ಸಚಿನ್ ಪೈಲೆಟ್ ಅನರ್ಹತೆ ಪ್ರಕರಣ; ಹೈಕೋರ್ಟ್ ತೀರ್ಪು ಪ್ರಕಟ
ಜೈಪುರ, ಜುಲೈ 24 : ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿನ ಕುರಿತು ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಸೇರಿದಂತೆ 19 ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೀಡಿರುವ ನೋಟಿಸ್ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿತ್ತು.
ಶುಕ್ರವಾರ ರಾಜಸ್ಥಾನ ಹೈಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿದ್ದು, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದೆ. ಇದರಿಂದಾಗಿ ಸಚಿನ್ ಪೈಲೆಟ್ ಮತ್ತು ಇತರ ಶಾಸಕರಿಗೆ ಅನರ್ಹತೆ ಭೀತಿಯಿಂದ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ.
ಹೈಕೋರ್ಟ್ ತನ್ನ ಆದೇಶವನ್ನು ನೀಡುವ ತನಕ ವಿಧಾನಸಭೆ ಸ್ಪೀಕರ್ ಸಿ. ಪಿ. ಜೋಶಿ ಅನರ್ಹತೆ ವಿಚಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಹೈಕೋರ್ಟ್ ಹೇಳಿತ್ತು. ಈಗ ಯಥಾಸ್ಥಿತಿ ಮುಂದುವರೆಯಲಿದೆ.

ಮತ್ತೊಂದು ಕಡೆ ರಾಜಸ್ಥಾನ ಸ್ಪೀಕರ್ ಸಿ. ಪಿ. ಜೋಶಿ ಹೈಕೋರ್ಟ್ ನೀಡಿದ್ದ ತಡೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ಗುರುವಾರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದೆ. ಜುಲೈ 27ರ ಸೋಮವಾರ ತೀರ್ಪನ್ನು ಪ್ರಕಟಿಸಲಿದೆ.
ಗುರುವಾರ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ರಾಜಸ್ಥಾನ ಹೈಕೋರ್ಟ್ ತೀರ್ಪು ಪ್ರಕಟಿಸಲು ಅವಕಾಶ ನೀಡಿತ್ತು. ಹೈಕೋರ್ಟ್ ಆದೇಶ ಸುಪ್ರೀಂಕೋರ್ಟ್‌ನ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಹೇಳಿತ್ತು.
ಇಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡುವ ಮುನ್ನ ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿ ಮಾಡಿತ್ತು. ಸಚಿನ್ ಪೈಲೆಟ್ ಮತ್ತು ಇತರ ಶಾಸಕರು ಈಗ ಸೋಮವಾರ ಸುಪ್ರೀಂಕೋರ್ಟ್ ನೀಡುವ ತೀರ್ಪಿಗಾಗಿ ಕಾಯಬೇಕಿದೆ.
ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡುವಾಗ ಅನರ್ಹತೆ ನೋಟಿಸ್ ಕುರಿತು ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸ್ಪೀಕರ್‌ಗೆ ಸೂಚನೆ ನೀಡಿದೆ. ಆದ್ದರಿಂದ, ಸೋಮವಾರದ ತನಕ ಸಚಿನ್ ಪೈಲೆಟ್ ಮತ್ತು ಇತರ ಶಾಸಕರು ಅನರ್ಹತೆ ತೂಗುಗತ್ತಿಯಿಂದ ಪಾರಾಗಿದ್ದಾರೆ.












Click it and Unblock the Notifications