ಆರ್ಥಿಕ ಬಿಕ್ಕಟ್ಟು: ಲಂಕಾ ಸೇನೆ ಮತ್ತು ಪೊಲೀಸರಿಗೆ ತುರ್ತು ಅಧಿಕಾರ
ಕೊಲಂಬೊ ಮೇ 10: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಿಂಸಾಚಾರಕ್ಕೆ ಏಳು ಮಂದಿ ಬಲಿಯಾಗಿದ್ದು 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜೊತೆಗೆ ಹಾಲಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರ ಹಿರಿಯ ಸಹೋದರ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆಗೂ ಕಾರಣವಾಗಿದೆ. ಇಂದಿಗೂ ಹಿಂಸಾತ್ಮಕ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ವಾರಂಟ್ ಇಲ್ಲದೆ ಜನರನ್ನು ಬಂಧಿಸಲು ಶ್ರೀಲಂಕಾ ತನ್ನ ಮಿಲಿಟರಿ ಮತ್ತು ಪೊಲೀಸರಿಗೆ ತುರ್ತು ಅಧಿಕಾರವನ್ನು ನೀಡಿದೆ.

ಸರ್ಕಾರ ಮಧ್ಯೆ ಪ್ರವೇಶಿಸಬೇಕು
ಹಿಂದೂ ಮಹಾಸಾಗರದ ರಾಷ್ಟ್ರ ಶ್ರೀಲಂಕಾ ಇತಿಹಾಸದಲ್ಲಿ ತನ್ನ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದನ್ನು ಬಗೆಹರಿಸಲು ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸಾವಿರಾರು ಜನ ಕೆಲ ವಾರಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂದಿನಿಂದ ಇಂದಿನವರೆಗೂ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಕರ್ಫ್ಯೂ ಕೂಡ ಜಾರಿಗೊಳಿಸಲಾದ್ದು, ಅಶ್ರುವಾಯು, ಜಲಫಿರಂಗಿ, ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾದರೂ ದಿನಗಳೆದಂತೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿದೆ ಹೊರತು ನಿಯಂತ್ರಣಕ್ಕೆ ಬರುವಂತೆ ಕಾಣಿಸುತ್ತಿಲ್ಲ.

ಕರ್ಫ್ಯೂ ಧಿಕ್ಕರಿಸಿ ಪ್ರತಿಭಟನೆ
ಸಾವಿರಾರು ಪ್ರತಿಭಟನಾಕಾರರು ದ್ವೀಪದಾದ್ಯಂತ ಕರ್ಫ್ಯೂ ಅನ್ನು ಧಿಕ್ಕರಿಸಿ ಪ್ರತಿಭಟನೆಗಿಳಿದಿದ್ದಾರೆ. ಇಂಧನ, ಆಹಾರ ಮತ್ತು ಔಷಧಿಗಳ ಕೊರತೆಯು ಒಂದು ತಿಂಗಳಿಗೂ ಹೆಚ್ಚು ಅವಧಿಯಲ್ಲಿ ಬಹುತೇಕ ಶಾಂತಿಯುತವಾಗಿದ್ದ ಸಾವಿರಾರು ಜನರ ಪ್ರತಿಭಟನೆಯನ್ನು ಬೀದಿಗೆ ಹಿಂಸಾಚಾರಕ್ಕೆ ತಳ್ಳಿದೆ. ಕೋಪಗೊಂಡ ಪ್ರತಿಭಟನಾಕಾರರು ಸೋಮವಾರ ತಡರಾತ್ರಿ ಸರ್ಕಾರಕ್ಕೆ ಸಂಬಂಧಿಸಿದ ರಾಜಕಾರಣಿಗಳ ಮೇಲೆ ದಾಳಿ ಮಾಡಿ, ಅವರು ಹೊಂದಿರುವ ಮನೆಗಳು, ಅಂಗಡಿಗಳು ಮತ್ತು ವ್ಯಾಪಾರ ಮಳಿಗೆಗಳಿಗೆ ಬೆಂಕಿ ಹಚ್ಚಿದ ಕೆಲವು ವರದಿಗಳು ಹೊರಬಂದಿವೆ. ಮಂಗಳವಾರದ ವೇಳೆಗೆ ಪರಿಸ್ಥಿತಿಯು ಹೆಚ್ಚಾಗಿ ಶಾಂತವಾಗಿದೆ. "ಸೋಮವಾರ ನಡೆದ ಹಿಂಸಾಚಾರದಲ್ಲಿ ಸುಮಾರು 200 ಜನರು ಗಾಯಗೊಂಡಿದ್ದಾರೆ," ಎಂದು ಪೊಲೀಸ್ ವಕ್ತಾರ ನಿಹಾಲ್ ತಲ್ದುವಾ ಹೇಳಿದ್ದಾರೆ.

ಗೆಜೆಟ್ ಅಧಿಸೂಚನೆಯಲ್ಲಿ ಏನಿದೆ
ಇತ್ತೀಚಿನ ನಿರ್ಧಾರದ ಪ್ರಕಾರ, ಸೇನೆಯು ಜನರನ್ನು ಪೊಲೀಸರಿಗೆ ಹಸ್ತಾಂತರಿಸುವ ಮೊದಲು 24 ಗಂಟೆಗಳವರೆಗೆ ಬಂಧಿಸಬಹುದು. ಆದರೆ ಯಾವುದೇ ಖಾಸಗಿ ಆಸ್ತಿಯನ್ನು ಪಡೆಗಳು ಶೋಧಿಸಬಹುದು ಎಂದು ಸರ್ಕಾರ ಮಂಗಳವಾರ ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದೆ. "ಪೊಲೀಸ್ ಅಧಿಕಾರಿಯಿಂದ ಬಂಧಿಸಲ್ಪಟ್ಟ ಯಾವುದೇ ವ್ಯಕ್ತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ" ಎಂದು ಅದು ಹೇಳಿದೆ, ಸಶಸ್ತ್ರ ಪಡೆಗಳಿಗೂ ಅದೇ ರೀತಿ ಮಾಡಲು 24 ಗಂಟೆಗಳ ಗಡುವನ್ನು ನಿಗದಿಪಡಿಸಿದೆ. ಶುಕ್ರವಾರದಿಂದ ಈಗಾಗಲೇ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾದಲ್ಲಿ ಘೋಷಣೆ ಮಾಡಲಾಗಿದೆ.

ಪಲಾಯನ ಮಾಡಿದ ರಾಜಪಕ್ಸೆ
ಈ ಮಧ್ಯೆ ಶ್ರೀಲಂಕಾದ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಅವರ ಕುಟುಂಬವು ದ್ವೀಪ ರಾಷ್ಟ್ರದ ಈಶಾನ್ಯ ಭಾಗದಲ್ಲಿರುವ ಟ್ರಿಂಕೋಮಲಿಯ ನೌಕಾ ನೆಲೆಯಲ್ಲಿ ಆಶ್ರಯ ಪಡೆದಿದೆ ಎಂದು ಮೂಲಗಳು ತಿಳಿಸಿವೆ. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ನಡುವೆ ಮಾರಣಾಂತಿಕ ಪ್ರತಿಭಟನೆಗಳು ಶ್ರೀಲಂಕಾದಲ್ಲಿ ಮುಂದುವರೆದಿವೆ. ಹೀಗಾಗಿ ನಿನ್ನೆಯಷ್ಟೇ ಮಹಿಂದಾ ರಾಜಪಕ್ಸೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೂ ಹಿಂಸಾಚಾರ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಶ್ರೀಲಂಕಾದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ಮನೆಯ ಸುತ್ತಲೂ ಹಿಂಸಾತ್ಮಾಕ ಘಟನೆಗಳು ವರದಿಯಾಗುತ್ತಲೇ ಇವೆ.












Click it and Unblock the Notifications