ಇಟಲಿಯಲ್ಲಿ ಭೀಕರ ಅಪಘಾತ: ಸೇತುವೆಯಿಂದ 100 ಅಡಿ ಕೆಳಗೆ ಬಿದ್ದ ಬಸ್‌ಗೆ ಬೆಂಕಿ- 21 ಜನರು ಸಜೀವ ದಹನ
ಇಟಲಿಯ ವೆನಿಸ್‌ನಲ್ಲಿ ಮಂಗಳವಾರ ಭಾರಿ ಅಪಘಾತ ಸಂಭವಿಸಿದ್ದು, ಬಸ್ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದಿದೆ. ಈ ಘಟನೆಯಲ್ಲಿ 21 ಜನರು ಸಾವನ್ನಪ್ಪಿದ್ದು, ಹೆಚ್ಚಿನ ಸಂಖ್ಯೆಯ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ಬಸ್ ಮೀಥೇನ್ ಅನಿಲದಿಂದ ಚಲಿಸುತ್ತಿತ್ತು. ಆದ್ದರಿಂದ ಸೇತುವೆಯಿಂದ ಬಿದ್ದ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಅನೇಕ ಜನರು ಸಜೀವ ದಹನವಾಗಿದ್ದಾರೆ. ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಪ್ರಯತ್ನ ನಡೆಯುತ್ತಿದೆ. ಸತ್ತವರು ಮತ್ತು ಗಾಯಗೊಂಡವರಲ್ಲಿ ಇಟಾಲಿಯನ್ನರು ಮಾತ್ರವಲ್ಲದೆ ಅನೇಕ ದೇಶಗಳ ಜನರು ಇದ್ದರು ಎಂದು ತಿಳಿದು ಬಂದಿದೆ. ಘಟನೆಯ ಹಲವು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಮೇಯರ್ ಲುಯಿಗಿ ಬ್ರುಗ್ನಾರೊ ಅವರು ಫೇಸ್‌ಬುಕ್‌ನಲ್ಲಿ ಹೀಗೆ ಬರೆದಿದ್ದಾರೆ- ಇಂದು ಸಂಜೆ ಭಾರಿ ದುರಂತ ಸಂಭವಿಸಿದೆ. ಇದೊಂದು ಭಯಾನಕ ಹಾಗೂ ನೋವಿನ ಘಟನೆಯಾಗಿದೆ. ಇನ್ನೂ ಈ ಬಗ್ಗೆ ವೆನಿಸ್ ಪ್ರಾಂತ್ಯದ ಗವರ್ನರ್ ಲುಕಾ ಜಿಯಾ ಅವರು, ಈ ಘಟನೆಯಲ್ಲಿ 21 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 20 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿಗಳಿಗೆ ದೃಢಪಡಿಸಿದ್ದಾರೆ.
At least 20 dead after bus falls from Venice bridge, reports AFP, quoting city hall
— ANI (@ANI) October 3, 2023
ಸ್ಥಳೀಯ ಅಧಿಕಾರಿಗಳ ಪ್ರಕಾರ, ಬಸ್ಸು ಐತಿಹಾಸಿಕ ಕೇಂದ್ರವಾದ ವೆನಿಸ್‌ನಿಂದ ಕ್ಯಾಂಪಿಂಗ್ ಸೈಟ್‌ಗೆ ಹಿಂತಿರುಗುತ್ತಿದ್ದಾಗ ರಾತ್ರಿ 7.30 ರ ಸುಮಾರಿಗೆ ನಿಯಂತ್ರಣ ಕಳೆದುಕೊಂಡು ಸೇತುವೆಯಿಂದ ಪಲ್ಟಿಯಾಗಿದೆ. ಅದರಲ್ಲಿ ಮೀಥೇನ್ ಇದ್ದುದರಿಂದ ತಕ್ಷಣ ಬೆಂಕಿ ಹತ್ತಿಕೊಂಡಿದೆ. ಘಟನೆ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸುವಷ್ಟರಲ್ಲಿ ಪ್ರಾಣಹಾನಿ ಸಂಭವಿಸಿದೆ.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಎಂದು ಬರೆದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾನು ಮೇಯರ್ ಲುಯಿಗಿ ಬ್ರುಗ್ನಾರೊ ಮತ್ತು ಸಾರಿಗೆ ಸಚಿವ ಮ್ಯಾಟಿಯೊ ಸಾಲ್ವಿನಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.
ಚಾಲಕ ಅಸ್ವಸ್ಥನಾಗಿದ್ದನೇ?
ಕೆಲವು ವರದಿಗಳು ಚಾಲಕ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗುವುದು ಅಥವಾ ಅಸ್ವಸ್ಥಗೊಂಡಿರುವುದು ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದಾಗ್ಯೂ ಅದರ ತನಿಖೆ ಇನ್ನೂ ನಡೆಯುತ್ತಿದೆ. Il Corriere Della Sera ಪತ್ರಿಕೆಯ ಪ್ರಕಾರ, ತಡೆಗೋಡೆ ಮುರಿದ ನಂತರ, ಬಸ್ ಸೇತುವೆಯಿಂದ ಕೆಳಗಿಳಿದು ರೈಲ್ವೆ ಹಳಿ ಬಳಿ ಸುಮಾರು 100 ಅಡಿ ಕೆಳಗೆ ಬಿದ್ದಿದೆ. ವಿದ್ಯುತ್ ತಂತಿಗಳಿಗೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪತ್ರಿಕೆಯಲ್ಲಿ ಹೇಳಲಾಗಿದೆ. ಇದರಿಂದಾಗಿ ಅನೇಕ ಜನರು ಸಜೀವ ದಹನವಾಗಿದ್ದಾರೆ.












Click it and Unblock the Notifications