ಮನುಷ್ಯರನ್ನು ಜೀವಂತ ತಿನ್ನುತ್ತಿದೆ ಬ್ಯಾಕ್ಟೀರಿಯಾ..! ‘ಕೊರೊನಾ’ಗಿಂತ ಇದು ಡೇಂಜರ್..!
ಅವರೆಲ್ಲಾ ಫ್ಯಾಮಿಲಿ ಸಮೇತ ಟ್ರಿಪ್ ಹೋಗಿ, ಸಮುದ್ರದ 'ಕ್ರಿಸ್ಟಲ್' ನೀರು ನೋಡುತ್ತಾ ಎಂಜಾಯ್ ಮಾಡಿ ಬರುವಷ್ಟರಲ್ಲಿ ಭಯಾನಕ ರೋಗ ಆ ಕುಟುಂಬವನ್ನು ಬೆನ್ನುಹತ್ತಿತ್ತು. ಇನ್ನೇನು ಡಾಕ್ಟರ್ ಪರೀಕ್ಷೆ ಮಾಡಬೇಕು ಅನ್ನುಷ್ಟರಲ್ಲಿ, ಕೈ-ಕಾಲು, ಬೆರಳು ಹೀಗೆ ದೇಹದ ಭಾಗಗಳನ್ನೇ ಕತ್ತರಿಸಿ, ಕತ್ತರಿಸಿ ಬಿಸಾಡುವ ಪರಿಸ್ಥಿತಿ ಬಂದಿದೆ.
ಈ ಘಟನೆ ನಡೆದಿದ್ದು ಅಮೆರಿಕದ ಟೆಕ್ಸಾಸ್ ಕರಾವಳಿಯಲ್ಲಿ. ಅಂದಹಾಗೆ ನಾವು ಹೇಳ್ತಿರೋದು ಮನುಷ್ಯರನ್ನೇ ಜೀವಂತವಾಗಿ ಕಿತ್ತುತಿನ್ನುವ ಬ್ಯಾಕ್ಟೀರಿಯಾದ ಬಗ್ಗೆ. ಕಳೆದ ವರ್ಷವೇ ಆಸ್ಟ್ರೇಲಿಯಾದಲ್ಲಿ ರೋಗ ಉಲ್ಬಣಿಸಿತ್ತು.
ಆಗ ವೈದ್ಯರು ರೋಗಿಗಳನ್ನು ಪರೀಕ್ಷೆ ನಡೆಸಿದ್ದರು. ಸಣ್ಣ ಗಾಯದೊಂದಿಗೆ ಆರಂಭವಾಗುವ ಈ ಬ್ಯಾಕ್ಟೀರಿಯ ದಾಳಿ ಬರುಬರುತ್ತಾ ದೊಡ್ಡದಾಗಿ, ಸಣ್ಣ ಚೆಂಡಿನ ಆಕಾರಕ್ಕೂ ಅರಳುತ್ತಿತ್ತು.

ಕಡೆಗೆ ಇದನ್ನು 'ಬುರುಲಿ ಅಲ್ಸರ್' ಎಂದು ಗುರುತಿಸಿದ್ದರು. ಈಗ ಅಮೆರಿಕ ಕರಾವಳಿಗೂ ರೋಗ ವಕ್ಕರಿಸಿದ್ದು, ಮೊದಲೇ ಕೊರೊನಾ ಸಂಕಷ್ಟದಲ್ಲಿ ಬೆಂದು ಹೋಗಿರುವ ಅಮೆರಿಕದ ಜನರು ಮನುಷ್ಯರನ್ನೇ ತಿನ್ನುವ ಬ್ಯಾಕ್ಟೀರಿಯಾದ ಪರಿಣಾಮ ಬೆಚ್ಚಿಬಿದ್ದಿದ್ದಾರೆ. ಟೆಕ್ಸಾಸ್ ಮೂಲದ ಡ್ಯಾರೆಲ್ ಎಂಬಾತನಿಗೆ ಈಗ ಚಿಕಿತ್ಸೆ ಮುಂದುವರಿದಿದ್ದು, ದೇಹದ ಬಹುತೇಕ ಅಂಗಗಳನ್ನ ಬ್ಯಾಕ್ಟೀರಿಯಾ ತಿಂದು ಹಾಕಿದೆ.
ಹೇಗೆ ಹರಡುತ್ತದೆ ಬ್ಯಾಕ್ಟೀರಿಯ..?: ಕೊರೊನಾ ಕಾಟದಿಂದ ಮುಕ್ತರಾದರೆ ಸಾಕು ಎನ್ನುವಾಗಲೇ ಹೊಸ ಯುದ್ಧ ಆರಂಭವಾಗಿದೆ. ಬುರುಲಿ ಅಲ್ಸರ್ ಹರಡುವ ಬ್ಯಾಕ್ಟೀರಿಯ ಸಾಮಾನ್ಯವಾಗಿ 'ಒಪೊಸಮ್' ಎಂಬ ಉಭಯವಾಸಿಗಳ ಮಲದಲ್ಲಿ ಕಂಡುಬರುತ್ತದೆ. ಆದರೆ ಬ್ಯಾಕ್ಟೀರಿಯ ಮನುಷ್ಯರ ಚರ್ಮಕ್ಕೆ ಅಂಟಿದ್ದು ಹೇಗೆ ಅಂತಾ ಸಂಶೋಧನೆ ಆರಂಭವಾದಾಗ ಸೊಳ್ಳೆಗಳ ಜಾಡು ಸಿಕ್ಕಿದೆ. ಸೊಳ್ಳೆಗಳ ಮೂಲಕ ಮನುಷ್ಯರಿಗೆ ಬ್ಯಾಕ್ಟೀರಿಯ ಹರಡಿರಬಹುದು ಎನ್ನಲಾಗಿದ್ದು, ಈ ಕುರಿತು ಹೆಚ್ಚಿನ ಸಂಶೋಧನೆಗಳು ಮುಂದುವರಿದಿವೆ. ಮತ್ತೊಂದ್ಕಡೆ 'ಒಪೊಸಮ್' ಪ್ರಾಣಿ ಕಂಡುಬರುವ ದೇಶಗಳು ಅಲರ್ಟ್ ಆಗಿರುವಂತೆ ಆಸ್ಟ್ರೇಲಿಯಾದಿಂದ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.
ಸರ್ಜರಿ ಮಾಡಬೇಕಾಗಿ ಬರಬಹುದು: 'ಬುರುಲಿ ಅಲ್ಸರ್' ಪ್ರಾಥಮಿಕ ಅಥವಾ ದ್ವಿತೀಯ ಹಂತ ತಲುಪಿರುವಾಗಲೇ ಚಿಕಿತ್ಸೆ ಅಗತ್ಯ. ಇದನ್ನು ಮೀರಿ ಹೋದರೆ ಗಾಯ ಸಣ್ಣ ಚೆಂಡಿನ ಆಕಾರಕ್ಕೆ ತಿರುಗುತ್ತದೆ. ಆ ನಂತರ ಸರ್ಜರಿ ಮಾಡಬೇಕಾಗಿ ಬರಬಹುದೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಹಲವರು 'ಬುರುಲಿ ಅಲ್ಸರ್' ಸೋಂಕಿನಿಂದ ಗುಣಮುಖರಾಗಿದ್ದು, ವ್ಯಾಪಕವಾಗಿ ಬ್ಯಾಕ್ಟೀರಿಯ ಹರಡುತ್ತಿರುವುದು ಜನರಲ್ಲಿ ಭಯಮೂಡುವಂತೆ ಮಾಡಿದೆ. ಈಗಾಗಲೇ ಸ್ಥಳೀಯ ಆಡಳಿತ, ಆಸ್ಟ್ರೇಲಿಯಾದ ಸರ್ಕಾರ ಬ್ಯಾಕ್ಟೀರಿಯ ಹರಡದಂತೆ ತಡೆಯಲು ಅಗತ್ಯವಿರುವ ಕ್ರಮ ಕೈಗೊಂಡಿದೆ. ಆದರೂ ಬ್ಯಾಕ್ಟೀರಿಯ ನಿಯಂತ್ರಣ ಅಸಾಧ್ಯವೆಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರೋಗ ನಿರೋಧಕ ಶಕ್ತಿ ನಾಶ: ಬ್ಯಾಕ್ಟೀರಿಯ ಚರ್ಮದ ಮೂಲಕ ದೇಹದೊಳಗೆ ಎಂಟ್ರಿಯಾದ ತಕ್ಷಣ ಜೀವಕೋಶಗಳನ್ನ ನಾಶಮಾಡುತ್ತದೆ. ವಿಷಯುಕ್ತ ಪದಾರ್ಥಗಳನ್ನು ಹರಡುವ ಮೂಲಕ ಆ ಜಾಗ ಕೊಳೆಯುವಂತೆ ಮಾಡುತ್ತದೆ. ಹೀಗೆ ದಿನದಿಂದ ದಿನಕ್ಕೆ ಗಾಯ ಹರಡುತ್ತಾ ಹೋಗುತ್ತದೆ.
ಇನ್ನು ದೇಹದ ರೋಗ ನಿರೋಧಕ ಶಕ್ತಿಯೂ ಕೆಲಸ ಮಾಡದಂತೆ ಈ ಖತರ್ನಾಕ್ ಬ್ಯಾಕ್ಟೀರಿಯ ಪ್ರಭಾವ ಬೀರುತ್ತದೆ. ಹೀಗಾಗಿಯೇ ವಿಜ್ಞಾನಿಗಳು ಹೆಚ್ಚು ಚಿಂತಾಕ್ರಾಂತರಾಗಿ, 'ಬುರುಲಿ ಅಲ್ಸರ್' ನಿಯಂತ್ರಿಸಲು ಹೆಚ್ಚಿನ ಸಂಶೋಧನೆಯಲ್ಲಿ ತೊಡಗಿದ್ದಾರೆ. ಈವರೆಗೂ 'ಬುರುಲಿ ಅಲ್ಸರ್' ನಿಯಂತ್ರಣಕ್ಕೆ ಅಧಿಕೃತ ಔಷಧ ಸಿಕ್ಕಿಲ್ಲವಾದರೂ, ಈಗಿರುವ ಔಷಧಗಳಿಂದಲೇ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications