ಭಾರತದ ವಿರುದ್ಧ ಮಾತನಾಡುತ್ತಿದ್ದ ಮಾಲ್ಡೀವ್ಸ್ ಅಧ್ಯಕ್ಷನಿಗೆ ಆಘಾತ!
ಉಂಡ ಮನೆಗೆ ದ್ರೋಹ ಬಗೆಯೋದನ್ನ ಮಾಲ್ಡೀವ್ಸ್ ನೋಡಿ ಕಲಿಯಬೇಕು ಅಂತಾ ಗಂಭೀರ ಆರೋಪ ಮಾಡಲಾಗ್ತಿದೆ. ಯಾಕಂದ್ರೆ ಭಾರತದ ಸಹಾಯ ಪಡೆದು ಈಗ ಭಾರತದ ವಿರುದ್ಧವೇ ಈ ದೇಶ ತಿರುಗಿ ಬಿದ್ದಿದೆ. ಹೀಗಿದ್ದಾಗ ಆಕ್ರೋಶ ಕೂಡ ಮೊಳಗುತ್ತಿದೆ. ಒಂದು ಕಡೆ ಮಾಲ್ಡೀವ್ಸ್ ನೂತನ ಅಧ್ಯಕ್ಷ ಚೀನಾ ಪರವಾಗಿ ಇದ್ದಾರೆ ಎಂಬ ಆರೋಪಗಳ ನಡುವೆ ತನ್ನದೇ ದೇಶದಲ್ಲಿ ಮಾಲ್ಡೀವ್ಸ್‌ಗೆ ದೊಡ್ಡ ಆಘಾತ ಎದುರಾಗಿದೆ!
ಹೌದು, ಮಾಲ್ದೀವ್ಸ್ ರಾಜಧಾನಿ ಮಾಲೆಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಭಾರತದ ಪರವಾಗಿ ಒಲವು ಇರುವ ಮಾಲ್ದೀವಿಯನ್ ಡೆಮಾಕ್ರಮಿಕ್ ಪಾರ್ಟಿ ಅಂದರೆ ಎಂಡಿಪಿ ಪಾರ್ಟಿ ಭರ್ಜರಿ ಜಯ ಸಾಧಿಸಿದೆ. ಆದರೆ ಇದೇ ವೇಳೆ ಚೀನಾ ಪರ ಒಲವನ್ನ ಹೊಂದಿರುವ ಹಾಲಿ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಅಂದರೆ ಪಿಎನ್‌ಸಿ ಪಕ್ಷ ಭಾರಿ ಹಿನ್ನಡೆ ಅನುಭವಿಸಿದೆ. ಹಾಗಾದ್ರೆ ಅಸಲಿಗೆ ದ್ವೀಪ ರಾಷ್ಟ್ರದಲ್ಲಿ ಈಗ ನಡೆದಿದ್ದು ಏನು? ಮುಂದೆ ಓದಿ.

ಹದಗೆಡುತ್ತಿದೆ ಭಾರತ & ಮಾಲ್ಡೀವ್ಸ್ ಸಂಬಂಧ
ಅಂದಹಾಗೆ ದಿನದಿಂದ ದಿನಕ್ಕೆ ಮಾಲ್ಡೀವ್ಸ್ & ಭಾರತದ ಸಂಬಂಧ ಹದಗೆಡುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಕೆಟ್ಟು ಹೋಗುವ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗಲೇ, ತನ್ನ ಸ್ವಂತ ನೆಲದಲ್ಲಿ ಮಾಲ್ಡೀವ್ಸ್ ಅಧ್ಯಕ್ಷರಿಗೆ ಮುಖಭಂಗ ಆಗಿದೆ. ಭಾರತದ ಪರ ಒಲವು ಹೊಂದಿದ್ದ ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಸಾಲಿಹ್ ಪಕ್ಷದ ಅಭ್ಯರ್ಥಿಯಾದ, ಆದಂ ಅಜೀಮ್ ನೂತನ ಮೇಯರ್ ಆಗಿ ಈಗ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಪಿಎನ್‌ಸಿಯ ಐಶಾತ್ ಅಜಿಮಾ ಶಕೂರ್‌ಗೆ ಸೋಲು ಎದುರಾಗಿದೆ.
ಮೇಯರ್ ಪದವಿ ಕೈಬಿಟ್ಟು ಹೋಯ್ತು!
ಅಷ್ಟಕ್ಕೂ, ಕಳೆದ ವರ್ಷ ನಡೆದಿದ್ದ ಮಾಲ್ದೀವ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊಹಮ್ಮದ್ ಮುಯಿಜು ಮಾಜಿ ಅಧ್ಯಕ್ಷ ಮೊಹಮ್ಮದ್ ಸಾಲಿಹ್ ಅವರನ್ನ ಸೋಲಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಯಿಜು ತಮ್ಮ ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಇದೀಗ ಭಾರತ & ಮಾಲ್ದೀವ್ಸ್ ನಡುವೆ, ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡ ಬೆನ್ನಲ್ಲೇ ಚೀನಾ ಪರ ಒಲವು ಹೊಂದಿದ ಅಧ್ಯಕ್ಷ ಮೊಹಮ್ಮದ್ ಮುಯಿಜು ಪಕ್ಷಕ್ಕೆ ಮಾಲೆ ಮೇಯರ್ ಎಲೆಕ್ಷನ್‌ನಲ್ಲಿ ಭಾರಿ ಹಿನ್ನಡೆ ಆಗಿದೆ.
ಭಾರತಕ್ಕೆ ಗಡುವು ನೀಡಿದ ಮಾಲ್ಡೀವ್ಸ್
ಮಾಲ್ಡೀವ್ಸ್ ಈಗಾಗಲೇ ಭಾರತದ ವಿರೋಧ ಕಟ್ಟಿಕೊಂಡು ಹಲವು ಸಮಸ್ಯೆ ಎದುರಿಸುತ್ತಿದೆ. ಇಷ್ಟಾದರೂ ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೀಗ ಮತ್ತೊಮ್ಮೆ ಭಾರತದ ವಿರುದ್ಧವೆ ಮಾತನಾಡಿರುವ ಮಾಲ್ದೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝ, ಮಾಲ್ದೀವ್ಸ್‌ನ ನೆಲದಿಂದ ಮಾರ್ಚ್ 15ರ ಒಳಗಾಗಿ ಸೇನೆ ವಾಪಸ್ ಕರೆಯಿಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹ ಮಾಡಿದ್ದಾರಂತೆ. 2 ತಿಂಗಳ ಹಿಂದೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕೂಡಲೇ ಮುಯಿಝು ಈ ಪ್ರಸ್ತಾಪ ಇಟ್ಟಿದ್ದರು. ಆದರೆ ಇದೀಗ ಡೆಡ್‌ಲೈನ್ ಕೊಟ್ಟಿರುವುದು, ಸಹಜವಾಗಿ ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಗಿದೆ.

ಒಟ್ನಲ್ಲಿ ಅಕ್ಕಪಕ್ಕದ ದೇಶಗಳ ಜೊತೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕಿದ್ದ ಮಾಲ್ಡೀವ್ಸ್ ಈಗ ಬೇರೆಯದ್ದೇ ಆಟ ಶುರು ಮಾಡಿದೆ. ಆದರೆ ಇದರಿಂದ ಭಾರತಕ್ಕೆ ಯಾವುದೇ ನಷ್ಟವು ಆಗಲಾರದು, ಆದರೆ ಈ ಬೆಳವಣಿಗೆ ಪರಿಣಾಮ ಮಾಲ್ಡೀವ್ಸ್‌ಗೆ ಸಂಕಷ್ಟ ಹೆಚ್ಚು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ. ಹೀಗಾಗಿ ಮಾಲ್ಡೀವ್ಸ್ ನಡೆ ಕಿಚ್ಚು ಹೊತ್ತಿಸುತ್ತಿದೆ.












Click it and Unblock the Notifications