ದೂರದ ರಾಜಸ್ಥಾನದಲ್ಲೂ ಕುಮಾರಸ್ವಾಮಿಯನ್ನು ಬೆಂಬಿಡದ ಪ್ರಧಾನಿ ಮೋದಿ
Recommended Video
ಜೈಪುರ, ಮೇ 4: ಸೈನಿಕರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನೀಡಿದ್ದ ಹೇಳಿಕೆಯನ್ನು ಇಟ್ಟುಕೊಂಡು ರಾಜ್ಯದ ಚುನಾವಣಾ ಪ್ರಚಾರದ ವೇಳೆಯೂ ಟೀಕಿಸಿದ್ದ ಪ್ರಧಾನಿ ಮೋದಿ, ದೂರದ ರಾಜಸ್ಥಾನದಲ್ಲೂ ವಿಪಕ್ಷಗಳನ್ನು ಟೀಕಿಸಲು ಅದನ್ನೇ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬಿಕನೀರ್ ನಲ್ಲಿ ಭಾರೀ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಜೆಡಿಎಸ್ ಜೊತೆ ಸೇರಿಕೊಂಡು ಕಾಂಗ್ರೆಸ್, ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿದೆ. ಆ ಸರಕಾರದ ಮುಖ್ಯಮಂತ್ರಿಯ ತಂದೆ ಸ್ವಲ್ಪದಿನದ ಮಟ್ಟಿಗೆ ಈ ದೇಶದ ಪ್ರಧಾನಿಯೂ ಆಗಿದ್ದರು. ಆ ಮುಖ್ಯಮಂತ್ರಿ, ಸೈನಿಕರ ಬಗ್ಗೆ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದರು ಎಂದು ಕುಮಾರಸ್ವಾಮಿ ಹೆಸರು ಪ್ರಸ್ತಾವಿಸದೇ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಎರಡು ಹೊತ್ತಿನ ಊಟಕ್ಕೆ ತೊಂದರೆ ಇದ್ದವರು, ಹೊಟ್ಟೆ ತುಂಬಿಸಿಕೊಳ್ಳಲು ಬರುವವರು ಮಾತ್ರ ಭಾರತೀಯ ಸೇನೆಗೆ ಸೇರ್ಪಡೆಯಾಗುತ್ತಾರೆ ಎನ್ನುವ ಹೇಳಿಕೆಯನ್ನು ಅಲ್ಲಿನ ಮುಖ್ಯಮಂತ್ರಿ ನೀಡಿದ್ದರು. ರಾಜಸ್ಥಾನದ ನನ್ನ ಪ್ರೀತಿಯ ಜನಗಳೇ, ಅಲ್ಲಿನ ಮುಖ್ಯಮಂತ್ರಿಗಳು ನೀಡಿದ ಈ ಹೇಳಿಕೆಯನ್ನು ನೀವು ಒಪ್ಪುತ್ತೀರಾ ಎಂದು ಮೋದಿ ಪ್ರಶ್ನಿಸಿದ್ದಾರೆ.

ರಾಜಸ್ಥಾನದಿಂದಲೂ ಸಾವಿರಾರು ಜನರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಜನರು ಹೊಟ್ಟೆ ತುಂಬಿಸಿಕೊಳ್ಳಲು ಸೇನೆಗೆ ಸೇರಿದ್ದಾರಾ ಎಂದು ಕೇಳಿದ ಮೋದಿ, ರಾಜಸ್ಥಾನದ ಈ ಪವಿತ್ರಭೂಮಿ ಎರಡು ಹೊತ್ತಿನ ಊಟವನ್ನು ಹಾಕುವಷ್ಟು ಶಕ್ತಿಯನ್ನು ಹೊಂದಿಲ್ವಾ ಎಂದು ಮೋದಿ, ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.
ಅಲ್ಲಿನ ಮುಖ್ಯಮಂತ್ರಿ ನೀಡಿದ ಹೇಳಿಕೆ, ನಮ್ಮ ಹೆಮ್ಮೆಯ ಯೋಧರಿಗೆ ಮಾಡಿದ ಅವಮಾನ ಅಲ್ಲವೇ? ಆದರೆ, ಕಾಂಗ್ರೆಸ್ಸಿನ ಹಿರಿಯ ಮತ್ತು ಕಿರಿಯ ಮುಖಂಡರು, ಕರ್ನಾಟಕದ ಮುಖ್ಯಮಂತ್ರಿಗಳು ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಡಿಯಲ್ಲಿ ಯೋಧರು ಯಾವುದೇ ಕಷ್ಟಗಳಿದ್ದರೂ ದೇಶವನ್ನು ಕಾಯುತ್ತಿದ್ದಾರೆ. ಇಂತವರನ್ನು ಕ್ಷಮಿಸಬೇಕಾ ಎಂದು ಸಾರ್ವಜನಿಕರಲ್ಲಿ ಪ್ರಶ್ನಿಸಿದ ಮೋದಿ, ಮತದಾರರಾದ ನೀವು ಇವರಿಗೆಲ್ಲಾ ಸರಿಯಾದ ಪಾಠವನ್ನು ಕಲಿಸಬೇಕಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications