ಇಡೀ ದೇಶ ನಮ್ಮನ್ನು ನೋಡುತ್ತಿದೆ : ಅಶೋಕ್ ಗೆಹ್ಲೋಟ್
ಜೈಪುರ, ಜುಲೈ 21 : ಪಕ್ಷದಲ್ಲಿನ ಬಿಕ್ಕಟ್ಟಿನ ನಡುವೆಯೇ ಜೈಪುರದಲ್ಲಿ ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿತ ಶಾಸಕರು ಸಭೆಯಲ್ಲಿದ್ದಾರೆ.
ಜೈಪುರದ ಖಾಸಗಿ ಹೋಟೆಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಾಸರ, ಹೈಕಮಾಂಡ್ ನಾಯಕ ಅಜಯ್ ಮಾಕೇನ್ ಸಭೆಯಲ್ಲಿದ್ದಾರೆ.
ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್, "ಬಿಜೆಪಿ ಅಥವ ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವುದು ಬೇಕಿಲ್ಲ. ಈಗ ಚುನಾವಣೆ ಬೇಕಾಗಿಲ್ಲ" ಎಂದು ಹೇಳಿದರು.

"ಇಡೀ ದೇಶ ನಮ್ಮನ್ನು ನೋಡುತ್ತಿದೆ. ನೀವು ಸರ್ಕಾರ ಉಳಿಸಲು ಯಾವ ರೀತಿ ಹೋರಾಟ ಮಾಡುತ್ತಿದ್ದೀರಿ ಎಂಬುದನ್ನು ಜನರು ನೋಡುತ್ತಿದ್ದಾರೆ. ನಿಮ್ಮ ಗೌರವ ಮತ್ತಷ್ಟು ಹೆಚ್ಚಾಗುತ್ತಿದೆ" ಎಂದು ಶಾಸಕರಿಗೆ ಗೆಹ್ಲೋಟ್ ತಿಳಿಸಿದರು.
ಅಶೋಕ್ ಗೆಹ್ಲೋಟ್ ಬೆಂಬಲಿಸುವ ಶಾಸಕರು ಇರುವ ಹೋಟೆಲ್‌ನಲ್ಲಿಯೇ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಾಗುತ್ತಿದೆ. ಅಶೋಕ್ ಗೆಹ್ಲೋಟ್ ಬಣದಲ್ಲಿ ಎಷ್ಟು?, ಸಚಿನ್ ಪೈಲೆಟ್ ಬಣದಲ್ಲಿ ಎಷ್ಟು ಶಾಸಕರು ಇದ್ದಾರೆ? ಎಂದು ಇಂದು ಸ್ಪಷ್ಟ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ.
ಬಂಡಾಯ ಶಾಸಕ ಸಚಿನ್ ಪೈಲೆಟ್ ಮತ್ತು ಇತರ 18 ಶಾಸಕರನ್ನು ಅನರ್ಹಗೊಳಿಸಲು ಸ್ಪೀಕರ್ ನೀಡಿರುವ ನೋಟಿಸ್ ಕುರಿತು ರಾಜಸ್ಥಾನ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇಂದು ಸಂಜೆಯ ತನಕ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ಹೇಳಿದೆ.












Click it and Unblock the Notifications