ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಸಂಕಟ ತಂದ ಬಿಎಸ್‌ಪಿ ಆನೆ!
ಜೈಪುರ, ಆಗಸ್ಟ್ 06 : ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬಿಎಸ್‌ಪಿಯ ಆನೆ ಸಂಕಟ ತಂದಿದೆ. ರಾಜಸ್ಥಾನ ವಿಧಾನಸಭೆ ಅಧಿವೇಶನ ಆಗಸ್ಟ್ 14ರಿಂದ ಆರಂಭವಾಗಲಿದೆ.
ಬಿಎಸ್‌ಪಿಯ 6 ಶಾಸಕರು ಕಾಂಗ್ರೆಸ್ ಜೊತೆ ವಿಲೀನಗೊಂಡಿರುವುದನ್ನು ಬಿಎಸ್ ಪಿ ಮತ್ತು ಬಿಜೆಪಿ ರಾಜಸ್ಥಾನ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿವೆ. ಈ ಅರ್ಜಿಯ ವಿಚಾರಣೆಯನ್ನು ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಆಗಸ್ಟ್ 11ರಂದು ಅರ್ಜಿಯ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಒಂದು ವೇಳೆ ಕಾಂಗ್ರೆಸ್‌ನೊಂದಿಗೆ ವಿಲೀನಗೊಂಡಿರುವುದು ರದ್ದುಗೊಂಡರೆ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಹಿನ್ನಡೆಯಾಗಲಿದೆ.
ತಮ್ಮ ಸರ್ಕಾರಕ್ಕೆ 102 ಶಾಸಕರ ಬಲವಿದೆ ಎಂದು ಅಶೋಕ್ ಗೆಹ್ಲೋಟ್ ಹೇಳುತ್ತಿದ್ದಾರೆ. ಒಂದು ವೇಳೆ ಬಿಎಸ್‌ಪಿ ಬೆಂನಲ ನೀಡಿಲ್ಲ ಎಂದರೆ ಸರ್ಕಾರದ ಬಲ ಕಡಿಮೆಯಾಗಲಿದೆ ಆಗ ರಾಜಕೀಯ ಹೈಡ್ರಾಮ ನಡೆಯುವ ಸಾಧ್ಯತೆ ಇದೆ.

ಮ್ಯಾಜಿಕ್ ನಂಬರ್ ಬದಲು
6 ಬಿಎಸ್‌ಪಿ ಶಾಸಕರ ಬೆಂಬಲವಿಲ್ಲದಿದ್ದರೆ ಅಶೋಕ್ ಗೆಹ್ಲೋಟ್ ಸರ್ಕಾರದ ಬೆಂಬಲಿತ ಶಾಸಕರ ಸಂಖ್ಯೆ 102 ರಿಂದ 96ಕ್ಕೆ ಕುಸಿಯಲಿದೆ. ಪ್ರತಿಪಕ್ಷ ಬಿಜೆಪಿ 72 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ಬಂಡಾಯ ಶಾಸಕರು, ಮೂವರು ಪಕ್ಷೇತರ ಸದಸ್ಯರ ಬಲ ಸೇರಿದರೆ ಒಟ್ಟು ಸದಸ್ಯ ಬಲ 97 ಆಗಲಿದೆ. ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ ಸಹ 101 ರಿಂದ 97ಕ್ಕೆ ಕುಸಿಯಲಿದೆ.

ಬಿಎಸ್‌ಪಿಯೇ ವಿರೋಧಿಸುತ್ತಿದೆ
6 ಬಿಎಸ್‌ಪಿ ಶಾಸಕರು ಕಾಂಗ್ರೆಸ್ ಜೊತೆ ವಿಲೀನವಾಗಿದ್ದನ್ನು ಬಿಎಸ್‌ಪಿಯೇ ವಿರೋಧಿಸುತ್ತಿದೆ. ಬಿಜೆಪಿ ಮತ್ತು ಬಿಎಸ್‌ಪಿ 2019ರ ಸೆಪ್ಟೆಂಬರ್‌ನಲ್ಲಿ ವಿಲೀನಕ್ಕೆ ಸ್ಪೀಕರ್ ಒಪ್ಪಿಗೆ ಕೊಟ್ಟಿದ್ದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿವೆ.

ಕಲಾಪಕ್ಕೆ ಹಾಜರಾಗುವುದು ಬೇಡ
ಬಿಜೆಪಿ ಮತ್ತು ಬಿಎಸ್‌ಪಿ 6 ಬಿಎಸ್‌ಪಿ ಶಾಸಕರು ವಿಧಾನಸಭೆ ಕಲಾಪಕ್ಕೆ ಹಾಜರಾಗದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರ್ಟ್‌ನಲ್ಲಿ ಮನವಿ ಮಾಡಿವೆ. ಅಶೋಕ್ ಗೆಹ್ಲೋಟ್ ಬಹುಮತ ಸಾಬೀತು ಮಾಡಲು ಮುಂದಾದರೆ ಆಗ ಸಂಕಷ್ಟ ಎದುರಾಗಲಿದೆ.

ಕೋರ್ಟ್ ಹೇಳಿದ್ದೇನು?
ಅರ್ಜಿಯ ವಿಚಾರಣೆ ನಡೆಸುತ್ತಿರುವ ರಾಜಸ್ಥಾನ ಹೈಕೋರ್ಟ್ ಏಕಸದಸ್ಯ ಪೀಠ ಬಿಎಸ್‌ಪಿ ಶಾಸಕರು ಕಾಂಗ್ರೆಸ್ ಶಾಸಕರಂತೆ ಕಾರ್ಯ ನಿರ್ವಹಣೆ ಮಾಡಲು ತಡೆ ಕೊಟ್ಟಿಲ್ಲ. ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದೆ.












Click it and Unblock the Notifications