ರಷ್ಯಾಗೆ ಆಘಾತ ನೀಡಿದ ಉಕ್ರೇನ್ ಮಿಲಿಟರಿ: ಪರಿಸ್ಥಿತಿ ಮತ್ತಷ್ಟು ಭೀಕರ?
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಕಾಳಗ ಈಗ ಕೈಮೀರಿ ಹೋಗಿದ್ದು, ಜನರು ಜೀವ ಉಳಿಸಿಕೊಳ್ಳಲು ಓಡಿ ಹೋಗುತ್ತಿದ್ದಾರೆ. ಅದರಲ್ಲೂ ರಷ್ಯಾ ನೆಲಕ್ಕೆ ನುಗ್ಗಿರುವ ಉಕ್ರೇನ್ ಸೇನೆ ಇದೀಗ ರಷ್ಯಾದ ಮೇಲೆ ಭಾಗಶಃ ನಿಯಂತ್ರಣ ಸಾಧಿಸಿದೆ ಎಂಬ ಆರೋಪವು ಕೂಡ ಕೇಳಿಬಂದಿದೆ. ಹಾಗಾದ್ರೆ ಉಕ್ರೇನ್ ದಾಳಿಗೆ ಉತ್ತರ ನೀಡಲು ಇದೀಗ ರಷ್ಯಾ ಸೇನೆಯು ಮತ್ತಷ್ಟು ಭೀಕರ ದಾಳಿ ನಡೆಸುತ್ತಾ? ಬನ್ನಿ ತಿಳಿಯೋಣ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರೊಚ್ಚಿಗೆದ್ದು ಹೊಸ ಆದೇಶ ನೀಡಿದ್ದಾರೆ. ರಷ್ಯಾದಲ್ಲಿ ಗಡಿ ದಾಟಿ ಒಳಗೆ ಬಂದಿರುವ ಉಕ್ರೇನ್ ಸೈನಿಕರನ್ನ ಒದ್ದು ಓಡಿಸುವಂತೆ ರಷ್ಯಾ ಮಿಲಿಟರಿಗೆ ಆದೇಶ ನೀಡಿದ್ದಾರೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ವ್ಲಾದಿಮಿರ್ ಪುಟಿನ್ ಅವರು ಸಭೆಗಳನ್ನ ನಡೆಸುತ್ತಿದ್ದಾರೆ. ಹೀಗೆ ಸಭೆಗಳನ್ನ ನಡೆಸಿ ರಷ್ಯಾ ಸೇನೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ವ್ಲಾದಿಮಿರ್ ಪುಟಿನ್, ಯಾವುದೇ ಕಾರಣಕ್ಕೂ ಶತ್ರು ಸೇನೆ ನಮ್ಮ ಗಡಿಯ ಒಳಗೆ ಇರಬಾರದು ಎಂದಿದ್ದಾರೆ. ಅಲ್ಲದೆ ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಮತ್ತಷ್ಟು ಘೋರ ದಾಳಿಗೂ ಸಿದ್ಧವಾಗುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದೆ.

ಉಕ್ರೇನ್ ಅಧ್ಯಕ್ಷನೇ ಟಾರ್ಗೆಟ್?
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾಡಿಕೊಂಡ ಎಡವಟ್ಟುಗಳ ಸಂಖ್ಯೆ ಒಂದೆರಡಲ್ಲ. ಅದರಲ್ಲೂ ರಷ್ಯಾ ನೆಲಕ್ಕೆ ನುಗ್ಗಿ ದಾಳಿ ಮಾಡಲು ಇದೀಗ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಆದೇಶ ನೀಡಿರುವುದು ಭಾರಿ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದಾಗಲೇ ರಷ್ಯಾ ಅಧ್ಯಕ್ಷ ಪುಟಿನ್ ಕೂಡ ಈ ವಿಚಾರವಾಗಿ ವಾರ್ನಿಂಗ್ ಕೊಟ್ಟಿದ್ದು, ಉಕ್ರೇನ್ ಇದೀಗ ರಷ್ಯಾ ಮೇಲೆ ದಾಳಿ ಮಾಡಿದ್ದಕ್ಕೆ ತಕ್ಕ ಶಿಕ್ಷೆ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ ಹಲವು ಬಾರಿ ಉಕ್ರೇನ್ ಭಾರತದ ವಿರುದ್ಧ ಕೂಡ ಮಾತನಾಡಿ ಸರಿಯಾಗಿ ಪಾಠ ಕಲಿತಿದೆ. ತನ್ನ ಕೈಯಲ್ಲಿ ಆಗುತ್ತಿಲ್ಲ ಎಂಬ ಕಾರಣಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಉಕ್ರೇನ್ ಅಧ್ಯಕ್ಷ.
ಉ.ಕೊರಿಯಾ ಅಸ್ತ್ರಗಳು ರಷ್ಯಾ ಬಳಿ?
ದಿಢೀರ್ ರಷ್ಯಾ ಸೇನೆ ತನ್ನ ಶತ್ರು ಉಕ್ರೇನ್ ವಿರುದ್ಧ ಸುಮಾರು 57 ಡ್ರೋನ್ ಹಾರಿಸಿದ್ದು, ಈ 57 ಡ್ರೋನ್ ಪೈಕಿ ಒಟ್ಟು 53 ಡ್ರೋನ್‌ಗಳನ್ನು ಹೊಡೆದು ಉರುಳಿಸಲಾಗಿದೆ. ಈ ಕುರಿತು ಉಕ್ರೇನ್ ವಾಯುಪಡೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೆಲ್ಲಕ್ಕಿಂತ ಭಯಾನಕ ಆರೋಪ ಏನು ಅಂದ್ರೆ, ಉತ್ತರ ಕೊರಿಯಾದಲ್ಲಿ ನಿರ್ಮಿಸಿರುವ 4 ಕ್ಷಿಪಣಿಗಳನ್ನು ಕೂಡ ರಷ್ಯಾ ಸೇನೆ ಬಳಸಿಕೊಂಡು ದಾಳಿ ಮಾಡಿದೆ ಎಂಬ ಗಂಭೀರ ಆರೋಪ ಮಾಡಿದೆ ಉಕ್ರೇನ್ ಸೇನೆ. ಹೀಗೆ ರಷ್ಯಾ & ಉಕ್ರೇನ್ ನಡುವೆ ತಿಕ್ಕಾಟ ಮತ್ತಷ್ಟು ಹೆಚ್ಚಾಗುತ್ತಿದೆ.
ಭಾರತೀಯರ ಬಗ್ಗೆ ಹೇಳಿದ್ದು ಏನು?
ರಷ್ಯಾ & ಉಕ್ರೇನ್ ನಡುವೆ ಭೀಕರ ರಣಕಾಳಗ ನಡೆಯುತ್ತಿದ್ದು, ಭಾರಿ ಆತಂಕ ಮನೆಮಾಡಿದೆ. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಭಾರತೀಯ ಪ್ರಜೆಗಳು ಮೃತಪಟ್ಟಿದ್ದು ದುರದೃಷ್ಟಕರ ಎಂದಿದೆ ರಷ್ಯಾ ರಾಯಭಾರ ಕಚೇರಿ. ಅಲ್ಲದೆ ಭಾರತ ಮೂಲದ ಪ್ರಜೆಗಳನ್ನು ಮುಂದೆ ರಷ್ಯಾ ಸೇನೆಗೆ ನೇಮಕ ಮಾಡಿಕೊಳ್ಳುವುದಿಲ್ಲ ಎಂಬುದಾಗಿ ಕೂಡ ತಿಳಿಸಲಾಗಿದೆ. ಆ ಮೂಲಕ ಇದೇ ಏಪ್ರಿಲ್ ತಿಂಗಳಿಂದಲೇ ರಷ್ಯಾ ಸಶಸ್ತ್ರ ಪಡೆಗಳಿಗೆ ಭಾರತೀಯರ ನೇಮಕಾತಿ ನಿಲ್ಲಿಸಿದ್ದೇವೆ ಎಂಬ ವಿಚಾರವನ್ನು ಕೂಡ, ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.












Click it and Unblock the Notifications