ಉಕ್ರೇನ್ ಬಿಕ್ಕಟ್ಟು: ರಷ್ಯಾದ ದಾಳಿಯಲ್ಲಿ ನೂರಾರು ಉಕ್ರೇನಿಯನ್ನರು ಸಾವು
ಮಾಸ್ಕೋ/ಕೀವ್/ವಾಷಿಂಗ್ಟನ್, ಫೆಬ್ರವರಿ 24: ರಷ್ಯಾ ಉಕ್ರೇನ್ ಮೇಲೆ ಇಂದು ಸಂಪೂರ್ಣ ಬಲದಿಂದ ದಾಳಿ ನಡೆಸಿದೆ. ರಷ್ಯಾದ ಸೈನಿಕರು ಮತ್ತು ರಷ್ಯಾದ ಯುದ್ಧದ ಟ್ಯಾಂಕರ್‌ಗಳು ಕೂಡ ಬೆಲಾರಸ್ ಮೂಲಕ ಉಕ್ರೇನ್ ಪ್ರವೇಶಿಸಿವೆ ಎಂದು ಬ್ರಿಟಿಷ್ ಪತ್ರಿಕೆ ಡೈಲಿ ಮೇಲ್ ಮತ್ತು ಸಿಎನ್‌ಎನ್ ಮಾಹಿತಿ ನೀಡಿವೆ. ರಷ್ಯಾದ ದಾಳಿಯಲ್ಲಿ ನೂರಾರು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ಹೇಳಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಆಕ್ರಮಣವನ್ನು ಆದೇಶಿಸಿದ್ದು ಇದನ್ನು "ವಿಶೇಷ ಮಿಲಿಟರಿ ಕಾರ್ಯಾಚರಣೆ" ಎಂದು ಹೇಳಿಕೊಳ್ಳಲಾಗಿದೆ. ರಷ್ಯಾದ ಅಧ್ಯಕ್ಷರ ಘೋಷಣೆಯ ನಂತರ ರಷ್ಯಾ ಉಕ್ರೇನ್ ಮೇಲೆ ಹೆಚ್ಚಿನ ವೇಗದಲ್ಲಿ ದಾಳಿ ಮಾಡಲು ಪ್ರಾರಂಭಿಸಿದೆ ಮತ್ತು ನೂರಾರು ಸಾವುನೋವುಗಳು ವರದಿಯಾಗಿವೆ ಎಂದು ಉಕ್ರೇನ್ ಆಂತರಿಕ ಸಚಿವಾಲಯ ತಿಳಿಸಿದೆ. CNN ವರದಿ ಪ್ರಕಾರ ಗುರುವಾರ ಬೆಳಿಗ್ಗೆ ರಷ್ಯಾ ಉಕ್ರೇನ್‌ನ ಮಿಲಿಟರಿ ಸ್ಥಾಪನೆಗಳ ಮೇಲೆ ಮಾತ್ರ ದಾಳಿ ಮಾಡುತ್ತಿದೆ ಮತ್ತು ಜನನಿಬಿಡ ಪ್ರದೇಶಗಳನ್ನು ದಾಳಿಯಿಂದ ದೂರವಿಡಲಾಗಿದೆ ಎಂದು ರಷ್ಯಾ ಹೇಳಿಕೊಂಡರೂ, ಉಕ್ರೇನ್ ಈ ಹೇಳಿಕೆ ಸುಳ್ಳು ಮತ್ತು ರಷ್ಯಾ ನಾಗರಿಕ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ದಾಳಿ ಮಾಡುತ್ತಿದೆ ಎಂದಿದೆ.

