ಮೆಕ್ಸಿಕನ್ ಚೆಲುವೆ ವನೆಸ್ಸಾಗೆ 2018ರ ವಿಶ್ವ ಸುಂದರಿ ಕಿರೀಟ
ಬೀಜಿಂಗ್, ಡಿಸೆಂಬರ್ 09 : ಮೆಕ್ಸಿಕನ್‌ನ ವನೆಸ್ಸಾ ಪೊನ್ಸ್ ಡೆ ಲಿಯಾನ್ 2018ನೇ ಸಾಲಿನ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದ 118 ದೇಶಗಳ ಸ್ಪರ್ಧಿಗಳು ಈ ಬಾರಿಯ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಚೀನಾದ ಸಸ್ಯಾ ಸಿಟಿ ಅರೇನಾದಲ್ಲಿ ನಡೆದ ಸ್ಪರ್ಧೆಯಲ್ಲಿ ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರು ವಿಶ್ವ ಸುಂದರಿಯಾಗಿ ಆಯ್ಕೆಯಾದರು. ಕಳೆದ ವರ್ಷದ ವಿಶ್ವಸುಂದರಿ ಪಟ್ಟ ಪಡೆದಿದ್ದ ಭಾರತೀಯ ಚೆಲುವೆ ಮಾನುಷಿ ಚಿಲ್ಲರ್ ವನೆಸ್ಸಾ ಅವರಿಗೆ ಕಿರೀಟ ತೊಡಿಸಿದರು.

ಭಾರತದಿಂದ ಈ ಬಾರಿ ಅನುಕೀರ್ತಿ ವ್ಯಾಸ್ ಅವರು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಟಾಪ್ 30ನೇ ರೌಂಡ್ ತನಕ ಅವರು ಬಂದಿದ್ದರು. ತಮಿಳುನಾಡು ಮೂಲದ ಅನುಕೀರ್ತಿ ವ್ಯಾಸ್ (20) ಈ ವರ್ಷದ ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದಾರೆ.
26 ವರ್ಷದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರು 68ನೇ ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡರೆ, ಥೈಲ್ಯಾಂಡ್‌ನ ನಿಕೊಲೀನ್ ಅವರು ಮೊದಲ ರನ್ನರ್ ಅಪ್ ಆದರು.
ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರು, 'ಪ್ರಶಸ್ತಿ ಸಿಕ್ಕಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸ್ಪರ್ಧೆಯಲ್ಲಿದ್ದ ಎಲ್ಲರೂ ಪ್ರಶಸ್ತಿಗೆ ಅರ್ಹರಾಗಿದ್ದರು. ಹೆಚ್ಚು ಶ್ರಮ ಪಟ್ಟಿದ್ದರಿಂದ ನನಗೆ ಪ್ರಶಸ್ತಿ ಸಿಕ್ಕಿದೆ' ಎಂದು ಹೇಳಿದರು.
ಇಂಟರ್ ನ್ಯಾಷನಲ್ ಬ್ಯುಸಿನೆಸ್‌ನಲ್ಲಿ ಪದವಿ ಪಡೆದಿರುವ ವನೆಸ್ಸಾ ಪೊನ್ಸ್ ಡೆ ಲಿಯಾನ್ ಅವರು ಹೆಣ್ಣು ಮಕ್ಕಳು ಹಾಗೂ ಸ್ವಯಂ ಸೇವಕರ ಪುರ್ವವಸತಿ ಕೇಂದ್ರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾಡೆಲ್ ಹಾಗೂ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ವಾಲಿಬಾಲ್, ಚಿತ್ರಕಲೆ ಮತ್ತಿತರ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ವನೆಸ್ಸಾ ಪೊನ್ಸ್ ಡೆ ಲಿಯಾನ್ ಬಯಲು ನೀರಿನಲ್ಲಿ ಸ್ಕೂಬಾ ಡ್ರೈವರ್ ಆಗಿ ಕೂಡಾ ಅರ್ಹತೆ ಹೊಂದಿದ್ದಾರೆ.












Click it and Unblock the Notifications