Nepal Prime Minister: ಸುಶೀಲ ಕರ್ಕಿ ನೇಪಾಳದ ಹಂಗಾಮಿ ಪ್ರಧಾನಿ, ಪ್ರಮಾಣ ವಚನ ಸ್ವೀಕಾರ!
ಭಾರತದ ನೆರೆಯ ದೇಶ ನೇಪಾಳ ಒದ್ದಾಡಿ ಹೋಗಿತ್ತು, ಕಳೆದ ಒಂದು ವಾರದಿಂದ ನೇಪಾಳ ದೇಶ ಕೊತ ಕೊತ ಕುದಿಯುತ್ತಾ ಇತ್ತು. ಆದರೆ ಇದೀಗ ಎಲ್ಲವೂ ತಣ್ಣಗಾಗಿ ಹೋಗಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದ್ದ ನೇಪಾಳದ ಯುವಕರು & ಯುವತಿಯರು ಇದೀಗ ರಾಜಕೀಯ ಗೆಲುವು ಕಂಡಿದ್ದಾರೆ. ಸುಶೀಲ ಕರ್ಕಿ ನೇಪಾಳದ ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ನೇಪಾಳದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಧಾನಿ ಪಟ್ಟ ಅಲಂಕರಿಸಿದ್ದಾರೆ.
ಎಲ್ಲಿ ನೋಡಿದರೂ ಬೆಂಕಿ... ಸುಟ್ಟು ಹೋದ ಟೈರ್, ಧಗಧಗಿಸುತ್ತಿರುವ ಕಟ್ಟಡ... ಹಿಂಸಾಚಾರ ನಿಲ್ಲಿಸಲು ಪೊಲೀಸರ ಪರದಾಟ.. ಇಂತಹ ದೃಶ್ಯಗಳು ಕಳೆದ ಒಂದು ವಾರದಿಂದ ನೇಪಾಳ ದೇಶದ ಹಲವು ನಗರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಸಾಮಾನ್ಯ ಆಗಿದ್ದವು. ಅದರಲ್ಲೂ ಭಾರತದ ನೆರೆ ದೇಶದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದಿತ್ತು. ಬೀದಿಗೆ ಇಳಿದು ಹೋರಾಟ ಶುರು ಮಾಡಿದ್ದ ಜೆನ್-ಜೀ ಅಂದ್ರೆ ಹೊಸ ತಲೆಮಾರಿನ ಯುವತಿ & ಯುವಕರು, ನೇಪಾಳದ ಸರ್ಕಾರವನ್ನೇ ಕೆಡವಿ ಹಾಕಿದ್ದಾರೆ. ಇದು ಸಾಲದು ಅಂತಾ ನೇಪಾಳ ಪ್ರಧಾನಿ ಮನೆಗೂ ಬೆಂಕಿ ಹಚ್ಚಿದ್ದು, ಧಗಧಗ ಹೊತ್ತಿ ಉರಿದ ಕಟ್ಟಡಗಳ ಜೊತೆಗೆ ನೇಪಾಳದ ನೆಮ್ಮದಿಯು ಕೂಡ ಹಾಳಾಗಿ ಹೋಗಿತ್ತು. ಆದರೆ ಇದೀಗ ಹೊಸ ಪ್ರಧಾನಿ ಆಯ್ಕೆಯಾಗಿದ್ದಾರೆ.

ಹಂಗಾಮಿ ಪ್ರಧಾನಿ ಸುಶೀಲ ಕರ್ಕಿ
ನೇಪಾಳ ದೇಶ ಭಾರತದ ಪಕ್ಕದ ರಾಷ್ಟ್ರವಾಗಿದ್ದು, ಈ ದೇಶದಲ್ಲಿ ಶಾಂತಿ ನೆಲೆಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಯಾಕಂದ್ರೆ ನೇಪಾಳ ನೆಲದಲ್ಲಿ ಏನಾದರೂ ಅಶಾಂತಿ ಹೆಚ್ಚಾದರೆ ಅದು ಮುಂದೆ ನಮ್ಮ ದೇಶ ಭಾರತಕ್ಕೂ ಅಪಾಯ ತಂದೊಡ್ಡುತ್ತದೆ. ಹೀಗಿದ್ದಾಗ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನೇಪಾಳ ದೇಶದಲ್ಲಿ ಭಾರಿ ದೊಡ್ಡ ಹೋರಾಟ ನಡೆಯುತ್ತಿತ್ತು. ಹೀಗೆ ಶುರುವಾಗಿದ್ದ ಹೋರಾಟದಲ್ಲಿ ರಕ್ತಪಾತವೇ ನಡೆದು ಹೋಗಿತ್ತು. ಇದೀಗ ಎಲ್ಲವೂ ತಣ್ಣಗಾಗಿದ್ದು, ನೇಪಾಳ ಶಾಂತವಾಗಿದೆ. ಹೀಗಾಗಿ ಇದೀಗ ನೇಪಾಳ ನೆಲದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಂಗಾಮಿ ಪ್ರಧಾನಿಯಾಗಿ ಸುಶೀಲ ಕರ್ಕಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಸಾಕಷ್ಟು ಗಮನ ಸೆಳೆದಿದೆ.
ಒಟ್ನಲ್ಲಿ ನೇಪಾಳ ದೇಶ ಇದೀಗ ಹೊಸ ಹಾದಿಗೆ ಹೆಜ್ಜೆ ಹಾಕಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಡೆಗೆ ಹೆಜ್ಜೆ ಹಾಕುವ ನಿರೀಕ್ಷೆಯಲ್ಲಿ ಇದೆ. ಮತ್ತೊಂದು ಕಡೆ ನೇಪಾಳ ದೇಶದಲ್ಲಿ ಇಷ್ಟು ವರ್ಷಗಳ ಕಾಲ ಭ್ರಷ್ಟಾಚಾರ ಮಾಡಿದ್ದ ರಾಜಕೀಯ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಕೂಡ ಇದೀಗ ದಟ್ಟವಾಗಿದ್ದು, ಹೀಗಾಗಿ ನೇಪಾಳ ಬೆಳವಣಿಗೆ ಜಗತ್ತಿನ ಗಮನ ಸೆಳೆದಿದೆ.












Click it and Unblock the Notifications