ಭಾರೀ ಶಸ್ತ್ರಾಸ್ತ್ರಗಳಿಂದ ದಾಳಿ
ದೇಶದ ಪೂರ್ವದಲ್ಲಿರುವ ಖಾರ್ಕಿವ್ ಬಳಿ ಗುರುವಾರ ಮುಂಜಾನೆ ಐದು ರಷ್ಯಾದ ವಿಮಾನಗಳು ಮತ್ತು ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ಮಿಲಿಟರಿ ಹೇಳಿದೆ. ಉಕ್ರೇನ್‌ನ ಬಾರ್ಡರ್ ಫೋರ್ಸ್ ಉತ್ತರದಲ್ಲಿ ರಷ್ಯಾದ ಬೆಲರೂಸಿಯನ್ ಪಡೆಗಳಿಂದ ದಾಳಿ ನಡೆದಿದೆ. ಇದು ಅತ್ಯಂತ ಮಹತ್ವದ ಬೆಳವಣಿಗೆಯಾಗಿದ್ದು ರಷ್ಯಾ ಏಕಾಂಗಿಯಾಗಿ ಒಂದೇ ಕಡೆಯಿಂದ ದಾಳಿ ನಡೆಸುತ್ತಿಲ್ಲ ಮತ್ತು ಎಲ್ಲಾ ಕಡೆಯಿಂದ ದಾಳಿ ಮಾಡುತ್ತಿದೆ. ಉಕ್ರೇನ್ ರಾಜಧಾನಿ ಕೀವ್‌ನಿಂದ ಕೇವಲ 120 ಮೈಲುಗಳಷ್ಟು ದೂರದಲ್ಲಿರುವ ಬೆಲಾರಸ್‌ನ ಗಡಿಯಿಂದ ರಷ್ಯಾ ಕೂಡ ಉಕ್ರೇನ್ ಮೇಲೆ ಆಕ್ರಮಣ ಮಾಡಿದೆ ಎಂದು ಉಕ್ರೇನ್ ಸರ್ಕಾರದ ವಕ್ತಾರರು ಖಚಿತಪಡಿಸಿದ್ದಾರೆ.
"ರಷ್ಯಾ ಉಕ್ರೇನಿಯನ್ ಗಡಿ ಘಟಕಗಳು, ಗಡಿ ಗಸ್ತು ಮತ್ತು ಫಿರಂಗಿ, ಭಾರೀ ಉಪಕರಣಗಳು ಮತ್ತು ಸಣ್ಣ ಶಸ್ತ್ರಾಸ್ತ್ರಗಳೊಂದಿಗೆ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದೆ. ರಷ್ಯಾದ ಸೇನೆಯು ಲುಹಾನ್ಸ್ಕ್, ಸುಮಿ, ಖಾರ್ಕಿವ್, ಚೆರ್ನಿಹಿವ್ ಮತ್ತು ಝೈಟೊಮಿರ್ ಪ್ರದೇಶಗಳಲ್ಲಿ ದಾಳಿ ಮಾಡಿದೆ. ಅಲ್ಲದೆ ರಷ್ಯಾ ಸೈನ್ಯ ಕ್ರಿಮಿಯಾದಿಂದ ದಾಳಿ ಮಾಡಿದೆ' ಎಂದು ಉಕ್ರೇನಿಯನ್ ಸರ್ಕಾರದ ವಕ್ತಾರರು ಡೈಲಿ ಮೇಲ್‌ಗೆ ತಿಳಿಸಿದ್ದಾರೆ.

ಉಕ್ರೇನ್ ಯುದ್ಧದ ಬಗ್ಗೆ ಜರ್ಮನಿ ಅಭಿಪ್ರಾಯವೇನು?
ಉಕ್ರೇನ್ ಮೇಲಿನ ದಾಳಿಯ ನಂತರವೂ ಸದ್ಯಕ್ಕೆ ರಷ್ಯಾದ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸದಿರಲು ಅಮೆರಿಕ ನಿರ್ಧರಿಸಿದೆ. ಈ ನಿರ್ಧಾರದ ಹಿಂದೆ ಅಮೆರಿಕವು ವಿಶ್ವಯುದ್ಧದ ಭಯದಲ್ಲಿದೆ ಎಂಬ ವರದಿಯೂ ಇದೆ. ರಷ್ಯಾ ಅಧ್ಯಕ್ಷ ಪುಟಿನ್ ಬೆದರಿಕೆಯಿಂದ ಅಮೆರಿಕ ಭಯಗೊಂಡಿದ್ದು, ಸದ್ಯಕ್ಕೆ ರಷ್ಯಾ ವಿರುದ್ಧ ಕೆಲ ಕಠಿಣ ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ಘೋಷಿಸಿದೆ ಎಂದು ತಜ್ಞರು ಹೇಳಿದ್ದಾರೆ. ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದರೆ, ಉಕ್ರೇನ್‌ಗೆ ಸಹಾಯ ಮಾಡಲು ಅಮೆರಿಕ ತನ್ನ ಸೈನ್ಯವನ್ನು ಕಳುಹಿಸುವ ಸಾಧ್ಯತೆಯಿದೆ. ಆದರೆ ಇಲ್ಲಿಯವರೆಗೂ ಅಮೆರಿಕಾ ದಾಳಿಯನ್ನು ಮಾತ್ರ ಖಂಡಿಸಿದೆ.
