ಗೆಹ್ಲೋಟ್-ಪೈಲಟ್ ನಡುವೆ ಮುಂದುವರಿದ ಮುಸುಕಿನ ಗುದ್ದಾಟ
ಜೈಪುರ ಜೂನ್ 1: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
ರಾಜಸ್ಥಾನ ಜೈಪುರದಲ್ಲಿ ನಡೆಯುತ್ತಿರುವ ಎರಡು ದಿನಗಳ ಕಾಂಗ್ರೆಸ್ ಕಾರ್ಯಾಗಾರಕ್ಕೂ ಮುನ್ನ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಸಚಿನ್ ಪೈಲಟ್, "ದೆಹಲಿ, ಅಸ್ಸಾಂ ಮತ್ತು ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಎರಡನೇ ಅವಧಿಗೂ ಅಧಿಕಾರಕ್ಕೆ ಬರಲು ಸಾಧ್ಯವಾದರೇ ರಾಜಸ್ಥಾನದಲ್ಲಿ ಏಕೆ ಇದು ಸಾಧ್ಯವಿಲ್ಲ,'' ಎಂದು ಪ್ರಶ್ನಿಸಿದ್ದಾರೆ.
ಈ ಮೂಲಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ರಾಜಸ್ಥಾನದಲ್ಲಿ ಕಾಂಗ್ರೆಸ್ ನ ವೈಫಲ್ಯವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

"ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಕೂಡ ರಾಜಸ್ಥಾನದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರ ಸತತವಾಗಿ ಎರಡನೇ ಅವಧಿಗೆ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಒಮ್ಮೆ ನಮ್ಮ ಬಳಿ ಹೆಚ್ಚು ಶಾಸಕರಿದ್ದರೆ. ಮೊತ್ತೊಂದು ಬಾರಿ ನಮ್ಮ ಬಳಿ ಶಾಸಕರ ಕೊರತೆಯಿರುತ್ತದೆ. ಈ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಿದೆ,'' ಎಂದು ಹೇಳಿದರು.
"ರಾಜಸ್ಥಾನದಲ್ಲಿ ನಮ್ಮ ಪಕ್ಷಕ್ಕೆ ಜನರು ಒಮ್ಮೆ ಬಹುಮತ ನೀಡಿ, ಮುಂದಿನ ಚುನಾವಣೆ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಪುನರಾವರ್ತನೆ ಆಗಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವು ಕಂಡುಕೊಳ್ಳಬೇಕಿದೆ,'' ಎಂದು ಸಚಿನ್ ಪೈಲಟ್ ಹೇಳಿದರು.
"ಈ ರೀತಿಯ ಪರಿಸ್ಥಿತಿಯು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ಹಿಡಿದ ನಂತರ ನಿರ್ಮಾಣವಾಗಿದೆ. ಆದರೆ ಅದಕ್ಕೂ ಮುನ್ನ ಕೂಡ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರ ಸತತವಾಗಿ ಎರಡನೇ ಅವಧಿಗೆ ಅಧಿಕಾರ ಹಿಡಿಯಲು ಇದುವರೆಗೂ ಸಾಧ್ಯವಾಗಿಲ್ಲ. ಇದರ ಹಿಂದಿನ ಕಾರಣಗಳನ್ನು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು,'' ಎಂದು ತಿಳಿಸಿದರು.

"ಅಲ್ಲದೇ ಈ ಕಾರ್ಯಾಗಾರಲ್ಲಿ ಒಗ್ಗಟ್ಟಿನಿಂದ ಹೇಗೆ ಚುನಾವಣೆ ಎದುರಿಸಬೇಕು ಹಾಗೂ ಸತತವಾಗಿ ಎರಡನೇ ಅವಧಿಗೆ ಕಾಂಗ್ರೆಸ್ ಸರಕಾರವನ್ನು ಹೇಗೆ ಅಧಿಕಾರಕ್ಕೆ ತರಬಹುದು ಎಂಬ ಕುರಿತು ನಿರ್ಣಯವನ್ನು ಕೈಗೊಳ್ಳುತ್ತೇವೆ,'' ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದರು.
ರಾಜಸ್ಥಾನದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಸಚಿನ್ ಪೈಲಟ್, ಈ ಹಿಂದೆ ತಮ್ಮನ್ನು ಮುಖ್ಯಮಂತ್ರಿ ಮಾಡಬೇಕೆಂದು ಹೈಕಮಾಂಡ್ ದಂಬಾಲು ಬಿದ್ದಿದ್ದರು. ಸತತವಾಗಿ ಸಚಿನ್ ಪೈಲಟ್ ಅವರು ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ವಾದ್ರ ಅವರನ್ನು ಭೇಟಿಯಾಗಿದ್ದರು. "ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಇಲ್ಲದಿದ್ದರೆ ಪಂಜಾಬ್ ನಲ್ಲಾದ ಪರಿಸ್ಥಿತಿಯೇ ಎದುರಾಗಲಿದೆ' ಎಂದು ಸಚಿನ್ ಪೈಲಟ್ ಎಚ್ಚರಿಕೆ ಸಹ ನೀಡಿದ್ದರು. ಆದರೆ ಪರಿಸ್ಥಿತಿಯನ್ನು ಹತೋಟಿಗೆ ತಂದ ಹೈಕಮಾಂಡ್, ಸಚಿನ್ ಪೈಲಟ್ ಅವರನ್ನು ಸಮಾಧಾನ ಪಡಿಸಲು ಯಶಸ್ವಿಯಾಯಿತು. ಆದರೆ ಈಗಲೂ ಕೂಡ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications