ಗ್ರೀನ್‌ಲ್ಯಾಂಡ್; ಅಮೇರಿಕಾದ ಅಜ್ಜನೂ, ಡೆನ್ಮಾರ್ಕ್‌ನ ಚೆಲುವೆಯೂ: ಪತ್ರಕರ್ತ ಗೋಪಾಲಕೃಷ್ಣ ಕುಂಟಿನಿ ಬರಹ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಮೇಲೆ ವಿಶ್ವದ ಅತಿ ದೊಡ್ಡ ದ್ವೀಪವಾಗಿರುವ ಗ್ರೀನ್ಲ್ಯಾಂಡ್ ಮೇಲೆ ಕಣ್ಣಿಟ್ಟಿದ್ದಾರೆ. ಟ್ರಂಪ್ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಈ ಕ್ರಮಗಳಿಗೆ ಡೆನ್ಮಾರ್ಕ್ ಸೇರಿದಂತೆ ನ್ಯಾಟೋ ರಾಷ್ಟ್ರಗಳಿಂದ ಭಾರೀ ವಿರೋಧವೂ ವ್ಯಕ್ತವಾಗುತ್ತಿದೆ. ಅಸಲಿಗೆ ಟ್ರಂಪ್ ಗ್ರೀನ್‌ಲ್ಯಾಂಡ್ ಮೇಲೆ ಕಣ್ಣಿಟ್ಟಿರುವುದೇಕೆ? ಇದರ ಹಿಂದಿನ ಕಾರಣಗಳೇನು ಎಂದು ಹಿರಿಯ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿ ಅವರ ವಿಶ್ಲೇಷಣೆ ಇಲ್ಲಿದೆ.
'ಮುನ್ನೂರು ವರ್ಷಗಳಿಂದ ಗ್ರೀನ್‌ಲ್ಯಾಂಡ್ ಡೆನ್ಮಾರ್ಕ್‌ನ ಕಾಲನಿಯಾಗಿತ್ತು. ಎರಡನೇ ಮಹಾಯುದ್ಧದ ಹೊತ್ತಲ್ಲಿ ಹಿಟ್ಲರ್ ಡೆನ್ಮಾರ್ಕ್‌ನ್ನು ವಶಕ್ಕೆ ತೆಗೆದುಕೊಂಡಿದ್ದ. ಡೆನ್ಮಾರ್ಕ್‌ನ ಅಧೀನದಲ್ಲಿದ್ದ ಗ್ರೀನ್‌ಲ್ಯಾಂಡ್‌ಗೆ ಕಾಲಿಟ್ಟು ಅಲ್ಲಿ ಹವಾಮಾನ ಠಾಣೆಯನ್ನು ಸ್ಥಾಪಿಸಿದ್ದ. ಆಗ ಸೋತುಹೋಗಿದ್ದ ಡೆನ್ಮಾರ್ಕ್ ಹೇಗಾದರೂ ಮಾಡಿ ಗ್ರೀನ್‌ಲ್ಯಾಂಡ್ ಅನ್ನು ಉಳಿಸಿಕೊಳ್ಳಲು ಅಮೇರಿಕಾ ಜೊತೆ ಒಂದು ಒಪ್ಪಂದ ಮಾಡಿಕೊಂಡಿತು'.

'ಅಮೇರಿಕಾದಲ್ಲಿದ್ದ ಡೆನ್ಮಾರ್ಕ್ ರಾಯಭಾರಿ ಅಮೇರಿಕಾ ಸರಕಾರದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ. ಅದರ ಫಲವಾಗಿ ಅಮೇರಿಕಾ ಅಲ್ಲಿದ್ದ ನಾಝಿಗಳನ್ನು ಓಡಿಸಿ ತನ್ನ ಕಬ್ಜಾಕ್ಕೆ ತೆಗೆದುಕೊಂಡು ತನ್ನ ಮಿಲಿಟರಿ ಬೇಸ್‌ಗಳನ್ನು, ರೇಡಾರ್ ನೆಲೆಗಳನ್ನು ಸ್ಥಾಪಿಸಿತು. 1951 ರಲ್ಲಿ ಉಭಯ ದೇಶಗಳ ನಡುವೆ ಆದ ಒಪ್ಪಂದದಂತೆ ಅಮೇರಿಕಾ ಗ್ರೀನ್‌ಲ್ಯಾಂಡಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ಕಟ್ಟುವುದು, ನಿರ್ಮಿಸುವುದು, ನಿರ್ವಹಿಸುವುದು, ಕಾರ್ಯಾಚರಿಸುವ ಹಕ್ಕು ಪಡೆಯಿತು. ನೆಲ, ನೀರು, ಆಕಾಶಗಳಲ್ಲಿ ಅದರ ಮಿಲಿಟರಿ ಅವಕಾಶಗಳಿಗೆ ಮುಕ್ತ ಸ್ವಾಮ್ಯತೆಯೂ ದಕ್ಕಿತು'.
