ರಾಜ್ಯಸಭೆ; ರಾಜಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬಿಜೆಪಿ ಬೆಂಬಲ!
ಜೈಪುರ, ಮೇ 31: ರಾಜಸ್ಥಾನ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ಮಹತ್ವದ ತಿರುವು ಸಿಕ್ಕಿದೆ. ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಯೊಬ್ಬರು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕೊನೆ ಕ್ಷಣದಲ್ಲಿ ಮಾಧ್ಯಮ ಕ್ಷೇತ್ರದ ಸುಭಾಷ್ ಚಂದ್ರ ನಾಮಪತ್ರ ಸಲ್ಲಿಸಿದ್ದಾರೆ.
ಎಸೆಲ್ ಗ್ರೂಪ್ ಸಂಸ್ಥೆಯ ಅಧ್ಯಕ್ಷರಾಗಿರುವ ಸುಭಾಷ್ ಚಂದ್ರ ರಾಜಸ್ಥಾನದಿಂದ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ 5ನೇ ಅಭ್ಯರ್ಥಿಯಾಗಿದ್ದಾರೆ. ರಾಜ್ಯದಿಂದ ಒಟ್ಟು 4 ರಾಜ್ಯಸಭೆ ಸೀಟುಗಳಿವೆ. ಈ ಪೈಕಿ ಆಡಳಿತರೂಢ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.
4ನೇ ಸ್ಥಾನಕ್ಕೆ ಪೈಪೋಟಿ; ಈಗ ಸುಭಾಷ್ ಚಂದ್ರ ಪ್ರವೇಶದ ಹಿನ್ನೆಲೆಯಲ್ಲಿ 4ನೇ ಸ್ಥಾನಕ್ಕೆ ಪೈಪೋಟಿ ಏರ್ಪಡಲಿದೆ. ಇವರು ಕಾಂಗ್ರೆಸ್‌ನ ಅಭ್ಯರ್ಥಿ ಪ್ರಮೋದ್ ತಿವಾರಿಗೆ ಸವಾಲು ಒಡ್ಡಲಿದ್ದಾರೆ. ಸುಭಾಷ್ ಚಂದ್ರ ಸ್ಥಳೀಯರಾಗಿದ್ದು, ಪ್ರಮೋದ್ ತಿವಾರಿ ಉತ್ತರ ಪ್ರದೇಶದವರಾಗಿದ್ದಾರೆ. ಹೀಗಾಗಿ ಹೊರಗಿನ ಅಭ್ಯರ್ಥಿ ಎಂದು ಬಿಂಬುಸುವ ತಂತ್ರಗಾರಿಕೆ ನಡೆಸುವ ಸಾಧ್ಯತೆಯಿದೆ.

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಸಮಾಧಾನದ ಮೇಲೆ ತೀವ್ರ ನಿಗಾ ಇಟ್ಟಿರುವ ಬಿಜೆಪಿ ಲೆಕ್ಕಾಚಾರದ ಹೆಜ್ಜೆ ಇಟ್ಟಿದೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನಡುವೆ ಶೀಥಲ ಸಮರ ಮುಂದುವರಿದಿದ್ದು, ಯಾವಾಗ ಬೇಕಾದರೂ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ. ಇದರ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಗಳು ಹೊರಗಿನವರು; ಇನ್ನೊಂದೆಡೆ, ರಾಜ್ಯಸಭಾ ಸ್ಥಾನಗಳಿಗೆ ಕಾಂಗ್ರೆಸ್‌ನ ಎಲ್ಲ ಅಭ್ಯರ್ಥಿಗಳು ಹೊರಗಿನ ರಾಜ್ಯದವರಾಗಿರುವುದು ಪಕ್ಷದ ಒಳಗೇ ಆಕ್ರೋಶಕ್ಕೆ ಕಾರಣವಾಗಿದೆ. ರಣದೀಪ್ ಸುರ್ಜೆವಾಲ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ವಸುಂಧರಾ ರಾಜೆ ಸಂಪುಟದಲ್ಲಿದ್ದ ಮಾಜಿ ಸಚಿವ ಘನಶ್ಯಾಮ್ ತಿವಾರಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

200 ಶಾಸಕರು ಇರುವ ರಾಜಸ್ಥಾನ ವಿಧಾನಸಭೆಯಲ್ಲಿ, ಪ್ರತಿ ರಾಜ್ಯಸಭೆ ಅಭ್ಯರ್ಥಿಯ ಗೆಲುವಿಗೆ 41 ಮತಗಳು ಬೇಕಾಗಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದೆ ಮತ್ತು ಬಿಜೆಪಿ ಬಳಿ 71 ಮತಗಳಿವೆ. ಕಾಂಗ್ರೆಸ್‌ನವರ ಬಳಿ ಹೆಚ್ಚವರಿಯಾಗಿ 30 ಮತಗಳು ಇದ್ದರೂ ಎರಡನೇ ಸ್ಥಾನದ ಗೆಲುವಿಗೆ 11 ಮತಗಳು ಬೇಕಾಗಿವೆ. ಮೂರನೇ ಸ್ಥಾನದ ಗೆಲುವಿಗೆ ಕಾಂಗ್ರೆಸ್‌ಗೆ ಹೆಚ್ಚವರಿ 15 ಮತಗಳು ಬೇಕಾಗಿವೆ. ಚಿಕ್ಕ ಪಕ್ಷಗಳು ಮತ್ತು ಪಕ್ಷೇತರ ಶಾಸಕರು ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ರಾಜಸ್ಥಾನ ವಿಧಾನಸಭೆಯಲ್ಲಿ ಒಟ್ಟು 13 ಮಂದಿ ಪಕ್ಷೇತರ ಶಾಸಕರಿದ್ದಾರೆ. ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದಿಂದ ಇಬ್ಬರು, ಭಾರತೀಯ ಟ್ರೈಬಲ್ ಪಾರ್ಟಿಯಿಂದ ಇಬ್ಬರು ಮತ್ತು ಇಬ್ಬರು ಸಿಪಿಎಂ ಶಾಸಕರಿದ್ದಾರೆ. ಇವರು ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕರಾಗಿದ್ದಾರೆ. ಬಿಜೆಪಿ ಗೆ ಪಕ್ಷೇತರ ಶಾಸಕರ ಬೆಂಬಲವಿದೆ. ಇನ್ನೊಂದೆಡೆ ಚಿಕ್ಕ ಪಕ್ಷಗಳ ಬೆಂಬಲ ಪಡೆಯಲು ಕಾಂಗ್ರೆಸ್ ಹೋರಾಡುತ್ತಿದೆ.












Click it and Unblock the Notifications