ರಷ್ಯಾ ರಕ್ತದಲ್ಲಿ ಒದ್ದಾಡುವ ದೃಶ್ಯ ನೋಡಲು ಅವರು ಕಾಯುತ್ತಿದ್ದರು: ಪುಟಿನ್ ಆರೋಪ!
ಮಾಸ್ಕೋ: ರಷ್ಯಾ ಖಾಸಗಿ ಸೇನೆ ದಂಗೆ ಎದ್ದ ಬಳಿಕ ಅಧ್ಯಕ್ಷ ಪುಟಿನ್ ಎಲ್ಲಿಗೆ ಹೋದರು? ಅನ್ನೋ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ರಹಸ್ಯ ಸ್ಥಳದಿಂದ ವಿಡಿಯೋ ಮಾಡಿ ಜನರಿಗೆ ಸಂದೇಶ ನೀಡಿದ್ದಾರೆ ಪುಟಿನ್. ಹಾಗೇ ರಕ್ತಸಿಕ್ತ ಕ್ರಾಂತಿಗೆ ಮುಂದಾಗಿದ್ದವರ ವಿರುದ್ಧ ಇದೇ ವಿಡಿಯೋದಲ್ಲಿ ಎಚ್ಚರಿಕೆಯ ಸಂದೇಶವನ್ನೂ ಪುಟಿನ್ ನೀಡಿದ್ದಾರೆ. ಹಾಗಾದ್ರೆ ವ್ಲಾದಿಮಿರ್ ಪುಟಿನ್ ಹೇಳಿದ್ದೇನು? ಇಲ್ಲಿದೆ ಮಾಹಿತಿ.
ಅಮೆರಿಕ ಬಿಟ್ಟರೆ ಈ ಜಗತ್ತಿನ ಸೂಪರ್ ಪವರ್ ದೇಶ ಎಂದರೆ ಅದು ರಷ್ಯಾ. ಅದರಲ್ಲೂ ರಷ್ಯಾ ಈಗ ಅಮೆರಿಕನ ಮೀರಿ ಬೆಳೆಯಲು ಮುಂದಾಗಿದೆ. ಇದು ಸಹಜವಾಗಿಯೇ ಎರಡು ರಾಷ್ಟ್ರಗಳ ನಡುವೆ ಕಿಚ್ಚು ಹತ್ತಿಸಿದೆ. ಅದರಲ್ಲೂ ಉಕ್ರೇನ್ ಯುದ್ಧದ ವಿಚಾರದಲ್ಲಿ ರಷ್ಯಾ ವಿರುದ್ಧ ಅಮೆರಿಕ ಪರೋಕ್ಷ ಕದನ ಸಾರಿದೆ. ಪರಿಸ್ಥಿತಿ ಹೀಗಿದ್ದಾಗ ರಷ್ಯಾ ನೆಲದಲ್ಲೇ ದಂಗೆ ಶುರುವಾಗಿತ್ತು. ಸ್ವತಃ ರಷ್ಯಾ ಮೂಲದ ಸೇನೆಯೇ, ತನ್ನದೇ ದೇಶದ ವಿರುದ್ಧ ಹೋರಾಟ ಆರಂಭಿಸಿತ್ತು. ರಷ್ಯಾ ಖಾಸಗಿ ಸೇನೆ ರಾಜಧಾನಿ ಮಾಸ್ಕೋ ಕಡೆಗೆ ನುಗ್ಗಿ ಬರುತ್ತಿದ್ದ ವೇಳೆ, ಸಂಧಾನ ನಡೆದು ಎಲ್ಲವೂ ತಣ್ಣಗಾಗಿತ್ತು. ಆದರೆ ರಷ್ಯಾ ಅಧ್ಯಕ್ಷರ ಕಿಚ್ಚು ಮಾತ್ರ ಇನ್ನೂ ತಣ್ಣಗಾಗಿಲ್ಲ, ಪುಟಿನ್ ಆಕ್ರೋಶದ ಕಟ್ಟೆ ಒಡೆದೇ ಬಿಟ್ಟಿದೆ (Wagner Group Coup).

ರಷ್ಯಾದಲ್ಲಿ ರಕ್ತ ಹರಿಸಲು ಬಂದಿದ್ದರು!
ಹೌದು, ದಂಗೆ ಬಳಿಕ ಪುಟಿನ್ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಹಾಗೇ ಇನ್ನೂ ಕೆಲ ಮಾಹಿತಿಗಳ ಪ್ರಕಾರ ಪುಟಿನ್ ಈಗ ರಷ್ಯಾದಲ್ಲೇ ಇಲ್ಲ, ಬೇರೆ ಕಡೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಅದೆಲ್ಲಾ ಏನೇ ಇರಲಿ, ಆದರೆ ಪುಟಿನ್ ಈಗ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ತಮ್ಮ ಚುಟುಕು ಭಾಷಣದಲ್ಲಿ ವ್ಯಾಗ್ನರ್ ಪಡೆ ಅಂದರೆ ರಷ್ಯಾದ ಖಾಸಗಿ ಸೇನೆ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ವಿರುದ್ಧ ಪರೋಕ್ಷವಾಗಿ ಕುಟುಕಿದ್ದಾರೆ. ಅಲ್ಲದೆ ಈ ಖಾಸಗಿ ಸೇನೆ ರಷ್ಯಾದಲ್ಲಿ ರಕ್ತ ಹರಿಸಲು ಬಂದಿತ್ತು ಎಂಬುದನ್ನೂ ಹೇಳಿದ್ದಾರೆ. ರಷ್ಯಾದ ಜನ ಇಂತಹ ಸ್ಥಿತಿಯಲ್ಲಿ ಒಗ್ಗಟ್ಟಿನಿಂದ ಇರಬೇಕೆಂದು ಪುಟಿನ್ ಮನವಿ ಮಾಡಿದ್ದಾರೆ.
ಪುಟಿನ್ ಕ್ಷಮೆ ಕೇಳಿದ ಮಾಸ್ಟರ್ ಮೈಂಡ್
ನಿನ್ನೆ ರಾತ್ರಿ ಯೆವ್ಗೆನಿ ಪ್ರಿಗೊಝಿನ್ ಆಡಿಯೋ ಸಂದೇಶ ಕಳುಹಿಸಿದ್ದು, ಆಡಿಯೋದಲ್ಲಿ ತನ್ನ ತಪ್ಪಿನ ಬಗ್ಗೆ ಮಾತನಾಡಿದ್ದಾನೆ. ಅಲ್ಲದೆ ರಷ್ಯಾ ಖಾಸಗಿ ಸೇನೆಯ ಟಾರ್ಗೆಟ್ ಪುಟಿನ್‌ರ ಸರ್ಕಾರ ಆಗಿರಲಿಲ್ಲ, ನಮ್ಮ ಸಂಕಷ್ಟ ಹೇಳಿಕೊಳ್ಳಲು ಅನಿವಾರ್ಯವಾಗಿ ನಾವು ಅಟ್ಯಾಕ್ ಮಾಡಿದ್ದೇವೆ ಎಂದಿದ್ದಾನೆ. ರಷ್ಯಾದಲ್ಲಿ ಭುಗಿಲೆದ್ದಿರುವ ಜನರ ಆಂತರಿಕ ದಂಗೆ ಬಗ್ಗೆ ಯೆವ್ಗೆನಿ ಮಾತನಾಡಿ, ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ್ದಾನೆ. ಈ ಮೂಲಕ ಮಾಜಿ ಗುರು ಪುಟಿನ್ ಬಳಿ ಪರೋಕ್ಷವಾಗಿ ಕ್ಷಮೆ ಕೇಳಿದ್ದಾನೆ ಪ್ರಿಗೊಝಿನ್.

ರಷ್ಯಾ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ
ಕ್ಷಣಕ್ಷಣಕ್ಕೂ ತೀವ್ರವಾಗುತ್ತಿರುವ ಪರಿಸ್ಥಿತಿ, ಜೀವ ಭಯದಲ್ಲಿ ಬದುಕುತ್ತಿರುವ ಪ್ರಜೆಗಳು. ಇದು ರಷ್ಯಾದ ಈಗಿನ ಪರಿಸ್ಥಿತಿ, ಏಕೆಂದರೆ ಖಾಸಗಿ ಸೇನೆ ದಂಗೆ ನಂತರ ಇಡೀ ರಷ್ಯಾ ಬೂದಿ ಮುಚ್ಚಿದ ಕೆಂಡವಾಗಿದೆ. ನಾಗರಿಕರ ಹೋರಾಟ ಇಲ್ಲ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ಪುಟಿನ್ ಜೀವಕ್ಕೂ ಅಪಾಯ ಇದೆ ಎನ್ನಲಾಗಿದೆ. ಹೀಗಾಗಿ ರಷ್ಯಾದ ಪ್ರಧಾನಿ ಅಧ್ಯಕ್ಷರ ಬೆನ್ನಿಗೆ ನಿಂತಿದ್ದಾರೆ. ಸಂಕಷ್ಟದ ಪರಿಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಬೆನ್ನಿಗೆ ನಿಲ್ಲೋಣ ಬನ್ನಿ ಎಂದು ಕರೆ ನೀಡಿದ್ದಾರೆ. ರಷ್ಯಾದ ಉಪಪ್ರಧಾನಿ & ಸಚಿವರ ಜೊತೆ ಸಭೆ ನಡೆಸಿ ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಮನವಿ ಮಾಡಿದ್ದಾರೆ.
ಒಟ್ನಲ್ಲಿ ರಷ್ಯಾ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ. ಏನೋ ಮಾಡಲು ಹೋಗಿ ಏನೇನೋ ಆಗಿ ಹೋಗಿದೆ. ಖಾಸಗಿ ಸೇನೆ ಮಾಡಿದ ಎಡವಟ್ಟಿಗೆ ವ್ಲಾದಿಮಿರ್ ಪುಟಿನ್ ಕೂಡ ಚಿಂತಿತರಾಗಿ ಕೂತಿದ್ದಾರೆ. ಆದರೆ ರಷ್ಯಾ ಒಳಗೆ ಜನರು ದಂಗೆ ಏಳದಿದ್ದರೆ ಪರಿಸ್ಥಿತಿ ನಿಭಾಯಿಸುವುದು ಸುಲಭ. ಅಕಸ್ಮಾತ್ ದಂಗೆ ಜೋರಾದ್ರೆ ರಷ್ಯಾ ಕೂಡ ಹಿಂಸೆಯ ಜ್ವಾಲೆಯಲ್ಲಿ ನಲುಗಲಿದೆ. ಇದೇ ಕಾರಣಕ್ಕೆ ಈಗ ರಷ್ಯಾದ ರಾಜಧಾನಿ ಮಾಸ್ಕೋ ಸುತ್ತಮುತ್ತಲು ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜನೆ ಮಾಡಲಾಗಿದೆ. ಜೊತೆಗೆ ಪ್ರತಿಭಟನೆ ಹತ್ತಿಕ್ಕಲು ರಷ್ಯಾ ಸರ್ಕಾರ ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿದೆ.












Click it and Unblock the Notifications