ಟರ್ಕಿ ಚಂಡಮಾರುತ: ಗಾಳಿಯಲ್ಲಿ ಹಾರಿ ಬಂದ ಸೋಫಾ- ವಿಡಿಯೋ ವೈರಲ್
ಇತ್ತೀಚೆಗೆ ಟರ್ಕಿಯಲ್ಲಿ ಚಂಡಮಾರುತ ಭಾರೀ ಹಾನಿಯನ್ನುಂಟುಮಾಡಿದೆ. ಟರ್ಕಿಯ ರಾಜಧಾನಿ ಅಂಕಾರಾದಲ್ಲಿ ಬಲವಾದ ಗಾಳಿಗೆ ಅಪಾರ ಆಸ್ತಿ ನಷ್ಟವಾಗಿದೆ. ಇಲ್ಲಿನ ಆಘಾತಕಾರಿ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅಂಕಾರಾದಲ್ಲಿ ಬಲವಾದ ಬಿರುಗಾಳಿಯಿಂದಾಗಿ ಮನೆಯೊಳಗೆ ಇರಿಸಲಾದ ಪೀಠೋಪಕರಣಗಳು ಅಂದರೆ ಸೋಫಾ ಆಕಾಶದಲ್ಲಿ ಹಾರುವ ದೃಶ್ಯ ಸೆರೆಯಾಗಿದೆ. ಈ ದೃಶ್ಯ ಚಂಡಮಾರುತದ ತೀವ್ರತೆ ಎಷ್ಟಿತ್ತು ಎನ್ನುವುದನ್ನು ತೋರಿಸಿದೆ.
ಬಲವಾಗಿ ಬೀಸಿದ ಗಾಳಿಯಿಂದಾಗಿ ಸೋಫಾ ಆಕಾಶದಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಹಾರಿ ಬಂದ ಸೋಫಾ ಮತ್ತೊಂದು ಕಟ್ಟಡಕ್ಕೆ ಹೊಡೆಯುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಸಾಕಷ್ಟು ಮಂದಿ ಶೇರ್ ಮಾಡಿದ್ದಾರೆ.

'ಗುರು ಆಫ್ ನಥಿಂಗ್' ಹೆಸರಿನ ಬಳಕೆದಾರರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಟ್ವಿಟ್ಟರ್‌ನಲ್ಲಿ ಹೀಗೆ ಬರೆದಿದ್ದಾರೆ, 'ಟರ್ಕಿಯ ಅಂಕಾರಾದಲ್ಲಿ ಚಂಡಮಾರುತದ ಸಮಯದಲ್ಲಿ ಸೋಫಾದೊಂದಿಗೆ ಅನೇಕ ವಸ್ತುಗಳು ಆಕಾಶದಲ್ಲಿ ಹಾರಲು ಪ್ರಾರಂಭಿಸಿದವು' ಎಂದಿದ್ದಾರೆ. ಈ ವೀಡಿಯೊದ ಆರಂಭದಲ್ಲಿ, ಒಂದು ವಸ್ತುವು ಆಕಾಶದಲ್ಲಿ ಹಾರುತ್ತಿರುವುದನ್ನು ಕಾಣಬಹುದು.
ಕ್ಯಾಮರಾ ಝೂಮ್ ಇನ್ ಆಗುತ್ತಿದ್ದಂತೆ, ಅದು ನಿಜವಾಗಿ ಸೋಫಾ ಎಂದು ತಿಳಿದುಬಂದಿದೆ. ಕೆಲ ಸೆಕೆಂಡುಗಳಲ್ಲಿ ಬಲವಾದ ಗಾಳಿ ಸೋಫಾದೊಂದಿಗೆ ಮತ್ತೊಂದು ಕಟ್ಟಡಕ್ಕೆ ಅಪ್ಪಳಿಸುತ್ತದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ದೃಢಪಟ್ಟಿಲ್ಲ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ವೀಡಿಯೊ ಮಾಡಿದ ವ್ಯಕ್ತಿ ಟರ್ಕಿಶ್ ಸುದ್ದಿ ಸಂಸ್ಥೆಗೆ ಮಾತನಾಡುತ್ತಾ, ಬಿರುಗಾಳಿಂದ ಹಾರಿ ಬಂದ ಪೀಠೋಪಕರಣಗಳು ತಮ್ಮ ತೋಟದಲ್ಲಿ ಬಿದ್ದಿವೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದನ್ನು ಕಂಡು ಜನ ಶಾಕ್ ಆಗಿದ್ದಾರೆ. ಸಾಮಾನ್ಯವಾಗಿ ಒಬ್ಬರು ಇಬ್ಬರಿಂದ ಸೋಫಾ ಎತ್ತವುದು ಕಷ್ಟ, ಹೀಗಿರುವಾಗ ಆ ಸೋಫಾ ಗಾಳಿಯಲ್ಲಿ ಹಾರಾಡುವುದು ಅಂದರೆ ಇದು ನಿಜಕ್ಕೂ ಆಶ್ಚರ್ಯಕರ ಎಂದು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಇಷ್ಟು ಬಲವಾದ ಗಾಳಿ ಟರ್ಕಿಯಲ್ಲಿ ಮಾತ್ರ ಬೀಸಲು ಸಾಧ್ಯ ಎಂದಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ:-
"ನೀವು ನಿಮ್ಮ ಕಿಟಕಿಯಿಂದ ಹೊರಗೆ ನೋಡುತ್ತೀರಿ. ಆಗ ಸೋಫಾ ನಿಮ್ಮ ಕಡೆಗೆ ಹಾರಿ ಬರುತ್ತದೆ" ಎಂದು ವೀಡಿಯೊದ ದೃಶ್ಯವನ್ನು ನೈಜ್ಯವಾಗಿ ನೆನಸಿಕೊಳ್ಳುವಂತೆ ಬಳಕೆದಾರ ಹೇಳಿದರು.
ಇನ್ನೊಬ್ಬ ಬಳಕೆದಾರ- "ಫ್ಲೈಯಿಂಗ್ ಸೋಫಾ ಕಲ್ಪಿಸಿಕೊಳ್ಳಿ ... ಒಬ್ಬ ಮನುಷ್ಯ ಅದರ ಮೇಲೆ ಕುಳಿತುಕೊಂಡರೆ ಹೇಗಿರುತ್ತದೆ'' ಎಂದು ಬರೆದಿದ್ದಾರೆ.
ಮತ್ತೊಬ್ಬ ಬಳಕೆದಾರರು ಇದನ್ನು ಸಿನಿಮಾಕ್ಕೆ ಹೋಲಿಕೆ ಮಾಡಿದ್ದಾರೆ.
ಇನ್ನೊಬ್ಬರು "ಇದು ಟರ್ಕಿಯಲ್ಲಿ ಮಾತ್ರ ಸಂಭವಿಸಬಹುದು" ಎಂದು ಪ್ರತಿಕ್ರಿಯಿಸಿದ್ದಾರೆ.
'ನಾನು ಈ ಮಂಚದ ಮೇಲೆ ಕುಳಿತುಕೊಳ್ಳಲು ಇಷ್ಟಪಡುತ್ತೇನೆ ಮತ್ತು ಎಂದಿಗೂ ಇಳಿಯುವುದಿಲ್ಲ' ಎಂದು ಮತ್ತೊಬ್ಬರು ಬರೆದಿದ್ದಾರೆ.
17 ಮೇ 2023 ರಂದು ಅಂಕಾರಾದಲ್ಲಿ ಚಂಡಮಾರುತ ಅಪ್ಪಳಿಸಿತು. ಬಲವಾದ ಗಾಳಿಗೆ ಅನೇಕ ವಸ್ತುಗಳು ಗಾಳಿಯಲ್ಲಿ ತೇಲಾಡಿವೆ. ಇದನ್ನು ಕಂಡ ಜನ ಗಾಬರಿಗೊಂಡಿದ್ದಾರೆ. ಇದು ನಗರದಲ್ಲಿ ಸಾಕಷ್ಟು ವಿನಾಶವನ್ನು ಉಂಟುಮಾಡಿದೆ. ಅಂಕಾರಾ ಮೆಟ್ರೋಪಾಲಿಟನ್ ಪುರಸಭೆಯ ಮೇಯರ್ ಮನ್ಸೂರ್ ಯವಾಸ್ ಅವರು ಬಲವಾದ ಗಾಳಿ ಮತ್ತು ಮಳೆಯ ಬಗ್ಗೆ ನಿವಾಸಿಗಳಿಗೆ ಟ್ವಿಟರ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications