ಸಿಡ್ನಿ ಕೆಫೆ ದಾಳಿ ಟೋರಿ ಜಾನ್ಸನ್ ಸಾಹಸ ಸ್ಮರಣೀಯ
ಬೆಂಗಳೂರು,ಡಿ.16: ಸಿಡ್ನಿಯ ಒಪೆರಾ ಹೌಸ್ ನ ಮಾರ್ಟಿನ್ ಪ್ಲೇಸ್ ನಲ್ಲಿದ್ದ ಕೆಫೆಯ ಮ್ಯಾನೇಜರ್ ಟೋರಿ ಜಾನ್ಸನ್ ಸಾಹಸಕ್ಕೆ ಇಡೀ ವಿಶ್ವವೇ ಪ್ರಶಂಸೆ ಸಲ್ಲಿಸುತ್ತಿದೆ. ಉಗ್ರರ ಕಪಿಮುಷ್ಟಿಯಲ್ಲಿದ್ದ ಒತ್ತೆಯಾಳುಗಳನ್ನು ಪಾರು ಮಾಡಲು ಟೋರಿ ಯತ್ನಿಸಿದ್ದು ಈಗ ಬೆಳಕಿಗೆ ಬಂದಿದೆ.
ಉಗ್ರನ ಒತ್ತೆ ಸೆರೆಯಲ್ಲಿದ್ದ ವ್ಯಕ್ತಿಗಳನ್ನು ಪಾರು ಮಾಡಲು ಭಯೋತ್ಪಾದಕನ ಕೈಯಲ್ಲಿದ್ದ ಬಂದೂಕನ್ನು ಕಿತ್ತುಕೊಳ್ಳಲು ಹೋಗಿ ಗುಂಡಿಗೆ ಬಲಿಯಾದ ಲಿಂಟ್ ಕೆಫೆ ಮ್ಯಾನೇಜರ್ 34 ವರ್ಷದ ಟೋರಿ ಜಾನ್‌ಸನ್‌ನನ್ನು ಈಗ ಹೀರೋ ಎಂದು ಪರಿಗಣಿಸಿ ಸ್ಮರಿಸಲಾಗುತ್ತಿದೆ.
ಉಗ್ರರ ಗುಂಡಿಗೆ ಬಲಿಯಾದ ಇಬ್ಬರಲ್ಲಿ ಟೋರಿ ಜಾನ್‌ಸನ್ ಒಬ್ಬ. ಉಗ್ರನ ಗುಂಡೇಟಿನಿಂದ ನೆಲಕ್ಕುರುಳಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸಿದಾಗ ಅಲ್ಲಿ ಕೊನೆಯುಸಿರೆಳೆದ. ಆಸ್ಟ್ರೇಲಿಯಾ ಕಲಾವಿದ ಕೇಟ್ ಜಾನ್‌ಸನ್ ಮಗನಾದ ಟೋರಿ 2012ರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿದ್ದ. [ಬೆಚ್ಚಿ ಬೀಳಿಸಿದ ಸಿಡ್ನಿ ಕೆಫೆ ಆಕ್ರಮಣ: ಕನ್ನಡಿಗರ ಅನುಭವ ಕಥನ]

ನಿನ್ನೆ ಹೋಟೆಲ್ ಒಳ ಪ್ರವೇಶಿಸಿದ ಉಗ್ರ ಹಲವರನ್ನು ಒತ್ತೆಯಿಟ್ಟುಕೊಂಡಿದ್ದ. ಗೋಳಾಡುತ್ತಿದ್ದ ಒತ್ತೆಯಾಳುಗಳು ತಪ್ಪಿಸಿಕೊಳ್ಳಲು ಅನುಕೂಲಮಾಡಿಕೊಡುವುದಕ್ಕಾಗಿ ಟೋರಿಯು ಉಗ್ರನ ಮೇಲೆ ದಾಳಿ ಮಾಡಿ ಬಂದೂಕು ಕಿತ್ತುಕೊಳ್ಳಲು ಮುಂದಾದ. ಆದರೆ ಅದು ಸಾಧ್ಯವಾಗಲಿಲ್ಲ. [ಇನ್ಫೋಸಿಸ್ ಟೆಕ್ಕಿ ಕುಟುಂಬ ಫುಲ್ ಖುಷ್]
ಟೋರಿ ಉಗ್ರನ ಗುಂಡಿಗೆ ಬಲಿಯಾದ ಪ್ರಕರಣ ಅಂತ್ಯಗೊಂಡ ನಂತರ ಪ್ರತ್ಯಕ್ಷದರ್ಶಿಗಳು ಈ ವಿಷಯವನ್ನು ಇತರರಿಗೆ ತಿಳಿಸಿದಾಗ ಜನ ಟೋರಿಯನ್ನು ಹೀರೋ ಎಂದು ಬಣ್ಣಿಸಿದ್ದಾರೆ.
ಟೋರಿ ಜಾನ್‌ಸನ್ ಇಂದು ಮರೆಯಾಗಿದ್ದಾನೆ. ಆದರೆ ಎಂದೂ ಅವನು ಆಸ್ಟ್ರೇಲಿಯಾ ಜನತೆಯ ಮನಸ್ಸಿನಲ್ಲುಳಿಯುತ್ತಾನೆ. ಅವನಿಗೆ ದೇವರು ಚಿರಶಾಂತಿ ನೀಡಲಿ ಎಂದು ಜನತೆ ಕಂಬನಿ ಮಿಡಿದಿದ್ದಾರೆ. (ಪಿಟಿಐ)












Click it and Unblock the Notifications