ಇತ್ತ ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಉಕ್ರೇನ್ ಮೇಲಿನ ರಷ್ಯಾದ ದಾಳಿಯನ್ನು "ಅಂತರರಾಷ್ಟ್ರೀಯ ಕಾನೂನಿನ ಸಂಪೂರ್ಣ ಉಲ್ಲಂಘನೆ" ಎಂದು ಖಂಡಿಸಿದರು, ಇದನ್ನು "ಯಾವುದರಿಂದಲೂ ಸಮರ್ಥಿಸಲಾಗುವುದಿಲ್ಲ" ಎಂದಿದ್ದಾರೆ.
|
ಇದರ ಪರಿಣಾಮ ಊಹಿಸಿಕೊಳ್ಳಲು ಅಸಾಧ್ಯ
ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಉಕ್ರೇನ್ ಮೇಲೆ ರಷ್ಯಾದ ದಾಳಿಗಳನ್ನು ಖಂಡಿಸಿದರು. ಜೊತೆಗೆ ಪುಟಿನ್ ಅವರನ್ನು "ತನ್ನ ಸೈನ್ಯವನ್ನು ರಷ್ಯಾಕ್ಕೆ ಮರಳಿ ಕರೆತರದಂತೆ" ಕೇಳಿಕೊಂಡರು. "ಯುರೋಪಿನಲ್ಲಿ ಮಾನವೀಯತೆಯ ಹೆಸರಿನಲ್ಲಿ ಯುದ್ಧವನ್ನು ಪ್ರಾರಂಭಿಸಲು ಬಿಡಬೇಡಿ. ಇದು ಈ ಶತಮಾನದ ಅತ್ಯಂತ ಕೆಟ್ಟ ಯುದ್ಧವಾಗಬಹುದು. ಇದರ ಪರಿಣಾಮಗಳು ಉಕ್ರೇನ್‌ಗೆ ಮಾತ್ರ ಸೀಮಿತವಾಗಿರುವುದಿಲ್ಲ ಅಥವಾ ರಷ್ಯಾದ ಒಕ್ಕೂಟಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದರ ಪರಿಣಾಮ ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ" ಎಂದಿದ್ದಾರೆ.

ಚೀನಾ ಹೇಳಿದ್ದೇನು?
ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಉಕ್ರೇನ್‌ನಲ್ಲಿನ ಭೀಕರ ಘಟನೆಗಳಿಂದ ಆಘಾತಕ್ಕೊಳಗಾಗಿದ್ದಾರೆ ಮತ್ತು ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. "ಉಕ್ರೇನ್ ಮೇಲೆ ಈ ಅಪ್ರಚೋದಿತ ದಾಳಿಯನ್ನು ನಡೆಸುವ ಮೂಲಕ ಅಧ್ಯಕ್ಷ ಪುಟಿನ್ ರಕ್ತಪಾತ ಮತ್ತು ವಿನಾಶದ ಮಾರ್ಗವನ್ನು ಆರಿಸಿಕೊಂಡಿದ್ದಾರೆ" ಎಂದು ಜಾನ್ಸನ್ ಟ್ವೀಟ್ ಮಾಡಿದ್ದಾರೆ.
ಉಕ್ರೇನ್‌ನ ಕೆಲವು ನಗರಗಳಲ್ಲಿ ಬಾಂಬ್ ಸ್ಫೋಟದ ನಂತರ ಮುನ್ನೆಚ್ಚರಿಕೆಯಾಗಿ ಮನೆಯೊಳಗೆ ಇರುವಂತೆ ಉಕ್ರೇನ್‌ನಲ್ಲಿರುವ ಚೀನಾ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಹೇಳಿದೆ.












Click it and Unblock the Notifications