದು ಆರೋಪ ಮಾಡಿತ್ತು.












Click it and Unblock the Notifications