ಸಣ್ಣ ನಗರಕ್ಕಾಗಿ ರಕ್ತದ ಕೋಡಿ ಹರಿಸಿದ ಉಕ್ರೇನ್-ರಷ್ಯಾ!
ಬಖ್‌ಮತ್, ಉಕ್ರೇನ್: 'ವಿನಾಶ ಕಾಲೇ ವಿಪರೀತ ಬುದ್ಧಿ' ಅನ್ನೋ ಹಾಗೆ ರಷ್ಯಾ & ಉಕ್ರೇನ್ ಯುದ್ಧ ಕಾರಣ ಇಲ್ಲದೆ ಉಗ್ರರೂಪ ಪಡೆಯುತ್ತಿದೆ. ಅದ್ರಲ್ಲೂ ಬಖ್‌ಮತ್ ಎಂಬ ಒಂದು ಪುಟಾಣಿ ನಗರಕ್ಕಾಗಿ ಎರಡೂ ಸೇನೆ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು ಇದೊಂದು ನಗರಕ್ಕೆ ಉಕ್ರೇನ್ & ರಷ್ಯಾ ರಕ್ತದ ಕೋಡಿ ಹರಿಸುತ್ತಿವೆ. ಹಾಗಾದ್ರೆ ಬಖ್‌ಮತ್ ನಗರದಲ್ಲಿ ಅಂತಹದ್ದು ಏನಿದೆ? ಬನ್ನಿ ತಿಳಿಯೋಣ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿ 454 ದಿನ ಕಳೆದಿದೆ. ಒಂದೆರಡು ವಾರದಲ್ಲಿ ಯುದ್ಧ (Russia Ukraine War) ನಿಲ್ಲುತ್ತೆ ಎಂಬ ಮಾತು ಕೇಳಿಬಂದಿತ್ತು. ಆದ್ರೆ ಒಂದೆರಡು ವರ್ಷ ಮುಂದುವರಿಯುವ ಲಕ್ಷಣ ಕಾಣಿಸುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದ ಕಾರಣ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ. ಇಷ್ಟಾದ್ರೂ ಎರಡೂ ರಾಷ್ಟ್ರಗಳ ಮಧ್ಯೆ ಶಾಂತಿ ಮಾತುಕತೆ ನಡೆಯುತ್ತಿಲ್ಲ, ಯುದ್ಧ ನಿಲ್ಲುತ್ತಿಲ್ಲ. ಇದು ಬಿಡಿ ಬಖ್‌ಮತ್ (Bakhmut) ಎಂಬ ಒಂದು ಸಣ್ಣ ಸಿಟಿ ವಶಕ್ಕೆ ಪಡೆಯಲು ಬೀದಿಗೆ ಇಳಿದಿವೆ ಉಕ್ರೇನ್ & ರಷ್ಯಾ ಪಡೆಗಳು.

ಆಯಕಟ್ಟಿನ ಜಾಗ ಪಡೆಯಲು ರಕ್ತಾಭಿಷೇಕ!
ಹೌದು, ರಷ್ಯಾ ಗಡಿಯಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಇರುವ ಈ ನಗರ ಗೆದ್ದರೆ ತಮಗೆ ಮುಂದೆ ಅನುಕೂಲ ಆಗಬಹುದು ಎಂಬ ಲೆಕ್ಕಾಚಾರ ರಷ್ಯಾದ್ದು. ಆದರೆ ರಷ್ಯಾ ಈ ನಗರ ವಶಕ್ಕೆ ಪಡೆದರೆ ಉಕ್ರೇನ್‌ಗೆ ಭಾರಿ ಹಿನ್ನಡೆಯಾಗಲಿದೆ. ಇದೇ ಕಾರಣಕ್ಕೆ ಬಖ್‌ಮತ್ ಸಿಟಿ ವಿಚಾರದಲ್ಲಿ ರಷ್ಯಾ ಮತ್ತು ಉಕ್ರೇನ್ ಪಡೆಗಳು ಜಿದ್ದಿಗೆ ಬಿದ್ದು ಹೋರಾಡುತ್ತಿವೆ. ನಿನ್ನೆಯಷ್ಟೇ ಈ ನಗರವನ್ನ ಮತ್ತೆ ವಶಕ್ಕೆ ಪಡೆದಿದ್ದೇವೆ ಎಂದಿತ್ತು ರಷ್ಯಾದ ಸೇನೆ. ಆದರೆ ಉಕ್ರೇನ್ ಅಧ್ಯಕ್ಷ ಇದನ್ನ ನಿರಾಕರಿಸಿ, ಬಖ್‌ಮತ್ ನಮ್ಮ ಕೈಬಿಟ್ಟು ಹೋಗಿಲ್ಲ ಅಂತಿದ್ದಾರೆ.
ಒಂದೇ ದಿನದಲ್ಲಿ ಬದಲಾದ ಹಣೆಬರಹ!
ಅಮೆರಿಕ & ನ್ಯಾಟೋ ಪಡೆಗಳ ಬೆಂಬಲದಿಂದ ರಷ್ಯಾ ವಿರುದ್ಧ ಉಕ್ರೇನ್ ವಿನಾಶಕಾರಿ ರೀತಿ ವರ್ತನೆ ತೋರುತ್ತಿರುವ ಆರೋಪ ಇದೆ. ಈ ಕಾರಣಕ್ಕೆ ರಷ್ಯಾ ವಶದಲ್ಲಿದ್ದ ಬಖ್‌ಮತ್ ನಗರದ ಮೇಲೆ ಉಕ್ರೇನ್ ರಂಜಕ ಬಾಂಬ್ ಎಸೆದಿದೆ ಎಂಬ ಆರೋಪ ಇದೇ ತಿಂಗಳ ಆರಂಭದಲ್ಲಿ ಕೇಳಿಬಂದಿತ್ತು. ಇದು ರಷ್ಯಾ ಅಧ್ಯಕ್ಷ ಪುಟಿನ್ ಪಿತ್ತ ನೆತ್ತಿಗೇರಿಸಿತ್ತು, ನಂತರ ಬಖ್‌ಮತ್ ನಗರವನ್ನ ವಶಕ್ಕೆ ಪಡೆದಿತ್ತು ಉಕ್ರೇನ್. ಆದ್ರೆ ರಷ್ಯಾ ಸೇನೆ ಕಂಬ್ಯಾಕ್ ಮಾಡಿ ಬಖ್‌ಮತ್ ಸಿಟಿ ನಮ್ಮ ವಶವಾಗಿದೆ ಎಂದು ಸಂಭ್ರಮಿಸಿತ್ತು, ಈಗ ನೋಡಿದರೆ ಕೇಸ್ ಉಲ್ಟಾ ಆಗಿದೆ.

ಸಹಾಯ ಸಿಕ್ಕ ತಕ್ಷಣ ಪುಟಿದೆದ್ದ ಉಕ್ರೇನ್
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆ ಕೃತ್ಯಗಳಿಗೆ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ರಷ್ಯಾದ ಗಡಿಯಲ್ಲಿ ಉಕ್ರೇನ್ ಸೇನೆ ಭೀಕರ ದಾಳಿ ನಡೆಸುತ್ತಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಷ್ಯಾ ಸೇನೆ ಪಣತೊಟ್ಟಿದೆ. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ನೆಮ್ಮದಿ ಹಾಳಾಗಿ ಹೋಗುತ್ತಿದೆ. ಉಕ್ರೇನ್ & ರಷ್ಯಾ ಗಡಿಯಲ್ಲಿ ವಾಸ ಮಾಡುವ ಜನರ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ.
ಬಿಟ್ಟಿಯಾಗಿ ಏನಿಲ್ಲಾ ಕೊಟ್ಟಿದೆ ಅಮೆರಿಕ?
ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಅಮೆರಿಕ. ದಾನ ಕೊಡುತ್ತಿರುವ ಶಸ್ತ್ರಾಸ್ತ್ರಗಳಲ್ಲಿ, ಆಕಾಶದಿಂದಲೇ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೈಡ್ರಾ-70 ರಾಕೆಟ್ ಕೂಡ ಸೇರಿವೆ. ಜೊತೆಗೆ ಮಿಸೈಲ್, ಬಾಂಬ್, ಮದ್ದುಗುಂಡು ಹೀಗೆ ಲೆಕ್ಕವಿಲ್ಲದಷ್ಟು ಶಸ್ತ್ರಾಸ್ತ್ರ ಅಮೆರಿಕದಿಂದ ಉಕ್ರೇನ್ ಉಗ್ರಾಣ ಸೇರುತ್ತಿದೆ. ಜೊತೆಗೆ ಮಿಸೈಲ್ ಡಿಫೆನ್ಸ್ ಸಿಸ್ಟಮ್ ಕೂಡ ಬಿಟ್ಟಿಯಾಗಿ ಉಕ್ರೇನ್ ಪಾಲಾಗಿದೆ.
ಹೀಗೆ 'ನಾ ಕೊಡೆ ನೀ ಬಿಡೆ' ಎಂಬ ಸ್ಥಿತಿಗೆ ರಷ್ಯಾ & ಉಕ್ರೇನ್ ಯುದ್ಧ ಬಂದು ನಿಂತಿದೆ. ಇವರಿಬ್ಬರ ಜಗಳಕ್ಕೆ ಕೇವಲ 70ರಿಂದ 80 ಸಾವಿರ ಜನರು ವಾಸ ಇರುವ ಬಖ್‌ಮತ್ ನಗರ ಧಗಧಗ ಹೊತ್ತಿ ಉರಿಯುತ್ತಿದೆ. ಜನರು ನೆಮ್ಮದಿಯಾಗಿ ಬದುಕುತ್ತಿದ್ದ ಬಖ್‌ಮತ್ ನಗರದಲ್ಲಿ ಹೆಣಗಳ ರಾಶಿ ಬಿದ್ದಿದೆ. ಗಣಿಗಾರಿಕೆ ನಡೆಸುತ್ತಿದ್ದರೂ ಈ ಜಾಗ ಮಾತ್ರ ಅತಿ ಸುಂದರವಾಗಿತ್ತು, ಆದರೆ ಯುದ್ಧ ಆರಂಭವಾದ ನಂತರ ನರಕವಾಗಿ ಬದಲಾಗಿದೆ.












Click it and Unblock the Notifications