Gene Hackman: ಎರಡು ಬಾರಿ ಆಸ್ಕರ್ ವಿಜೇತ ನಟ, ಪತ್ನಿ & ನಾಯಿ ಏಕಕಾಲಕ್ಕೆ ಸಾವು: ಅನುಮಾನ!
Gene Hackman: ಹಾಲಿವುಡ್ ಖ್ಯಾತ ನಟ ಹಾಗೂ ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತರಾಗಿರುವ ಜೀನ್ ಹ್ಯಾಕ್ಮ್ಯಾನ್, ಅವರ ಪತ್ನಿ ಬೆಟ್ಸಿ ಹಾಗೂ ಅವರ ನಾಯಿ ಶವವಾಗಿ ಪತ್ತೆಯಾಗಿದ್ದು. ವಿಶ್ವದಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಈ ರೀತಿ ಪತಿ - ಪತ್ನಿ ಹಾಗೂ ನಾಯಿ ಏಕಕಾಲಕ್ಕೆ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನ್ಯೂ ಮೆಕ್ಸಿಕೋದ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಜೀನ್ ಅವರಿಗೆ 95 ವರ್ಷ ವಯಸ್ಸಾಗಿತ್ತು.
ಹಾಲಿವುಡ್ ಖ್ಯಾತ ನಟ ಜೀನ್ ಹ್ಯಾಕ್ಮ್ಯಾನ್ ಅವರು ಹಲವು ಪ್ರಸಿದ್ಧ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ಅಮೋಘ ನಟೆಗೆ ಆಸ್ಕರ್ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳು ಸಂದಿವೆ. ಹ್ಯಾಕ್‌ಮನ್ ಅವರ 'ದಿ ಫ್ರೆಂಚ್ ಕನೆಕ್ಷನ್' ಹಾಗೂ 'ದಿ ರಾಯಲ್ ಟೆನೆನ್‌ಬಾಮ್ಸ್' ಸಿನಿಮಾಗಳು ಸಾಕಷ್ಟು ಫೇಮಸ್ ಆಗಿವೆ. ಇವರ ಅಭಿನಯಕ್ಕಾಗಿ ಎರಡು ಬಾರಿ ಆಸ್ಕರ್ ಪ್ರಶಸ್ತಿ ಸಂದಿವೆ. ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮತ್ತು ಎರಡು ಬಾರಿ BAFTA ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ. ಹ್ಯಾಕ್‌ಮನ್ 'ಸೂಪರ್‌ಮ್ಯಾನ್' (1978) ಮತ್ತು 'ಸೂಪರ್‌ಮ್ಯಾನ್ II' (1980) ಚಿತ್ರಗಳಲ್ಲಿ ಇವರ ಅಭಿನಯದ ಬಗ್ಗೆ ಇಂದಿಗೂ ಮಾತನಾಡಲಾಗುತ್ತದೆ.

ಪೊಲೀಸರಿಂದ ತನಿಖೆ: ಹಾಲಿವುಡ್ ನಟ ಜೀನ್ ಹ್ಯಾಕ್ಮ್ಯಾನ್ ಅವರು ಹಾಗೂ ಅವರ ಕುಟುಂಬದ ಅನುಮಾನಾಸ್ಪದ ಸಾವಿನ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅಲ್ಲಿನ ಪೊಲೀಸರು, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಅನುಮಾನಸ್ಪದ ವಿಷಯಗಳು ಕಂಡು ಬಂದಿಲ್ಲ. ಆದರೆ, ಸಾವಿಗೆ ಸಂಬಂಧಿಸಿದಂತೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ. ತನಿಖೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯದಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಟ ಜೀನ್ ಹ್ಯಾಕ್ಮ್ಯಾನ್ ಅವರಿಗೆ 95 ವರ್ಷ ಹಾಗೂ ಅವರ ಪತ್ನಿ ಬೆಟ್ಸ್ಗೆ 63 ವರ್ಷ ವಯಸ್ಸಾಗಿತ್ತು ಎಂದು ಹೇಳಲಾಗಿದೆ.
ಹಾಲಿವುಡ್‌ನಲ್ಲಿ ಆರು ದಶಕ ಮಿಂಚಿರುವ ನಟ: ಇನ್ನು ಖ್ಯಾತ ನಟ ಜೀನ್ ಹ್ಯಾಕ್ಮ್ಯಾನ್ ಅವರು ಹಾಲಿವುಡ್‌ನಲ್ಲಿ ಬರೋಬ್ಬರಿ ಆರು ದಶಕಗಳ ಕಾಲ ಮಿಂಚಿದ್ದರು. ಆದರೆ, ಬುಧವಾರ (ಫೆಬ್ರವರಿ 26) ರಂದು ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು. ಈ ವಿಷಯ ಗುರುವಾರ ಬಹಿರಂಗವಾಗಿದೆ.
ಹಾಲಿವುಡ್‌ನಲ್ಲಿ 1970 -80ರ ದಶಕದಲ್ಲಿ ಸ್ಪುರದ್ರೂಪಿ ನಟನಾಗಿ ಹ್ಯಾಕ್ ಅವರು ಮಿಂಚಿದ್ದರು. ಅವರು ಮಾಡದೆ ಇರುವ ಪಾತ್ರಗಳೇ ಇಲ್ಲ ಎಂದೇ ಹಾಲಿವುಡ್‌ನಲ್ಲಿ ಫೇಮಸ್. ಎವರ್ ಗ್ರೀನ್ ನಟ ಎನ್ನುವ ಖ್ಯಾತಿ ಇವರಿಗೆ ಇದೆ. ಸುದೀರ್ಘ ವೃತ್ತಿ ಜೀವನದಲ್ಲಿ ಅವರಿಗೆ ಹಲವು ಪ್ರಮುಖ ಪ್ರಶಸ್ತಿಗಳು ಸಂದಿವೆ.
ಗೂಢಚಾರಿಯಾಗಿ, ಅಪರಾಧಿ, ಆರ್ಮಿ ಮ್ಯಾನ್, ಕಮಾಂಡರ್ ಹಾಗೂ ಕ್ರೀಡಾಪಟು ಸೇರಿದಂತೆ ಹಲವು ಪಾತ್ರಗಳಲ್ಲಿ ಇವರು ಅಭಿನಯಿಸಿದ್ದರು. ಬದುಕಿನ ಸಂಧ್ಯಾಕಾಲವನ್ನು ಅವರ ಪತ್ನಿಯೊಂದಿಗೆ ಅವರು ಕಳೆಯುತ್ತಿದ್ದರು. ಆದರೆ, ಏಕಕಾಲಕ್ಕೆ ನಟ ಅವರ ಪತ್ನಿ ಹಾಗೂ ಅವರ ಸಾಕು ನಾಯಿ ಸಹ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಇದು ಕೊಲೆಯೋ, ಸ್ವಯಂ ಕೃತ ಕೃತ್ಯವೋ ಇಲ್ಲ ಸಹಜ ಸಾವೋ ಎನ್ನುವ ಬಗ್ಗೆ ಪೊಲೀಸರು ನಿಖರವಾಗಿ ಮಾಹಿತಿ ಹಂಚಿಕೊಂಡಿಲ್ಲ. ಈ ಸಂಬಂಧ ತನಿಖೆ ನಡೆದಿದೆ ಎಂದಷ್ಟೇ ಹೇಳುತ್ತಿದ್ದಾರೆ.












Click it and Unblock the Notifications