Sri Lanka Crisis: ಶ್ರೀಲಂಕಾದಲ್ಲಿ ಕೆಜಿ ಅರಿಶಿಣಕ್ಕೆ 3853 ರೂ., ಬ್ರೆಡ್ 3,583 ರೂ!
ಕೊಲಂಬೋ, ಏಪ್ರಿಲ್ 13: ಶ್ರೀಲಂಕಾ ದಶಕಗಳಲ್ಲೇ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸಾಮೂಹಿಕ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಅಧ್ಯಕ್ಷ ಗೊಟಬಯ ರಾಜಪಕ್ಸೆ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈ ನಡುವೆ ಶ್ರೀಲಂಕಾದಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ.
ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ವಾರಗಳ ಕಾಲ ನಡೆದ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ. ಆಹಾರ ಉತ್ಪನ್ನ, ಪೆಟ್ರೋಲ್-ಡೀಸೆಲ್ ಮತ್ತು ಔಷಧಗಳಂತಹ ಇತರ ಅಗತ್ಯ ವಸ್ತುಗಳ ಕೊರತೆಯ ಹಿನ್ನೆಲೆ ಜನರು ಸರ್ಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ಶ್ರೀಲಂಕಾದಲ್ಲಿ ಒಂದು ವರ್ಷದಲ್ಲಿ ಪೆಟ್ರೋಲ್ ಬೆಲೆ ಶೇಕಡ 85 ಹಾಗೂ ಡೀಸೆಲ್ ಬೆಲೆ ಶೇಕಡ 69ರಷ್ಟು ಅಧಿಕವಾಗಿದೆ. ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಶೇ.84ರಷ್ಟು ಏರಿಕೆಯಾಗಿದೆ. ಈಗಾಗಲೇ ಅಕ್ಕಿಯ ಬೆಲೆಯು ಮುನ್ನೂರು ರೂಪಾಯಿ ದಾಟಿದೆ. ಹಾಲಿನ ಪುಡಿ ಬೆಲೆ ಎರಡು ಸಾವಿರ ಸಮೀಪಕ್ಕೆ ತಲುಪಿದೆ.

ಕೈಗೆಟುಕದ ದರ: ಅಗತ್ಯ ವಸ್ತುಗಳ ಬೆಲೆ ಎಷ್ಟಿದೆ?
ಶ್ರೀಲಂಕಾದಲ್ಲಿ ಎಲ್ಲಾ ವಸ್ತುಗಳ ಬೆಲೆಯು ತೀವ್ರ ಏರಿಕೆ ಆಗಿರುವ ಹಿನ್ನೆಲೆ ಜನರು ಆತಂಕದಲ್ಲಿ ಇದ್ದಾರೆ. ಶ್ರೀಲಂಕಾದಲ್ಲಿ ಪ್ರಸ್ತುತ ಒಂದು ಕೆಜಿ ಅರಿಶಿನದ ಬೆಲೆ 3853 ರೂ ಆಗಿದ್ದು, ಶೇಕಡ 443ರಷ್ಟು ಏರಿಕೆಯಾಗಿದೆ. ಒಂದು ಕೆಜಿ ಬ್ರೆಡ್ 3583 ರೂ.ಗೆ ಲಭ್ಯವಿದ್ದು, ಇದರ ಬೆಲೆಯೂ ಶೇ.443ರಷ್ಟು ಏರಿಕೆಯಾಗಿದೆ. ಅಕ್ಕಿಯ ಬೆಲೆ ಶೇ.93ರಷ್ಟು ಏರಿಕೆಯಾಗಿದ್ದು, ಬೇಳೆ ದರ ಶೇ.117ರಷ್ಟು ಏರಿಕೆಯಾಗಿದೆ.
ಸಾಮಾನ್ಯ ಮಾರುಕಟ್ಟೆಯಲ್ಲಿ ಕಿಲೋ ಅಕ್ಕಿಯ ಕನಿಷ್ಠ ಬೆಲೆ ಈಗ 200 ರಿಂದ 240 ರೂ. ಮೀರಿದೆ. ಹಾಲಿನ ಪುಡಿ ಮತ್ತು ಅಗತ್ಯ ವಸ್ತುಗಳ ಬೆಲೆಯನ್ನು ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಆಮದನ್ನು ಸರ್ಕಾರ ನಿರ್ಬಂಧಿಸಿದೆ. ಶ್ರೀಲಂಕಾದಲ್ಲಿ ಭಾರೀ ಪ್ರಮಾಣದ ಇಂಧನ ಕೊರತೆಯ ನಡುವೆ ಭಾರತವು ಅದನ್ನು ಪರಿಹರಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ.

ಭಾರತವು ಇತ್ತೀಚೆಗೆ 40 ಸಾವಿರ ಮೆಟ್ರಿಕ್ ಟನ್ ಡೀಸೆಲ್ ಮತ್ತು 36 ಸಾವಿರ ಮೆಟ್ರಿಕ್ ಟನ್ ಪೆಟ್ರೋಲ್ ಅನ್ನು ಶ್ರೀಲಂಕಾಕ್ಕೆ ಸಾಲ ರೂಪದಲ್ಲಿ ಸಾಗಿಸಿದೆ. ಬಿಕ್ಕಟ್ಟನ್ನು ಎದುರಿಸಲು ಸರ್ಕಾರವು ಸಹಾಯಕ್ಕಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ (IMF) ಮಾತುಕತೆ ನಡೆಸಲು ಪ್ರಯತ್ನಿಸುತ್ತಿದೆ.
ಇದೇ ವೇಳೆ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧತೆ ನಡೆದಿದೆ. ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷ ಎಸ್‌ಜೆಬಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತರುವುದಾಗಿ ಘೋಷಿಸಿದೆ. ವರದಿಗಳ ಪ್ರಕಾರ, ಎಸ್‌ಜೆಬಿ ಇದಕ್ಕಾಗಿ ಸಂಸದರಿಂದ ಸಹಿ ತೆಗೆದುಕೊಳ್ಳಲು ಪ್ರಾರಂಭ ಮಾಡಿದೆ.












Click it and Unblock the Notifications