ಶ್ರೀಲಂಕಾ ರಾಜಕೀಯಕ್ಕೆ ಹೊಸ ತಿರುವು: ಸಂಸತ್ ವಿಸರ್ಜನೆಗೆ ತಡೆ
ಕೊಲಂಬೊ, ನವೆಂಬರ್ 14: ಅವಧಿಗೆ ಎರಡು ವರ್ಷಕ್ಕೂ ಮೊದಲೇ ಸಂಸತ್ ವಿಸರ್ಜನೆ ಮಾಡಿ ಚುನಾವಣೆ ಘೋಷಿಸಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಭಾರಿ ಹಿನ್ನಡೆಯಾಗಿದೆ.
ಸಿರಿಸೇನಾ ಅವರ ಆದೇಶವನ್ನು ಶ್ರೀಲಂಕಾ ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಅಲ್ಲದೆ ಚುನಾವಣೆ ಸಿದ್ಧತೆಗಳಿಗೆ ತಡೆಯಾಜ್ಞೆ ನೀಡಿದೆ.
ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅ.26ರಂದು ಅಧಿಕಾರದಿಂದ ಕೆಳಗಿಳಿಸಿದ್ದ ಮೈತ್ರಿಪಾಲ ಸಿರಿಸೇನಾ, ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನಿಯನ್ನಾಗಿ ನೇಮಿಸಿದ್ದರು. ಇದರಿಂದ ಶ್ರೀಲಂಕಾ ರಾಜಕೀಯದಲ್ಲಿ ಭಾರಿ ಬಿಕ್ಕಟ್ಟು ಉಂಟಾಗಿತ್ತು.

ಪದಚ್ಯುತ ಪ್ರಧಾನಿ ವಿಕ್ರಮಸಿಂಘೆ ತಮ್ಮ ಪ್ರಧಾನಿ ಕಚೇರಿ ಮತ್ತು ನಿವಾಸವನ್ನು ತೊರೆಯಲು ನಿರಾಕರಿಸಿದ್ದರು. ರಾಜಪಕ್ಸ ಅವರಿಗೆ ಸಿರಿಸೇನಾ ಪಕ್ಷ ಬೆಂಬಲ ನೀಡಿದ್ದರೂ, ಪ್ರಧಾನಿಯಾಗಲು ಅವರಿಗೆ ಬಹುಮತದ ಕೊರತೆ ಎದುರಾಗಿತ್ತು.
ಹೀಗಾಗಿ ಸಿರಿಸೇನಾ ತಮ್ಮ ಅಧಿಕಾರ ಬಳಸಿ ಸಂಸತ್ ವಿಸರ್ಜನೆ ಮಾಡಿ ಜನವರಿಯಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದರು.
225 ಸದಸ್ಯರ ಸಂಸತ್ ಬುಧವಾರ ಸಭೆ ಸೇರುವ ನಿರೀಕ್ಷೆಯಿದ್ದು, ರಾಜಪಕ್ಸೆ ಅವರ ಪರವಾಗಿ ಮತ್ತೆ ಬಹುಮತ ಸಾಬೀತುಪಡಿಸುವ ಕಾರ್ಯ ನಡೆಯುವ ಸಾಧ್ಯತೆ ಇದೆ.
'ನಾವು ಬುಧವಾರ ಸಂಸತ್‌ಗೆ ತೆರಳಲಿದ್ದು, ನಾವೇ ಶ್ರೀಲಂಕಾದ ಅಧಿಕೃತ ಸರ್ಕಾರ ಎಂಬುದನ್ನು ಸಾಬಿತುಪಡಿಸಲಿದ್ದೇವೆ' ಎಂದು ವಿಕ್ರಮಸಿಂಘೆ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ರಾಜಪಕ್ಸ ಅವರ ಪಕ್ಷ ತಿಳಿಸಿದೆ.
Rumors circulating that PM @PresRajapaksa resigning is completely false. We will all attend parliament tomorrow. The decision by the Supreme Court is an interim order to consider the case and “not” the final decision.
— Namal Rajapaksa (@RajapaksaNamal) 13 November 2018
ತಮ್ಮ ತಂದೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಶುದ್ಧ ಸುಳ್ಳು. ನಾವು ನಾಳೆ ಸಂಸತ್ ಕಲಾಪದಲ್ಲಿ ಭಾಗವಹಿಸಲಿದ್ದೇವೆ. ಪ್ರಕರಣವನ್ನು ಪರಿಗಣಿಸಿ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆಯೇ ಹೊರತು ಅದು ಅಂತಿಮ ನಿರ್ಧಾರವಲ್ಲ ಎಂದು ಮಹಿಂದಾ ರಾಜಪಕ್ಸ ಅವರ ಮಗ, ಸಂಸದ ನಮಲ್ ರಾಜಪಕ್ಸ ಹೇಳಿದ್ದಾರೆ.
ಸಂಸತ್ ವಿಸರ್ಜನೆ ನಿರ್ಧಾರವನ್ನು ಪ್ರಶ್ನಿಸಿ ವಿವಿಧ ರಾಜಕೀಯ ಪಕ್ಷಗಳು ಕೋರ್ಟ್ ಮೆಟ್ಟಿಲೇರಿದ್ದವು. ಇನ್ನೂ ಮೂರು ದಿನಗಳ ವಿಚಾರಣೆ ನಡೆಸಿ ಡಿಸೆಂಬರ್ 7ರಂದು ಅಂತಿಮ ಆದೇಶ ನೀಡುವುದಾಗಿ ಕೋರ್ಟ್ ತಿಳಿಸಿದೆ.












Click it and Unblock the Notifications