Breaking news: ಅ. 1 ರಿಂದ 2022 ರ ಜ. 31 ರವರೆಗೆ ರಾಜಸ್ಥಾನದಲ್ಲಿ ಪಟಾಕಿ ನಿಷೇಧ
ಜೈಪುರ, ಸೆಪ್ಟೆಂಬರ್ 30: ಈ ವರ್ಷದ ಅಕ್ಟೋಬರ್ 1 ರಿಂದ ಮುಂಬರುವ ವರ್ಷ ಅಂದರೆ 2022 ರ ಜನವರಿ 31 ರವರೆಗೆ ರಾಜಸ್ಥಾದಲ್ಲಿ ಪಟಾಕಿಯನ್ನು ನಿಷೇಧ ಮಾಡಿ ರಾಜಸ್ಥಾನ ಸರ್ಕಾರ ಆದೇಶ ಹೊರಡಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ರಾಜಸ್ಥಾನ ಸರ್ಕಾರವು ಅಕ್ಟೋಬರ್ 1 ರಿಂದ ಮುಂಬರುವ ವರ್ಷ ಅಂದರೆ 2022 ರ ಜನವರಿ 31 ರವರೆಗೆ ರಾಜಸ್ಥಾನ ರಾಜ್ಯದಾದ್ಯಂತ ಪಟಾಕಿಯನ್ನು ಸಿಡಿಸುವುದು ಹಾಗೂ ಪಟಾಕಿಯನ್ನು ಮಾರಾಟ ಮಾಡುವುದ್ದಕ್ಕೆ ನಿಷೇಧ ಹೇರಿದೆ.
ಇನ್ನು ದೆಹಲಿಯಲ್ಲಿ ಮುಂದಿನ 3 ತಿಂಗಳು ಪಟಾಕಿ ಸಿಡಿಸುವಂತಿಲ್ಲ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ಬುಧವಾರ ಆದೇಶಿಸಿದೆ. ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು 2022ರ ಜನವರಿ 1ರವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವುದರಿಂದ ವಿಪರೀತ ವಾಯುಮಾಲಿನ್ಯವಾಗುತ್ತದೆ. ಶ್ವಾಸಕೋಶ ಸಂಬಂಧಿತ ಖಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ಈಗಾಗಲೇ ಹಲವು ಪರಿಣಿತರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ಹಿನ್ನೆಲೆ ಈ ನಿಷೇಧ ಹೇರಲಾಗಿದೆ.

ದೀಪಾವಳಿ, ದಸರಾ ಹಬ್ಬಗಳು ಬರುವ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ. ಇನ್ನು ರಾಜಸ್ಥಾನ ಸರ್ಕಾರ ತನ್ನ ಈ ಆದೇಶದಲ್ಲಿ, "ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆಯು ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳು ಇದೆ. ಕೊರೊನಾ ವೈರಸ್ ಸೋಂಕು ಇರುವ ಜನರಿಗೆ ಉಸಿರಾಟದ ತೊಂದರೆ ಇರುತ್ತದೆ. ಈ ಹಬ್ಬಗಳ ಹಿನ್ನೆಲೆ ಪಟಾಕಿಯನ್ನು ಸಿಡಿಸಿದರೆ, ಈ ಕೊರೊನಾವ ವೈರಸ್ ಸೋಂಕಿತರಿಗೆ ಉಸಿರಾಟದ ತೊಂದರೆ ಇನ್ನಷ್ಟು ಅಧಿಕ ಉಂಟಾಗುತ್ತದೆ," ಎಂದು ಹೇಳಿದೆ.
"ಈ ಹಿನ್ನೆಲೆ ಈ ವರ್ಷದ ಅಕ್ಟೋಬರ್ 1 ರಿಂದ ಮುಂಬರುವ ವರ್ಷ ಅಂದರೆ 2022 ರ ಜನವರಿ 31 ರವರೆಗೆ ರಾಜಸ್ಥಾನದಲ್ಲಿ ಪಟಾಕಿಯ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧ ಮಾಡಲಾಗಿದೆ," ಎಂದು ತಿಳಿಸಿದೆ. ಇನ್ನು "ಈ ಆದೇಶದ ಹೊರತಾಗಿಯೂ ಪಟಾಕಿಯನ್ನು ಮಾರಾಟ ಮಾಡಿದರೆ ಅಥವಾ ಪಟಾಕಿಯನ್ನು ಸಿಡಿಸಿದರೆ ಅವರ ವಿರುದ್ದ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ," ಎಂದು ಕೂಡಾ ರಾಜಸ್ಥಾನ ಸರ್ಕಾರ ಹೇಳಿದೆ.
"ಒಬ್ಬರ ರೋಗನಿರೋಧಕ ವ್ಯವಸ್ಥೆಯು ಪಟಾಕಿಗಳ ಹೊಗೆಯಿಂದಾಗಿ ತೊಂದರೆಗೆ ಉಂಟಾಗುವಾಗ ಹಾಗೂ ಅಸ್ತಮಾ ಮೊದಲಾದ ಖಾಯಿಲೆಯಿಂದ ಬಳಲುವ ಹಿರಿಯ ನಾಗರಿಕರಿಗೆ ಈ ಪಟಾಕಿಯು ತೊಂದರೆ ಉಂಟು ಮಾಡುವಾಗ ಈ ಪಟಾಕಿಯನ್ನು ನಿಷೇಧ ಮಾಡುವುದು ಉತ್ತಮ," ಎಂದು ಕೂಡಾ ಸರ್ಕಾರ ಉಲ್ಲೇಖಿಸಿದೆ. "ರಾಜ್ಯದ ಜನರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಾವು ಈ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇವೆ," ಎಂದು ಕೂಡಾ ತಿಳಿಸಿದೆ.
ಕಳೆದ ವರ್ಷವೂ ಕೂಡಾ ಕೊರೊನಾ ವೈರಸ್ ಸೋಂಕು ಕಾರಣ ರಾಜಸ್ಥಾನ ಸರ್ಕಾರವು ಪಟಾಕಿಯನ್ನು ಮಾರಾಟ ಮಾಡುವುದು ಹಾಗೂ ಪಟಾಕಿಯನ್ನು ಸಿಡಿಸುವುದಕ್ಕೆ ನಿಷೇಧವನ್ನು ಹೇರಿತ್ತು. ಇನ್ನು ಇತ್ತೀಚೆಗೆ ದೆಹಲಿ ಸರ್ಕಾರವು ಕೂಡಾ ಪಟಾಕಿ ಬಳಕೆಗೆ ನಿಷೇಧ ಹೇರಿದೆ. ಜನವರಿ 1ರವರೆಗೆ ಈ ನಿಷೇಧ ಜಾರಿಯಲ್ಲಿ ಇರಲಿದೆ.
ವಾಯುಮಾಲಿನ್ಯ ಕೋವಿಡ್ ಪಿಡುಗಿನ ಈ ಸಂದರ್ಭದಲ್ಲಿ ವೃದ್ಧರು ಮತ್ತು ಚಿಕ್ಕಮಕ್ಕಳ ಶ್ವಾಸಕೋಶಕ್ಕೆ ಹಾನಿಯುಂಟು ಮಾಡುವ ಸಂಭಾವ್ಯತೆಯೂ ಹೆಚ್ಚಿದೆ. ಹೀಗಾಗಿ ಪಟಾಕಿಯ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ಒಡಿಶಾದಲ್ಲೂ ಪಟಾಕಿ ನಿಷೇಧ
ಒಡಿಶಾದಲ್ಲಿಯೂ ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿಯನ್ನು ಮಾರಾಟ ಮಾಡುವುದು ಹಾಗೂ ಸಿಡಿಸುವುದಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಒಡಿಶಾದ ವಿಶೇಷ ಪರಿಹಾರ ಆಯುಕ್ತರ ಕಚೇರಿಯು, "ಹಬ್ಬಗಳ ತಿಂಗಳಾದ ಅಕ್ಟೋಬರ್‌ನಲ್ಲಿ ಒಡಿಶಾದಲ್ಲಿ ಪಟಾಕಿಯನ್ನು ಮಾರಾಟ ಮಾಡುವುದು ಹಾಗೂ ಸಿಡಿಸುವುದಕ್ಕೆ ನಿಷೇಧ ವಿಧಿಸಲಾಗಿದೆ," ಎಂದು ತಿಳಿಸಿದೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications