ಖಲಿಸ್ತಾನಿ ಉಗ್ರರ ವಿಚಾರದಲ್ಲಿ ಉಲ್ಟಾ ಹೊಡೆಯಿತಾ ಅಮೆರಿಕ?
ಖಲಿಸ್ತಾನಿ ಉಗ್ರರ ವಿಚಾರ ಹಿಡಿದುಕೊಂಡು ಭಾರತದ ಜೊತೆಗೆ ಕಿರಿಕ್ ತೆಗೆಯುತ್ತಿರುವ ಕೆಲ ಪಾಶ್ಚಿಮಾತ್ಯ ದೇಶಗಳು, ಈಗಲೂ ತಮ್ಮ ಕಿತಾಪತಿ ನಿಲ್ಲಿಸುತ್ತಿಲ್ಲ. ಅದ್ರಲ್ಲೂ ವಿದೇಶದಲ್ಲಿ ಹತ್ಯೆಯಾದ ಕೆಲವು ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕರ ಸಾವಿಗೆ ಭಾರತವನ್ನು ಹೊಣೆ ಮಾಡುವ ಪ್ರಯತ್ನ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಅಮೆರಿಕ ದಾರಿಗೆ ಬಂದಂತೆ ಈಗ ಕಾಣ್ತಾ ಇದೆ!
ಖಾಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆ ಯತ್ನ ಕುರಿತು ಭಾರತದ ಬಗ್ಗೆ ಮಾತನಾಡಿದ್ದ ಅಮೆರಿಕ ಈಗ ಹೊಸ ವರಸೆ ಶುರು ಮಾಡಿದೆ. ಪನ್ನು ಹತ್ಯೆ ಯತ್ನದ ಹಿಂದೆ ಇರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅಮೆರಿಕ ಈಗ, ಭಾರತ ಸರ್ಕಾರದ ಜೊತೆಗೆ ಕೆಲಸ ಮಾಡ್ತಿದೆ ಎಂದು ಜೋ ಬೈಡನ್ ಆಡಳಿತದ ಅಧಿಕಾರಿಗಳು ಮಾಹಿತಿಯನ್ನ ನೀಡಿದ್ದಾರೆ. ಪನ್ನು ಹತ್ಯೆಗೆ ಅಮೆರಿಕದಲ್ಲಿ ನಡೆದಿರುವ ವಿಫಲ ಯತ್ನ ಹಿಂದೆ ಭಾರತೀಯ ಪ್ರಜೆ ನಿಖಿಲ್ ಗುಪ್ತ ಪಾತ್ರ ಇದೆ ಎಂದು ಅಮೆರಿಕದ ಅಧಿಕಾರಿಗಳು ಆರೋಪ ಮಾಡಿದ್ದರು.

ಖಲಿಸ್ತಾನಿಗಳ ಕಿರಿಕ್ ನಿಲ್ಲುತ್ತಾ?
ಗುರುಪತ್ವಂತ್ ಸಿಂಗ್ ಪನ್ನು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಸದ್ಯ ನೆಲೆಸಿದ್ದು ಈಗಾಗಲೇ ಪನ್ನು ಹತ್ಯೆಯ ಆರೋಪಗಳ ಕುರಿತು, ತನಿಖೆ ನಡೆಸಲು ಸಮಿತಿ ರಚನೆಯಾಗಿದೆ. ಈ ನಡುವೆ ಅಮೆರಿಕ ಆಡಳಿತ ಭಾರತದ ಜೊತೆಗೆ ಸೇರಿ ಪನ್ನು ಹತ್ಯೆ ಯತ್ನದ ಆರೋಪಿಗಳನ್ನ ಲಾಕ್ ಮಾಡಲು ಮುಂದಾಗಿದೆ. ಹೀಗಾಗಿ ಕುತೂಹಲ ಹೆಚ್ಚಾಗಿದೆ. ಆರಂಭದಲ್ಲಿ ಈ ವಿಚಾರವಾಗಿ ಅಮೆರಿಕ ಕಿರಿಕ್ ಶುರು ಮಾಡಿತ್ತು. ಆದ್ರೆ ಈಗ ದಾರಿಗೆ ಬಂದಂತೆ ಕಾಣ್ತಾ ಇದೆ. ಹೀಗಾಗಿಯೇ ಭಾರತದ ಜೊತೆಗೆ ಸೇರಿ ತನಿಖೆ ನಡೆಸಲು ಮುಂದಾಗಿದೆ.
ಅಮೆರಿಕದ ಆರೋಪ ಏನಾಗಿತ್ತು?
ಖಲಿಸ್ತಾನ್ ರಾಷ್ಟ್ರದ ಸ್ಥಾಪನೆ ಪ್ರತಿಪಾದಿಸುತ್ತಿರುವ ಅಮೆರಿಕ ಪ್ರಜೆ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು ಎಂಬ ಆರೋಪ ಅಮೆರಿಕ ಮಾಡಿತ್ತು. ಈ ಸಂಬಂಧ, ಮಹತ್ವದ ಬೆಳವಣಿಗೆ ನಡೆದಿದೆ. ಅಮೆರಿಕಗೂ ಮೊದಲು, ಕೆನಡಾ ಇದೇ ರೀತಿ ಖಲಿಸ್ತಾನಿ ಉಗ್ರರ ಬಗ್ಗೆ ಭಾರತದ ವಿರುದ್ಧ ಹಲವಾರು ಆರೋಪ ಮಾಡಿ ಟೀಕೆಗೆ ಗುರಿಯಾಗಿತ್ತು. ಇದೀಗ ಅಮೆರಿಕದ ಆಡಳಿತ ದಾರಿಗೆ ಬಂದಂತೆ ಕಾಣುತ್ತಿದೆ. ಭಾರತದ ಜೊತೆ ಈ ವಿಚಾರದಲ್ಲಿ ಕಿರಿಕ್ ಮಾಡಿ, ಸಂಬಂಧ ಕೆಡಿಸಿಕೊಳ್ಳುವ ಬದಲು ಸಂಧಾನ ಸೂತ್ರ ನಡೆಸುವುದು ಉತ್ತಮ ಎಂಬಂತೆ ಈಗ ಹೆಜ್ಜೆ ಇಟ್ಟಂತೆ ಕಾಣುತ್ತಿದೆ.
ಒಟ್ನಲ್ಲಿ ಭಾರತದ ನೆಮ್ಮದಿ ಕೆಡಿಸಿರುವ ಖಲಿಸ್ತಾನಿ ಉಗ್ರರು ಈಗ ಹೊರ ದೇಶಗಳ ಬೆಂಬಲ ಪಡೆದು, ಭಾರತದ ವಿರುದ್ಧ ವಿಷ ಕಾರುತ್ತಿದ್ದಾರೆ. ಭಾರತ ಕೂಡ ಇವರನ್ನೆಲ್ಲಾ ಅವರದ್ದೇ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಿದೆ. ಅದರಲ್ಲೂ ಕೆನಡಾ ಈ ವಿಚಾರದಲ್ಲಿ ದುಡುಕಿದ್ದು, ಭಾರತದ ಜೊತೆಗಿನ ಸಂಬಂಧ ಹಾಳು ಮಾಡಿಕೊಂಡಿದೆ. ಹೀಗಾಗಿಯೇ ಅಮೆರಿಕ ಅಲರ್ಟ್ ಆಗಿ ಸಂಬಂಧ ಉಳಿಸಿಕೊಳ್ಳಲು ಮುಂದಾದಂತೆ ಕಾಣುತ್ತಿದೆ. ಬಾಯಿಗೆ ಬಂದಂತೆ ಆರೋಪ ಮಾಡುವ ಬದಲು ಭಾರತದ ಜೊತೆ ಸೇರಿ ಸೂಕ್ತ ತನಿಖೆ ನಡೆಸಲು ಮುಂದಾದಂತೆ ಇದೀಗ ಕಾಣುತ್ತಿದೆ.












Click it and Unblock the Notifications