'2004 ರ ಹೊತ್ತಿಗೆ ಡೆನ್ಮಾರ್ಕ್ ಬಲಿಷ್ಠವಾಗಿತ್ತು. ಆಗಲೇ ಗ್ರೀನ್‌ಲ್ಯಾಂಡಲ್ಲಿ ಅರೆ ಸ್ವಾಯತ್ತ ಸರಕಾರ ಬಂದಿತ್ತು. ಎರಡೂ ದೇಶಗಳು ತಮ್ಮ ಹಿಂದಿನ ಒಪ್ಪಂದಕ್ಕೆ ತಿದ್ದುಪಡಿ ತಂದವು. ಅದರಂತೆ ಅಮೇರಿಕಾ ಗ್ರೀನ್‌ಲ್ಯಾಂಡಲ್ಲಿ ಏನೇ ಮಾಡಬೇಕಾದರೂ ಡೆನ್ಮಾರ್ಕ್ ಜೊತೆ ಮಾತುಕತೆ ಮಾಡಿಕೊಳ್ಳಬೇಕು ಎಂಬ ಶರತ್ತು ಜ್ಯಾರಿಗೆ ಬಂತು ಮತ್ತು ಅಮೇರಿಕಾ ಗ್ರೀನ್‌ಲ್ಯಾಂಡನ್ನು ಡೆನ್ಮಾರ್ಕ್‌ನ ಅವಿಭಾಜ್ಯ ಅಂಗ ಎಂದು ಮಾನ್ಯ ಮಾಡಿತು'.
'ಇದೆಲ್ಲಾ ಆಗಿ 22 ವರ್ಷಗಳ ಬಳಿಕ ಈಗ ಟ್ರಂಪ್ ಗ್ರೀನ್‌ಲ್ಯಾಂಡ್ ನಮ್ಮದು ಎನ್ನುತ್ತಿದ್ದಾನೆ. ಟ್ರಂಪ್ ಗೆ ಗ್ರೀನ್‌ಲ್ಯಾಂಡ್ ಏಕೆ ಬೇಕು? ಏಕೆಂದರೆ ಅದು ಅಮೇರಿಕಾ ಮತ್ತು ರಷ್ಯಾಗಳ ನಡುವೆ ಇರುವ ದ್ವೀಪ. ಅಲ್ಲಿ ರಷ್ಯಾ ಮತ್ತು ಚೀನಾಗಳ ಸುಳಿದಾಟವಿದೆ. ಅದರ ಭೂಗರ್ಭದಲ್ಲಿ ಎಲೆಕ್ಟ್ರಿಕಲ್ ಕಾರುಗಳ ತಯಾರಿಕೆಗೆ ಬೇಕಾದ ಖನಿಜಗಳೂ ಸೇರಿ ಅಪರೂಪದ ಖನಿಜ ನಿಕ್ಷೇಪಗಳಿವೆ'.
'ಜಗತ್ತಿನ ಅತ್ಯಂತ ದೊಡ್ಡ ದ್ವೀಪವಾದ ಗ್ರೀನ್‌ಲ್ಯಾಂಡ್ ನಮ್ಮ ಕರ್ನಾಟಕಕ್ಕಿಂತ 11 ಪಟ್ಟು ದೊಡ್ಡದು. ವಿಸ್ತೀರ್ಣ 21 ಲಕ್ಷ ಚದರ ಕಿಮೀ. ವರ್ಷ ಪೂರ್ತಿ ಹಿಮದ ಹೊದಿಕೆಯಲ್ಲೇ ಇರುವ ಹಿಮದ ನಾಡು. ಜನಸಂಖ್ಯೆ 57 ಸಾವಿರ. ಈ ದ್ವೀಪ ನಮಗೆ ಬೇಕು, ಎಷ್ಟು ದುಡ್ಡು ಕೊಡಬೇಕು ಹೇಳಿ ಎಂದು ಟ್ರಂಪ್ ಕೇಳಿದ್ದ. ಅದಕ್ಕೆ ಅಲ್ಲಿನ ಪ್ರಧಾನಿ ನಮ್ಮ ದೇಶ ನಿಮಗೆ ಮಾರಾಟಕ್ಕೆ ಇಟ್ಟಿಲ್ಲ ಎಂದು ದಬಾಯಿಸಿದ್ದಳು'.
'ಕೊಡದಿದ್ದರೆ ವಸೂಲಿ ಮಾಡುತ್ತೇವೆ ಎಂದು ಟ್ರಂಪ್ ಅಬ್ಬರಿಸಿದ್ದಾನೆ. ಮಿಲಿಟರಿ ಕಾರ್ಯಾಚರಣೆಯ ಧಮ್ಕಿ ಹಾಕಿದ್ದಾನೆ. ನಿಮ್ಮ ಮಿಲಿಟರಿ ಕಳುಹಿಸಿ ನೋಡಿ, will Shoot first, ask questions Later ಎಂದು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸನ್ ಉತ್ತರಿಸಿದ್ದಾಳೆ. ಅಜ್ಜ ಟ್ರಂಪ್ ಮತ್ತು ಚೆಲುವೆ ಮೆಟ್ಟೆ ಫ್ರೆಡ್ರಿಕ್ಸನ್ ನಡುವೆ ಯಾರು ಗೆಲ್ಲುತ್ತಾರೆ ನೋಡೇ ಬಿಡೋಣ, ಹೇಗೂ ಟ್ರಂಪ್ ಇರುವ ತನಕ ಇಂಥದ್ದೆಲ್ಲಾ ನಡೆಯುತ್ತಲೇ ಇರುತ್ತದೆ' ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications