ಇರಾನ್ ಮತ್ತು ಅಮೆರಿಕ ಪರಮಾಣು ಶಾಂತಿ ಒಪ್ಪಂದಕ್ಕೆ ಕ್ಷಣಗಣನೆ, ಚರ್ಚೆ ಕೈಕೊಟ್ಟರೆ ಯುದ್ಧ ಭೀತಿ | USA And Iran
ಅಮೆರಿಕ ಕಣ್ಣು ಇದೀಗ ಸಂಪೂರ್ಣ ಇರಾನ್ ಮೇಲೆ ನೆಟ್ಟಿದ್ದು, ತಮ್ಮ ಜೊತೆಗೆ ಪರಮಾಣು ಶಾಂತಿ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳದೇ ಇದ್ದರೆ ಯುದ್ಧ ಗ್ಯಾರಂಟಿ ಅಂತಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಇರಾನ್ ನಾಯಕರಿಗೆ ಈ ವಿಚಾರದಲ್ಲಿ ಸಾಲು ಸಾಲು ಎಚ್ಚರಿಕೆ ನೀಡಿದ್ದು, ಯಾವ ಕ್ಷಣದಲ್ಲಿ ಯುದ್ಧ ಶುರುವಾಗುತ್ತೋ? ಎಂಬ ಚರ್ಚೆ ನಡೆದಿದೆ. ಇದೇ ಸಮಯಕ್ಕೆ ಸ್ವಿಝರ್ಲ್ಯಾಂಡ್‌ನ ಜಿನೇವಾದಲ್ಲಿ ಅಮೆರಿಕ & ಇರಾನ್ ನಡುವೆ ಚರ್ಚೆ ಆರಂಭ ಆಗಲಿದೆ. ಅತ್ಯಂತ ಬಿಗಿ ಭದ್ರತೆ ನಡುವೆ ಈಗ ಅಮೆರಿಕ & ಇರಾನ್ ನಾಯಕರು ಹಾಗೂ ಅಧಿಕಾರಿಗಳು ಚರ್ಚೆ ಶುರು ಮಾಡಲು ಸಿದ್ಧರಾಗಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ಯುದ್ಧಕ್ಕೆ ವೇದಿಕೆ ಸಿದ್ಧವಾಗಿರುವಾಗ ಮಾತುಕತೆ ಆರಂಭ ಆಗುತ್ತಿದೆ. ಈಗಾಗಲೇ ಇರಾನ್ ನಾಯಕರು ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳ ವಿರುದ್ಧ ಪದೇ ಪದೇ ತಮ್ಮ ಆಕ್ರೋಶ ಹೊರ ಹಾಕುತ್ತಾ ಬಂದಿದ್ದಾರೆ. ಪ್ರಮುಖವಾಗಿ ಇರಾನ್ ಗಡಿಯಲ್ಲಿ ಅಮೆರಿಕದ ಸೇನೆ ಮತ್ತು ಯುದ್ಧ ನೌಕೆಗಳ ನಿಯೋಜನೆ ವಿಚಾರದಲ್ಲಿ ಪದೇ ಪದೇ ಕಿರಿಕ್ ಆಗಿದೆ. ಅದರಲ್ಲೂ ಇನ್ನೇನು ಈಗ ಯುದ್ಧ ಶುರು ಆಗೇ ಬಿಡುತ್ತೆ ಎಂಬ ವಾತಾವರಣದಲ್ಲಿ ಮತ್ತೆ ಎಲ್ಲವೂ ತಣ್ಣಗಾಗುತ್ತಿದೆ.

ಮತ್ತೊಂದು ಕಡೆ ಇರಾನ್ & ಅಮೆರಿಕ ನಡುವಿನ ಈ ಯುದ್ಧ ವಾತಾವರಣ, ಜಾಗತಿಕ ಷೇರು ಮಾರುಕಟ್ಟೆ ಅಲ್ಲಾಡಿ ಹೋಗುವಂತೆ ಮಾಡಿದೆ. ಹತ್ತಾರು ಕಾರಣಗಳಿಗೆ ಇರಾನ್ ಮತ್ತು ಅಮೆರಿಕ ನಡುವಿನ ತಿಕ್ಕಾಟ ಭೀತಿ ಹುಟ್ಟುಹಾಕಿದ್ದು, ಜಗತ್ತು ಆತಂಕದ ಕಂಗಳಿಂದ ಇದನ್ನು ಗಮನಿಸುತ್ತಿದೆ. ಈ ಕಾರಣಗಳಿಂದ ಎಲ್ಲದಕ್ಕೂ ಬ್ರೇಕ್ ಹಾಕಲು ಮಹತ್ವದ ಮಾತುಕತೆಗೆ ಸಭೆ ಆಯೋಜನೆ ಮಾಡಲಾಗಿದೆ. ಭಾರಿ ಭದ್ರತೆ ನಡುವೆ ಎರಡೂ ದೇಶಗಳ ಪ್ರತಿನಿಧಿಗಳು ಚರ್ಚೆ ನಡೆಸಲಿದ್ದಾರೆ.
ಜಿನೇವಾದಲ್ಲಿ ಮಹತ್ವದ ಚರ್ಚೆಗೆ ವೇದಿಕೆ
ಸ್ವಿಝರ್ಲ್ಯಾಂಡ್ ಜಾಗತಿಕ ಮಟ್ಟದಲ್ಲಿ ಹಲವು ಸಂಧಾನ ಸಭೆಗಳಿಗೆ ವೇದಿಕೆ ಆಗುತ್ತಿದೆ. ಪ್ರಮುಖವಾಗಿ ಇಲ್ಲಿನ ಜಿನೇವಾ ಕಳೆದ ಕೆಲವು ವರ್ಷಗಳಲ್ಲಿ ಹಲವು ದೊಡ್ಡ, ದೊಡ್ಡ ಹಿಂಸಾಚಾರಗಳನ್ನು ತಪ್ಪಿಸಿ ಶಾಂತಿ ನೆಲೆಸುವಂತೆ ಮಾಡಲು ಯಶಸ್ವಿಯಾಗಿದೆ. ಈಗಲೂ ಇರಾನ್ ಮತ್ತು ಅಮೆರಿಕ ನಡುವೆ ಶಾಂತಿ ಒಪ್ಪಂದಕ್ಕೆ ವೇದಿಕೆ ಒದಗಿಸಿ ಕಾಯುತ್ತಿದೆ. ಪರಮಾಣು ಅಸ್ತ್ರಗಳ ವಿಚಾರದಲ್ಲಿ ಇರಾನ್ ಒಪ್ಪಂದದ ಮೂಲಕ ತಮ್ಮ ಜೊತೆಗೆ ಇರಬೇಕು ಎಂಬುದು ಅಮೆರಿಕ ತಂತ್ರವಾಗಿದೆ. ಅಲ್ಲದೇ ಇರಾನ್ ಅಣ್ವಸ್ತ್ರ ತಯಾರಿಸಬಾರದು ಎಂಬ ಕಾರಣಕ್ಕೆ ಅಮೆರಿಕ ಎಲ್ಲಾ ರೀತಿಯ ಒತ್ತಡವನ್ನೂ ಹೇರುತ್ತಿದೆ. ಹೀಗಾಗಿ ಎರಡೂ ದೇಶಗಳ ಚರ್ಚೆ ಕುತೂಹಲ ಮೂಡಿಸಿದೆ.












Click it and Unblock the Notifications