ಇಂ"ಧನ" ಸುದ್ದಿ: ಜನರಿಗೆ ದುಬಾರಿ ಆಗುತ್ತಾ ಬೈಡನ್ ತೆಗೆದುಕೊಂಡ ಈ ನಿರ್ಧಾರ!?
ನ್ಯೂಯಾರ್ಕ್, ಮಾರ್ಚ್ 9: ಉಕ್ರೇನ್ ಮೇಲೆ ಮುರಿದು ಬಿದ್ದಿರುವ ರಷ್ಯಾದ ಮೇಲೆ ಜಗತ್ತಿನ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ಹೇರುತ್ತಿವೆ. ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಆರ್ಥಿಕ ಹೊಡೆತ ನೀಡುವುದಕ್ಕೆ ಯುಎಸ್ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ರಷ್ಯಾದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವುದಕ್ಕೆ ಯುಎಸ್ ನಿರ್ಬಂಧ ವಿಧಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್ ಘೋಷಿಸಿದ್ದಾರೆ. ಇನ್ನೊಂದು ದಿಕ್ಕಿನಲ್ಲಿ 2022ರ ಅಂತ್ಯದ ವೇಳೆ ಯುನೈಟೆಡ್ ಕಿಂಗ್ ಡಮ್ ಸಹ ರಷ್ಯಾದ ಕಚ್ಚಾತೈಲ ಮತ್ತು ಅನಿಲವನ್ನು ಹಂತ-ಹಂತವಾಗಿ ನಿರ್ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಇಡೀ ಜಗತ್ತಿನಲ್ಲಿ ಉತ್ಪಾದಿಸಲಾಗುವ ಒಟ್ಟು ಇಂಧನದ ಪೈಕಿ ಶೇ.7ರಷ್ಟು ಕಚ್ಚಾತೈಲ ರಷ್ಯಾವೊಂದರಲ್ಲೇ ಉತ್ಪಾದನೆ ಆಗುತ್ತದೆ. ಅದಾಗ್ಯೂ, ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ, ಕಚ್ಚಾತೈಲಕ್ಕಾಗಿ ರಷ್ಯಾದ ಮೇಲಿನ ಯುಎಸ್ ಅವಲಂಬನೆ ಅಷ್ಟಕಷ್ಟೇ ಇದೆ.
ರಷ್ಯಾ ಇಂಧನವನ್ನು ಆಮದು ಮಾಡಿಕೊಳ್ಳುವುದಿಲ್ಲ ಎಂಬ ಬೈಡನ್ ಘೋಷಣೆಯು ಯುಎಸ್ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲದು?, ಅಸಲಿಗೆ ರಷ್ಯಾದಿಂದ ಯುಎಸ್ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲದ ಪ್ರಮಾಣವೆಷ್ಟು?, ಅಮೆರಿಕಾದಲ್ಲಿ ಸದ್ಯಕ್ಕಿರುವ ತೈಲ ಬೆಲೆ ಎಷ್ಟು?, ಬೈಡನ್ ನಿರ್ಧಾರಿಂದ ಮುಂದಿನ ಒಂದು ತಿಂಗಳಿನಲ್ಲಿ ತೈಲ ಬೆಲೆಯಲ್ಲಿ ಎಷ್ಟು ಏರಿಕೆಯಾಗಲಿದೆ?. ಹೀಗೆ ವಿಶ್ವದ ದೊಡ್ಡಣ್ಣನ ನಿರ್ಧಾರವು ತನ್ನದೇ ದೇಶದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ರಷ್ಯಾದಲ್ಲಿ ಒಂದು ದಿನಕ್ಕೆ ಉತ್ಪಾದಿಸಲಾಗುವ ಕಚ್ಚಾತೈಲ ಎಷ್ಟು?
ಇಡೀ ಜಗತ್ತಿನಲ್ಲಿ ಉತ್ಪಾದಿಸುವ ಕಚ್ಚಾತೈಲದ ಶೇ.7ರಷ್ಟು ಕಚ್ಚಾತೈಲವನ್ನು ರಷ್ಯಾವೊಂದರಲ್ಲೇ ಉತ್ಪಾದನೆ ಮಾಡಲಾಗುತ್ತದೆ. ಅಂದರೆ ಒಂದು ದಿನಕ್ಕೆ ರಷ್ಯಾದಲ್ಲಿ 70 ಲಕ್ಷ ಬ್ಯಾರೆಲ್ ಕಚ್ಚಾತೈಲವನ್ನು ರಷ್ಯಾ ಉತ್ಪಾದಿಸುತ್ತದೆ. ವಿಶ್ವಕ್ಕೆ ಅತಿಹೆಚ್ಚು ಕಚ್ಚಾತೈಲ ಮತ್ತು ಇಂಧನ ಉತ್ಪನ್ನಗಳನ್ನು ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ರಷ್ಯಾ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಯುಎಸ್ ರಷ್ಯಾದಿಂದ ಆಮದು ಮಾಡಿಕೊಳ್ಳುವ ಇಂಧನ ಪ್ರಮಾಣ?
ಕಳೆದ 2021ರಲ್ಲಿ ಯುಎಸ್‌ಗೆ ರಷ್ಯಾದಿಂದ ದಿನಕ್ಕೆ ಸರಾಸರಿ 2,09,000 ಬ್ಯಾರೆಲ್ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದರ ಜೊತೆಗೆ ಪ್ರತಿನಿತ್ಯ 5 ಲಕ್ಷ ಬ್ಯಾರೆಲ್ ಪೆಟ್ರೋಲಿಯಂ ಉತ್ಪಾದಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು ಎಂದು ಅಮೇರಿಕನ್ ಇಂಧನ ಮತ್ತು ಪೆಟ್ರೋಕೆಮಿಕಲ್ ಉತ್ಪಾದಕರ (AFPM) ವ್ಯಾಪಾರಿ ಸಂಘ ಮಾಹಿತಿ ನೀಡಿದೆ. ಇದರಿಂದ ಯುಎಸ್ ಒಟ್ಟು ಶೇ.3ರಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲಿದ್ದು, ಶೇ.1ರಷ್ಟು ಕಚ್ಚಾತೈಲವನ್ನು ತನ್ನಲ್ಲಿಯೇ ಶುದ್ಧೀಕರಿಸುತ್ತದೆ ಎಂಬುದು ಗೊತ್ತಾಗುತ್ತದೆ. ಇದಲ್ಲದೇ ಕೆನಡಾದಿಂದ ಶೇ.61, ಮೆಕ್ಸಿಕೋದಿಂದ ಶೇ.10, ಸೌದಿ ಅರೇಬಿಯಾದಿಂದ ಶೇ.6ರಷ್ಟು ಕಚ್ಚಾತೈಲವನ್ನು ಯುಎಸ್ ಆಮದು ಮಾಡಿಕೊಳ್ಳುತ್ತದೆ.

ರಷ್ಯಾದಿಂದ ಕಚ್ಚಾತೈಲ ಖರೀದಿಸಲ್ಲ ಎಂಬ ನಿರ್ಧಾರಕ್ಕೆ ಕಾರಣ?
ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾದ ಮೇಲೆ ಯುಎಸ್ ಈಗಾಗಲೇ ಹಲವು ನಿರ್ಬಂಧಗಳನ್ನು ವಿಧಿಸಿದೆ. ಈಗ ಅದರ ಪಟ್ಟಿಗೆ ಮತ್ತಷ್ಟು ಸೇರ್ಪಡೆ ಆಗಿದೆ. ರಷ್ಯಾದಿಂದ ಕಚ್ಚಾತೈಲ, ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳುವುದಿಲ್ಲ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದರು. ಯುಎಸ್ ನೆಲದಲ್ಲಿ ರಷ್ಯಾದ ಕಚ್ಚಾತೈಲವನ್ನು ನಾವು ಬಳಕೆ ಮಾಡುವುದಿಲ್ಲ, ನಮ್ಮ ಒಪ್ಪಂದವು ವ್ಲಾಡಿಮಿರ್ ಪುಟಿನ್ ಅವರ ಯುದ್ಧದ ತಂತ್ರಕ್ಕೆ ಮತ್ತಷ್ಟು ಬಲ ನೀಡುವಂತೆ ಆಗುತ್ತದೆ ಎಂದು ಜೋ ಬೈಡೆನ್ ಹೇಳಿದ್ದಾರೆ.

