ಮದುವೆಯಾದ ಗಂಡ ಗಂಡನಲ್ಲ ಎಂದು ಗೊತ್ತಾದಾಗ!
ಸಾಲ್ವೆಡಾರ್ (ಬ್ರಜಿಲ್), ಆ. 9 : ಅವರಿಬ್ಬರದು ಸುಮಧುರ ಏಳು ವರ್ಷಗಳ ದಾಂಪತ್ಯ. ಅವರಿಬ್ಬರ ಪ್ರೇಮದ ಕುರುಹಾಗಿ ಅವರಿಗೆ ಆರು ವರ್ಷದ ಮುದ್ದಿನ ಮಗಳು. ಸ್ವರ್ಗಕ್ಕೇ ಕಿಚ್ಚುಹಚ್ಚುವಂತೆ ಸಾಗಿತ್ತು ಅವರ ಜೀವನ. ಆದರೆ, ಅವರಿಗೆ ಒಂದೇ ಕೊರಗು ಕಾಡುತ್ತಿತ್ತು. ಅದೇನೆಂದರೆ, ಬಾಲ್ಯದಿಂದಲೇ ಅಮ್ಮನ ವಾತ್ಸಲ್ಯ ಸಿಗಲಿಲ್ಲವೆಂದು ಕೊರಗುತ್ತಿದ್ದರು.
ತಮಗೆ ಜೀವ ಕೊಟ್ಟ ಅಮ್ಮ ಎಲ್ಲೋ ಇದ್ದಿರಬಹುದು ಎಂದು ಆಡ್ರಿಯಾನಾ ಮತ್ತು ಲಿಯಾಂಡ್ರೋ ಬಲವಾಗಿ ನಂಬಿದ್ದರು. ಅಚ್ಚರಿಯೆಂಬಂತೆ ಅವರಿಬ್ಬರ ಅಮ್ಮಂದಿರ ಹೆಸರು ಕೂಡ ಒಂದೇ ಆಗಿತ್ತು. ಅವಳು ಮಾರಿಯಾ. ಇಬ್ಬರ ಅಮ್ಮನ ಹೆಸರು ಒಂದೇ ಆಗಿರುವುದು ಕಾಕತಾಳೀಯ ಎಂದು ಅಂದುಕೊಂಡಿದ್ದರು. ಮಾರಿಯಾ ಎಂಬ ಹೆಸರಿನ ತಾಯಂದಿರು ಎಷ್ಟುಜನರಿರಲಿಕ್ಕಿಲ್ಲ?
ಅದೇನಾಗಿತ್ತೋ ಏನೋ, ಗಂಡ ಹೆಂಡಂದಿರಿಬ್ಬರೂ ಬಾಲ್ಯದಲ್ಲಿಯೇ ಅಮ್ಮನ ವಾತ್ಸಲ್ಯದಿಂದ ವಂಚಿತರಾಗಿದ್ದರು. ಏನೇ ಆಗ್ಲಿ, ತಮ್ಮ ತಾಯಂದಿರನ್ನು ಹುಡುಕೇ ತೀರಬೇಕು ಎಂದು ಇಬ್ಬರೂ ಪಣ ತೊಟ್ಟಿದ್ದರು. ಭೂಮಿ ಯಾವತ್ತಿದ್ದರೂ ಗುಂಡಗೇ ಇರುತ್ತದೆ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]

ಇಂಥ ಬಂಧುಗಳಿಂದ ದೂರವಾಗಿರುವವರಿಗೆ ಅವರ ಆತ್ಮೀಯರನ್ನು ಹುಡುಕಿಕೊಡುವ ಕಾಯಕ ಇಟ್ಟುಕೊಂಡಿದ್ದ 'ಏಂಜೆಲ್ ಆಫ್ ಮೀಟಿಂಗ್ಸ್' ಎಂಬ ರೇಡಿಯೋ ಸಹಾಯದಿಂದ ಆಡ್ರಿಯಾನಾ ತನ್ನ ತಾಯಿಯ ಹುಡುಕಾಟವನ್ನು ತ್ವರಿತಗೊಳಿಸಿದಳು. ಆಕೆಯ ಅದೃಷ್ಟ, ಹಲವಾರು ವರುಷಗಳಿಂದ ಹುಡುಕುತ್ತಿದ್ದ ಅಮ್ಮನ ಪ್ರೀತಿ ಆಕೆಗೆ ಸಿಕ್ಕೇಬಿಟ್ಟಿತು. [ಗಂಡು ಗಂಡನಲ್ಲ, ಹೆಂಡತಿ ಹೆಂಡತಿಯಲ್ಲ]
ಆದರೆ, ತಾಯಿ ತಮ್ಮನ್ನೇಕೆ ತ್ಯಜಿಸಿದ್ದೆಂದು, ಆಕೆಯ ಹಳೆಯ ಕಥೆ ಕೇಳುತ್ತಿದ್ದಂತೆ ಆಡ್ರಿಯಾನಾ ಮತ್ತು ಲಿಯಾಂಡ್ರೋ ಇಬ್ಬರ ಮುಖ ಸಂತಸದಿಂದ ಅರಳುವ ಬದಲು ವಿವರ್ಣವಾಗತೊಡಗಿತು. ಇಬ್ಬರೂ ಕುಂತಕುಂತಲ್ಲೇ ಬೆವರಿದರು, ಚಟಪಡಿಸಿದರು, ಗಳಗಳನೆ ಅಳಲು ಪ್ರಾರಂಭಿಸಿದರು. ಅಯ್ಯೋ ದುರ್ವಿಧಿಯೇ ಎಂದು ಹಳಹಳಿಸಿದರು. ಏಕೆಂದರೆ, ಇಬ್ಬರ ಅಮ್ಮ ಒಬ್ಬಳೇ! ಅರ್ಥಾತ್, ಅವರಿಬ್ಬರೂ ಅಣ್ಣತಂಗಿ.
ಮದುವೆಯಾಗಿಯಾಗಿದೆ. ಕಾಣಿಕೆಯಾಗಿ ಆರು ವರ್ಷದ ಮಗಳು ಕೂಡ ಇದ್ದಾಳೆ. ಇಂಥ ಸಂದರ್ಭದಲ್ಲಿ ಮದುವೆಯಾಗಿರುವ ತಾವಿಬ್ಬರೂ ಅಣ್ಣತಂಗಿ ಎಂದು ಗೊತ್ತಾದಾಗ ಅವರ ಪರಿಸ್ಥಿತಿ ಹೇಗಿರಬೇಡ? ಆದರೆ, ಆದದ್ದು ಆಗಿಹೋಗಿದೆ, ಮುಂದಿನ ಭವಿಷ್ಯದೆಡೆ ಚಿತ್ತ ಹರಿಸೋಣ ಎಂದು ನಿರ್ಧರಿಸಿರುವ ಇಬ್ಬರೂ ಗಂಡ ಹೆಂಡತಿಯಂತೆಯೇ ಬಾಳು ಸಾಗಿಸಲು ನಿರ್ಧರಿಸಿದ್ದಾರೆ. ಅವರಿಬ್ಬರ ಬಾಳು ಸುಂದರವಾಗಿರಲಿ.












Click it and Unblock the Notifications