ಟರ್ಕಿಯ ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ: 25 ಸಾವು- ನೂರಾರು ಮೀಟರ್ ಭೂಗರ್ಭದಲ್ಲಿ ಸಿಕ್ಕಿಬಿದ್ದ ಕಾರ್ಮಿಕರು
ಅಂಕಾರಾ (ಟರ್ಕಿ) ಅಕ್ಟೋಬರ್ 15: ಉತ್ತರ ಟರ್ಕಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಶನಿವಾರ ಮೀಥೇನ್ ಸ್ಫೋಟ ಸಂಭವಿಸಿದ್ದು 25 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಹಲವಾರು ಜನ ನೂರಾರು ಮೀಟರ್ ಭೂಗರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ಟ್ವೀಟ್ ಮಾಡಿದ್ದಾರೆ.
ಸದ್ಯ ಸಿಕ್ಕಿಬಿದ್ದವರ ರಕ್ಷಣಾ ಕಾರ್ಯ ನಡೆದಿದ್ದು 11 ಜನರನ್ನು ರಕ್ಷಿಸಲಾಗಿದೆ. ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉತ್ತರ ಟರ್ಕಿಯ ಕಪ್ಪು ಸಮುದ್ರದ ಕರಾವಳಿಯಲ್ಲಿರುವ ಸಣ್ಣ ಕಲ್ಲಿದ್ದಲು ಗಣಿಗಾರಿಕೆಯ ಪ್ರದೇಶವಾದ ಅಮಾಸ್ರಾದಲ್ಲಿ ಈ ಘಟನೆ ನಡೆದಿದೆ.
ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಸುದ್ದಿಗಾರರೊಂದಿಗೆ ಮಾತನಾಡಿ, "ನಾವು ವಿಷಾದಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಇಲ್ಲಿ ಒಟ್ಟಾರೆಯಾಗಿ ನಮ್ಮ 110 ಸಹೋದರರು ಕೆಲಸ ಮಾಡುತ್ತಿದ್ದರು (ಭೂಗತ). ಅವರಲ್ಲಿ ಕೆಲವರು ತಾವಾಗಿಯೇ ಹೊರಬಂದರು. ಅವರಲ್ಲಿ ಕೆಲವರನ್ನು ರಕ್ಷಿಸಲಾಯಿತು" ಎಂದರು.

300 ಮತ್ತು 350 ಮೀಟರ್ (985 ರಿಂದ 1,150 ಅಡಿ) ನಡುವಿನ ಎರಡು ಪ್ರತ್ಯೇಕ ಪ್ರದೇಶಗಳಲ್ಲಿ ಸುಮಾರು 50 ಗಣಿಗಾರರು ಸಿಕ್ಕಿಬಿದ್ದಿದ್ದಾರೆ ಎಂಬ ಆರಂಭಿಕ ವರದಿಗಳನ್ನು ಸೋಯ್ಲಿ ದೃಢಪಡಿಸಿದರು. ಸಿಕ್ಕಿಬಿದ್ದವರ ಬಗ್ಗೆ ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ಸುದ್ದಿಯನ್ನು ನೀಡಲಾಗುತ್ತಿದೆ ಎಂದರು.
ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ತಮ್ಮ ಎಲ್ಲಾ ಇತರ ಕಾರ್ಯಗಳನ್ನು ರದ್ದುಗೊಳಿಸಿ ಶನಿವಾರ ಅಪಘಾತದ ಸ್ಥಳಕ್ಕೆ ಆಗಮಿಸಲಿದ್ದು, 'ಜೀವಹಾನಿ ಮತ್ತಷ್ಟು ಹೆಚ್ಚಾಗಬಾರದು, ನಮ್ಮ ಗಣಿಗಾರರು ಜೀವಂತವಾಗಿ ಸಿಗಲಿ ಎಂಬುದು ನಮ್ಮ ಆಶಯವಾಗಿದೆ. ನಮ್ಮ ಎಲ್ಲಾ ಪ್ರಯತ್ನಗಳು ಇದಕ್ಕಾಗಿ ನಡೆಯುತ್ತಿವೆ' ಎಂದು ಎರ್ಡೊಗನ್ ಟ್ವೀಟ್ ಮಾಡಿದ್ದಾರೆ.

ಆದರೆ ಬದುಕುಳಿದವರಲ್ಲಿ ಹಲವರು "ಗಂಭೀರ ಗಾಯಗಳಿಂದ" ಬಳಲುತ್ತಿದ್ದಾರೆ ಎಂದು ಅಮಸ್ರಾ ಮೇಯರ್ ರೆಕೈ ಕಾಕಿರ್ ಹೇಳಿದ್ದಾರೆ. ಸೂರ್ಯಾಸ್ತದ ಕೆಲವೇ ಕ್ಷಣಗಳಲ್ಲಿ ಸ್ಫೋಟ ಸಂಭವಿಸಿದ್ದು, ಕತ್ತಲೆಯಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ಟರ್ಕಿಯ ಮೇಡೆನ್ ಈಸ್ ಗಣಿಗಾರಿಕೆ ಕಾರ್ಮಿಕರ ಒಕ್ಕೂಟ ಸ್ಫೋಟಕ್ಕೆ ಮೀಥೇನ್ ಅನಿಲದ ರಚನೆ ಕಾರಣ ಎಂದಿದೆ. ಆದರೆ ಅಪಘಾತದ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಇತರ ಅಧಿಕಾರಿಗಳು ಹೇಳಿದ್ದಾರೆ.
2014 ರ ದುರಂತ:-
ಸುತ್ತಮುತ್ತಲಿನ ಹಳ್ಳಿಗಳರ ಸಹಾಯದಿಂದ ಕಾರ್ಮಿಕರು ಕೆಲವರ ರಕ್ಷಣೆ ಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಅರೆವೈದ್ಯರು ಆಗಮಿಸಿದ್ದು ಹೊರಕ್ಕೆ ತಂದ ಗಣಿಗಾರರಿಗೆ ಆಮ್ಲಜನಕವನ್ನು ನೀಡುತ್ತಿದ್ದಾರೆ. ನಂತರ ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ರವಾನಿಸುತ್ತಿದ್ದಾರೆ.

70 ಕ್ಕೂ ಹೆಚ್ಚು ರಕ್ಷಕರ ತಂಡವು ಸುಮಾರು 250 ಮೀಟರ್‌ಗಳಷ್ಟು ಕೆಳಗೆ ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ. ರಕ್ಷಕರು ಸಿಕ್ಕಿಬಿದ್ದಿರುವ ಕಾರ್ಮಿಕರ ಬಳಿಗೆ ಹೋಗಲು ಸಾಧ್ಯವೇ ಅಥವಾ ಅವರ ಮುಂದಿನ ನಡೆ ಏನು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. 2014 ರಲ್ಲಿ ಟರ್ಕಿ ಪಶ್ಚಿಮ ಪಟ್ಟಣದ ಸೋಮಾ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಸಂಭವಿಸಿದ ಸ್ಫೋಟದಿಂದಾಗಿ 301 ಕಾರ್ಮಿಕರು ಸಾವನ್ನಪ್ಪಿದ್ದರು.












Click it and Unblock the Notifications