Viral ಕೋತಿ ಪಂಚ್ ಗೊಂಬೆಗೆ ಭಾರಿ ಡಿಮ್ಯಾಂಡ್: ಜಗತ್ತಿನಾದ್ಯಂತ ಟಾಯ್ ಸೋಲ್ಡ್ ಔಟ್, 10 ಪಟ್ಟು ಹೆಚ್ಚಾಯ್ತು ಬೆಲೆ
ಜಪಾನ್‌ನ ಇಚಿಕಾವಾ ಸಿಟಿ ಮೃಗಾಲಯದಲ್ಲಿರುವ (Ichikawa City Zoo) 'ಪಂಚ್' ಎಂಬ 7 ತಿಂಗಳ ಮರಿ ಕೋತಿಯ ಕಥೆಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ತಾಯಿಯ ಪ್ರೀತಿಯಿಂದ ವಂಚಿತವಾಗಿದ್ದ ಈ ಪುಟ್ಟ ಮರಿ ಕೋತಿಗೆ ಐಕಿಯಾ (IKEA) ಕಂಪನಿಯ ಒರಾಂಗುಟಾನ್ ಸಾಫ್ಟ್ ಟಾಯ್ (ಗೊಂಬೆ) ಆಸರೆಯಾಗಿದ್ದು, ಈ ಫೋಟೋಗಳು ಜಗತ್ತಿನಾದ್ಯಂತ ವೈರಲ್ ಆಗಿವೆ. ಇದರ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಈ ನಿರ್ದಿಷ್ಟ ಗೊಂಬೆಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದ್ದು, ಹಲವು ದೇಶಗಳಲ್ಲಿ ಇದು ಸಂಪೂರ್ಣವಾಗಿ ಖಾಲಿ ಆಗಿದೆ. ಅಷ್ಟೇ ಅಲ್ಲ, ಮೂಲ ಬೆಲೆಗಿಂತ 10 ಪಟ್ಟು ಹೆಚ್ಚಿನ ರೇಟ್‌ಗೆ ಆನ್‌ಲೈನ್‌ನಲ್ಲಿ ಈ ಗೊಂಬೆಯನ್ನು ಮಾರಾಟ ಮಾಡಲಾಗುತ್ತಿದೆ.
ಪಂಚ್ ಮತ್ತು ಗೊಂಬೆಯ ಕಥೆ
ಪಂಚ್ ಎಂಬ ಈ ಮರಿ ಕೋತಿಯನ್ನು ಅದರ ತಾಯಿ ಹಾಗೂ ಮೃಗಾಲಯದ ಇತರ ಕೋತಿಗಳು ತಮ್ಮ ಗುಂಪಿನಿಂದ ತಿರಸ್ಕರಿಸಿದ್ದವು. ಗುಂಪಿನಿಂದ ಹೊರಗುಳಿದು ಒಂಟಿಯಾಗಿದ್ದ ಪಂಚ್, ತೀವ್ರ ಖಿನ್ನತೆ ಹಾಗೂ ಒಂಟಿತನದಿಂದ ಬಳಲುತ್ತಿತ್ತು. ಈ ವೇಳೆ ಮೃಗಾಲಯದ ಸಿಬ್ಬಂದಿ, ಅದಕ್ಕೆ ಸಾಂತ್ವನ ಹೇಳಲು ಮತ್ತು ಒಂಟಿತನ ದೂರ ಮಾಡಲು 20 ಡಾಲರ್ (ಸುಮಾರು 1,817 ರೂ.) ಮುಖಬೆಲೆಯ ಐಕಿಯಾ ಕಂಪನಿಯ 'ಡ್ಜುಂಗೆಲ್ಸ್‌ಕೋಗ್' (Djungelskog) ಎಂಬ ಒರಾಂಗುಟಾನ್ ಸಾಫ್ಟ್ ಟಾಯ್ ಅನ್ನು ನೀಡಿದ್ದರು.

ಈ ಗೊಂಬೆಯನ್ನು ಕಂಡೊಡನೆ ಪಂಚ್, ಅದನ್ನೇ ತನ್ನ ತಾಯಿ ಎಂದು ಭಾವಿಸಿತು. ಆ ಗೊಂಬೆಯನ್ನು ತಬ್ಬಿಕೊಂಡು ಮಲಗುವ, ಅದರೊಂದಿಗೇ ಆಟವಾಡುವ, ಮತ್ತು ಊಟ ಮಾಡುವ ದೃಶ್ಯಗಳು ನೋಡುಗರಲ್ಲಿ ಸಂಕಟವನ್ನುಂಟು ಮಾಡಿತ್ತು. ಮರಿ ಕೋತಿಯು ಗೊಂಬೆಯನ್ನು ಅಪ್ಪಿಕೊಂಡಿರುವ ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆದವು. ಜಗತ್ತಿನಾದ್ಯಂತ ನೆಟ್ಟಿಗರು ಈ ಮರಿ ಕೋತಿಯ ಕರುಣಾಜನಕ ಕಥೆ ಹಾಗೂ ಅದರ ಮುಗ್ಧತೆಗೆ ಮಾರುಹೋದರು.
ಆಕಾಶಕ್ಕೇರಿದ ಗೊಂಬೆಯ ಡಿಮ್ಯಾಂಡ್
ಪಂಚ್‌ನ ಫೋಟೋಗಳು ವೈರಲ್ ಆಗುತ್ತಿದ್ದಂತೆ, ಅಮೆರಿಕ, ಜಪಾನ್, ಮತ್ತು ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ಐಕಿಯಾ ಮಳಿಗೆಗಳಲ್ಲಿ ಈ ಒರಾಂಗುಟಾನ್ ಗೊಂಬೆಗಳು ಬಿಸಿ ದೋಸೆಯಂತೆ ಮಾರಾಟವಾಗಿವೆ. ಎಲ್ಲಿಯೂ ಈ ಗೊಂಬೆಗಳು ಸ್ಟಾಕ್ ಇಲ್ಲ. ಇದೇ ಅವಕಾಶವನ್ನು ಬಳಸಿಕೊಂಡ ಆನ್‌ಲೈನ್ ಮಾರಾಟಗಾರರು ಇ-ಬೇ (eBay) ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಗೊಂಬೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮೊದಲು ಕೇವಲ 1,817 ರೂ. ಇದ್ದ ಈ ಗೊಂಬೆ, ಈಗ 350 ಡಾಲರ್ (ಸುಮಾರು 31,803 ರೂ.) ವರೆಗೂ ಮಾರಾಟವಾಗುತ್ತಿದೆ.
ಐಕಿಯಾ ಕಂಪನಿಯ ಸ್ಪಂದನೆ
ಈ ವಿಚಾರ ಐಕಿಯಾ ಜಪಾನ್ ಸಂಸ್ಥೆಯ ಗಮನಕ್ಕೂ ಬಂದಿದೆ. ಈ ಮುದ್ದಾದ ಕಥೆಗೆ ಸ್ಪಂದಿಸಿರುವ ಸಂಸ್ಥೆಯ ಅಧ್ಯಕ್ಷೆ ಪೆಟ್ರಾ ಫೇರ್ ಅವರು, ಖುದ್ದಾಗಿ ಇಚಿಕಾವಾ ಸಿಟಿ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ. ಮರಿ ಕೋತಿ ಪಂಚ್‌ಗೆ ಎಂದಿಗೂ ಒಂಟಿತನ ಕಾಡದಿರಲಿ ಎಂದು, ಹಳೆಯ ಗೊಂಬೆ ಹಾಳಾದರೂ ಆಟವಾಡಲು ಅನುಕೂಲವಾಗುವಂತೆ ಇಂತಹದ್ದೇ ಹಲವು ಹೊಸ ಗೊಂಬೆಗಳನ್ನು ಮೃಗಾಲಯಕ್ಕೆ ಉಚಿತವಾಗಿ ಕೊಡುಗೆಯಾಗಿ ನೀಡಿದ್ದಾರೆ.
ಮಕಾಕ್ ತಳಿಯ ಕೋತಿಗಳು ಮನುಷ್ಯರಂತೆ ತುಂಬಾ ಭಾವನಾತ್ಮಕ ಜೀವಿಗಳು. ಈ ತಳಿಯ ಕೋತಿಗಳು ತಾಯಿ ಮತ್ತು ತನ್ನದೇ ಗುಂಪಿನಿಂದ ದೂರವಾದರೆ, ಮಾನಸಿಕವಾಗಿ ಕುಗ್ಗಿ ಹೋಗುತ್ತವೆ. ಈ ರೀತಿ ಭಾವನಾತ್ಮಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಮಕಾಕ್ ತಳಿಯ ಕೋತಿ ಮರಿಗೆ, ಮೃಗಾಲಯದ ಸಿಬ್ಬಂದಿ ನೀಡಿದ್ದ ಪುಟ್ಟ ಗೊಂಬೆ ಆಶಾದಾಯಕವಾಗಿತ್ತು. ಹೊಸ ಜೀವನುತ್ಸಾಹವನ್ನು ಮೂಡಿಸಿತ್ತು. ಲವಲವಿಕೆಯಿಂದ ಕುಣಿಯುವಂತೆ ಮಾಡಿತ್ತು. ಪ್ರಾಣಿಗಳಿಗೂ ಪ್ರೀತಿ ಮತ್ತು ಸಾಂತ್ವನದ ಅಗತ್ಯವಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮರಿ ಕೋತಿಯೊಂದು ತನ್ನ ಗೊಂಬೆಯನ್ನು ಬಿಡದೆ ಅಪ್ಪಿಕೊಂಡಿರುವ ಮನ ಮಿಡಿಯುವ ದೃಶ್ಯ ಈಗ ಜಗತ್ತಿನಾದ್ಯಂತ ವೈರಲ್ ಆಗಿ, ಹೊಸ ಟ್ರೆಂಡ್ ಸೃಷ್ಟಿಸಿದೆ.












Click it and Unblock the Notifications