ರಷ್ಯಾ ಇಂಧನ ನಿರ್ಬಂಧ ಯುರೋಪ್ ರಾಷ್ಟ್ರಗಳಿಗೆ ಕಷ್ಟ
"ರಷ್ಯಾದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸುವುದರಿಂದ ಸದ್ಯದ ವಿನಿಮಯ ದರವನ್ನು ಯುಎಸ್ ನಿಭಾಯಿಸಬಲ್ಲದು. ಆದರೆ ಯುರೋಪ್ ರಾಷ್ಟ್ರಗಳಿಗೆ ಅದು ಕಷ್ಟಸಾಧ್ಯವಾಗುತ್ತದೆ," ಎಂದು ಮಾನವ ಸಂಪನ್ಮೂಲಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾರ್ನೆಲಿಯಾ ಮೇಯರ್ ಹೇಳಿದ್ದಾರೆ. "ಯುಎಸ್ ನಿರ್ಧಾರವು ರಷ್ಯಾದ ಮೇಲೆ ಅಷ್ಟರ ಮಟ್ಟಿಗೆ ಪರಿಣಾಮ ಬೀರುವುದಿಲ್ಲ. ಆದರೆ ಯುರೋಪ್ ರಾಷ್ಟ್ರಗಳು ಇದೇ ನಿರ್ಧಾರವನ್ನು ತೆಗೆದುಕೊಂಡರೆ, ಆಗ ರಷ್ಯಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಹೆಚ್ಚು ಪರಿಣಾಮ ಬೀರುತ್ತದೆ. ಇನ್ನೊಂದು ಮಗ್ಗಲಿನಲ್ಲಿ ಪಶ್ಚಿಮದ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ರಷ್ಯಾದ ಕಚ್ಚಾತೈಲ ಮತ್ತು ಅನಿಲ ಉತ್ಪನ್ನಗಳು ಚೀನಾ ಮತ್ತು ಭಾರತದ ಕಡೆಗೆ ಹೋಗುತ್ತವೆ. ಚೀನಾ ಮತ್ತು ಭಾರತಗಳು ರಷ್ಯಾದಿಂದ ಕಚ್ಚಾತೈಲವನ್ನು ಖರೀದಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ," ಎಂದು ವಿಶ್ಲೇಷಿಸಿದ್ದಾರೆ.

ಅನಿಲ ಮತ್ತು ಇಂಧನ ಬೆಲೆಯಲ್ಲಿ ಹೇಗೆ ಏರಿಕೆ ಆಗಲಿದೆ?
ರಷ್ಯಾದ ಕಚ್ಚಾತೈಲದ ಮೇಲೆ ನಿರ್ಬಂಧವನ್ನು ಹೇರಲಾಗುತ್ತದೆ ಎಂಬ ಸುದ್ದಿ ಮುನ್ನಲೆಗೆ ಬರುತ್ತಿದ್ದಂತೆ ಕಳೆದ ತಿಂಗಳಿನಲ್ಲೇ ಬೆಲೆ ಏರಿಕೆ ಶುರುವಾಗಿದೆ. ಕಳೆದ 15 ದಿನಗಳಲ್ಲೇ ಒಂದು ಬ್ಯಾರೆಲ್ ಕಚ್ಚಾತೈಲದ ಬೆಲೆಯಲ್ಲಿ ಶೇ.30ರಷ್ಟು ಏರಿಕೆಯಾಗಿದೆ. ಪ್ರಸ್ತುತ ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 130 ಯುಎಸ್ ಡಾಲರ್ ಆಗಿದ್ದು, ಒಂದು ಗ್ಯಾಲನ್ (4.5 ಲೀಟರ್) ರೆಗುಲರ್ ಗ್ಯಾಸ್ ಬೆಲೆಯು 4.17 ಯುಎಸ್ ಡಾಲರ್ ಆಗಿದೆ.
ರಷ್ಯಾದ ಮೇಲಿನ ನಿರ್ಬಂಧವನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ಒಂದು ಬ್ಯಾರಲ್ ಕಚ್ಚಾತೈಲದ ಬೆಲೆ 160 ರಿಂದ 200 ಯುಎಸ್ ಡಾಲರ್ ಆಗಿಲಿದ್ದು, ಒಂದು ಗ್ಯಾಲನ್ (4.5 ಲೀಟರ್) ರೆಗುಲರ್ ಗ್ಯಾಸ್ ಬೆಲೆಯು 5 ಯುಎಸ್ ಡಾಲರ್ ಆಗಲಿದೆ.

ಯುಎಸ್ ಮೇಲೆ ಪರಿಣಾಮ ಬೀರುವುದಿಲ್ಲ ನಿರ್ಬಂಧ
"ಮೊದಲನೆಯದು ತೈಲ ಪೂರೈಕೆಯೊಂದಿಗೆ ಅದು ಯುಎಸ್ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ," ಎಂದು ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾನಿಲಯದ ಸೌಡರ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ಪ್ರಾಧ್ಯಾಪಕ ಆಡಮ್ ಪಂಕ್ರಾಟ್ಜ್ ತಿಳಿಸಿದ್ದಾರೆ. "ಇದು ನಿಜವಾಗಿಯೂ ತೀವ್ರವಾಗಿ ಹೋದರೆ US ಒಂದು ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು ಹೊಂದಿದೆ. ಅದಾಗ್ಯೂ ಆರ್ಥಿಕ ಪರಿಣಾಮ ಬೀರಲಿದೆ," ಎಂದಿದ್ದಾರೆ.
"ಯುಎಸ್ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ, ಇತರ ಹಲವು ದೇಶಗಳು ಇನ್ನು ಮುಂದೆ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುವುದಿಲ್ಲ. ಇದರಿಂದ ಈಗಾಗಲೇ ಬಿಗಿಯಾಗಿರುವ ಇಂಧನ ಮಾರುಕಟ್ಟೆಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಿಯಾಗುತ್ತದೆ. ಇದರಿಂದ ತೈಲದ ಬೆಲೆ ಏರಿಕೆ ಆಗುತ್ತದೆ. ಅದರ ಪರಿಣಾಮ ಹಣದುಬ್ಬರ ಹೆಚ್ಚಾಗುತ್ತದೆ. ಇದರ ಪ್ರತಿಯಾಗಿ ಯುಎಸ್ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ," ಎಂದು ಪಂಕ್ರಾಟ್ಜ್ ಹೇಳಿದ್ದಾರೆ.

ಯುಎಸ್ ಜನರ ಮೇಲೆ ನಿರ್ಬಂಧದ ಪ್ರಭಾವ ಹೇಗಿರಲಿದೆ?
ರಷ್ಯಾದ ಮೇಲಿನ ನಿರ್ಬಂಧಗಳಿಂದ ಯುಎಸ್ ತಕ್ಷಣಕ್ಕೆ ಹಣದುಬ್ಬರದ ಸಮಸ್ಯೆ ಎದುರಿಸಬೇಕಾಗುತ್ತದೆ. ಯುಎಸ್ 40 ವರ್ಷಗಳಲ್ಲಿ ಹೆಚ್ಚಿನ ಹಣದುಬ್ಬರವನ್ನು ಎದುರಿಸುತ್ತಿದೆ. ಇದರ ಮಧ್ಯೆ ಗುರುವಾರ ಬಿಡುಗಡೆ ಮಾಡಲಿರುವ ಮಾಹಿತಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕವು ಶೇ.7.9ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. "ಇದು ಬೇಡಿಕೆ ನಾಶವೇ ಎಂಬುದನ್ನು ಜನರು ಸರಿಯಾಗಿ ನಿರ್ಧರಿಸುತ್ತಾರೆ. ಇಂಥ ಸಂದರ್ಭದಲ್ಲಿ ವಾಹನಗಳನ್ನು ಬಳಸುವುದು ತೀರಾ ದುಬಾರಿ ಎನಿಸುತ್ತದೆ. ಹಾಗಾಗಿ ನಾನು ಬಸ್‌ನಲ್ಲಿ ಹೋಗುತ್ತೇನೆ ಅಥವಾ ನಡೆದುಕೊಂಡೇ ಸಂಚರಿಸುತ್ತೇನೆ ಎಂದು ಪಂಕ್ರಾಟ್ಜ್ ಹೇಳಿದ್ದಾರೆ.












Click it and Unblock the Notifications