ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ನಿಧನ: ಮೋದಿ ಸೇರಿ ಹಲವರಿಂದ ಸಂತಾಪ
ಜೈಪುರ, ಜೂನ್ 24: ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಲಾಲ್ ಸೈನಿ ಅವರು ಇಂದು ಸಂಜೆ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮದಲ್ ಲಾಲ್ ಸೈನಿ ಅವರು ರಾಜಸ್ಥಾನ ಬಿಜೆಪಿಯ ಚುಕ್ಕಾಣಿ ಹಿಡಿದಿದ್ದರು, ಜೊತೆಗೆ ರಾಜ್ಯಸಭಾ ಸದಸ್ಯರೂ ಆಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರಿಗೆ ಶ್ವಾಸಕೋಶದ ಸೋಂಕು ಉಂಟಾಗಿತ್ತು, ಮೊದಲಿಗೆ ಅವರನ್ನು ಜೈಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ನಂತರ ಶನಿವಾರ ಅವರನ್ನು ಏಮ್ಸ್‌ಗೆ ಸ್ಥಳಾಂತರಿಸಲಾಗಿತ್ತು, ಇಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಂಜೆ 7 ಗಂಟೆ ವೇಳೆಗೆ ಅವರು ಅಸುನೀಗಿದ್ದಾರೆ.

ಮದನ್ ಲಾಲ್ ಸೈನಿ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಸೇರಿದಂತೆ ಹಲವು ಬಿಜೆಪಿಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮದನ್ ಲಾಲ್ ಸೈನಿ ಅವರು ಕಳೆದ ವರ್ಷವಷ್ಟೆ ರಾಜಸ್ಥಾನ ರಾಜ್ಯ ಬಿಜೆಪಿಯ ಅಧ್ಯಕ್ಷರಾಗಿ ನೇಮಕವಾಗಿದ್ದರು. ತಿಂಗಳ ಹಿಂದಷ್ಟೆ ಮುಕ್ತಾಯವಾದ ಲೋಕಸಭೆ ಚುನಾವಣೆಯಲ್ಲಿ ರಾಜಸ್ಥಾನಕ್ಕೆ ಬಿಜೆಪಿಗೆ ಭಾರಿ ಜಯತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಮದನ್ ಲಾಲ್ ಸೈನಿ ಅವರ ಮರಣದಿಂದ ಬಿಜೆಪಿಯು ತನ್ನ ಕುಟುಂಬ ಅತಿ ಪ್ರಮುಖ ಸದಸ್ಯರೊಬ್ಬರನ್ನು ಕಳೆದುಕೊಂಡಿದೆ. ಅವರಿಗೆ ಪಕ್ಷಾತೀತರಾಗಿ ಗೆಳೆತನ, ಗೌರವ ಆದರುಗಳು ಇದ್ದವು ಎಂದು ಮೋದಿ ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಮದನ್ ಲಾಲ್ ಸೈನಿ ಅವರ ಕಳೆಬರವನ್ನು ಅಂತಿಮ ದರ್ಶನಕ್ಕಾಗಿ ನಾಳೆ (ಮಂಗಳವಾರ) ಜೈಪುರದ ಬಿಜೆಪಿ ಕಚೇರಿ ಬಳಿ ಇಡಲಾಗುತ್ತದೆ. ನಾಳೆ ಸಂಜೆ ಅವರ ಅಂತಿಮಸಂಸ್ಕಾರ ನಡೆಯಲಿದೆ.












Click it and Unblock the Notifications