ಶ್ರೀಲಂಕಾ ಬಿಕ್ಕಟ್ಟು: ಎಲ್ಲಾ ಮಂತ್ರಿಗಳು ರಾಜೀನಾಮೆ, ಪ್ರಧಾನಿಯಾಗಿ ಉಳಿದ ರಾಜಪಕ್ಸೆ
ಕೊಲಂಬೊ, ಏಪ್ರಿಲ್ 04: ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾದಲ್ಲಿ ಭಾನುವಾರ ತಡರಾತ್ರಿ ಪ್ರಮುಖ ಬೆಳವಣಿಗೆಯೊಂದು ಸಂಭವಿಸಿದೆ. ಶ್ರೀಲಂಕಾದ ಸಂಸತ್ತಿನ ಎಲ್ಲಾ ಸಚಿವರುಗಳು ಭಾನುವಾರ ತಡರಾತ್ರಿ ನಡೆದ ಸಭೆಯಲ್ಲಿ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ. ಆದರೆ, ಮಹಿಂದಾ ರಾಜಪಕ್ಸೆ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.
ಮಹಿಂದ ರಾಜಪಕ್ಸೆ ಅವರ ರಾಜೀನಾಮೆಯ ವರದಿಗಳನ್ನು ಪ್ರಧಾನಿ ಕಚೇರಿ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಶ್ರೀಲಂಕಾದ ಸಂಸತ್ತಿನ ಎಲ್ಲಾ ಸಚಿವರುಗಳು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಇನ್ನು ಪ್ರಧಾನ ಮಂತ್ರಿ ಕಚೇರಿಯು ಮಹಿಂದ ರಾಜಪಕ್ಸೆ ರಾಜೀನಾಮೆ ವರದಿಯನ್ನು ಸುಳ್ಳು ಎಂದಿದೆ. ಆ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಇನ್ನು ಯುವಜನ ಮತ್ತು ಕ್ರೀಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಹಿರಿಯ ಪುತ್ರ ನಮಲ್ ರಾಜಪಕ್ಸೆ ಟ್ವೀಟ್ ಮಾಡಿದ್ದಾರೆ. "ಎಲ್ಲ ಖಾತೆಗಳಿಗೆ ನನ್ನ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಅಧ್ಯಕ್ಷರಿಗೆ ತಿಳಿಸಿದ್ದೇನೆ," ಎಂದು ಹೇಳಿದ್ದಾರೆ.

ರಾಜೀನಾಮೆ ಬಗ್ಗೆ ಟ್ವೀಟ್ ಮಾಡಿದ ಶ್ರೀಲಂಕಾ ಪ್ರಧಾನಿ ಪುತ್ರ
"ಶ್ರೀಲಂಕಾದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಪ್ರಧಾನ ಮಂತ್ರಿ ಹಾಗೂ ಅಧ್ಯಕ್ಷರಿಗೆ ಸಹಾಯವಾಗಲಿದೆ ಎಂಬ ಭವರಸೆಯೊಂದಿಗೆ ನಾನು ನನ್ನ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇನೆ. ನಾನು ನನ್ನ ಮತದಾರರಿಗೆ, ನನ್ನ ಪಕ್ಷಕ್ಕೆ ಮತ್ತು ಹಂಬಂತೋಟ (SIC) ಜನರಿಗೆ ಬದ್ಧನಾಗಿರುತ್ತೇನೆ," ಎಂದು ಟ್ವೀಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ಸರ್ಕಾರದ ವಿರುದ್ಧ ತೀವ್ರವಾದ ಪ್ರತಿಭಟನೆ
ಭಾನುವಾರ ಮುಂಜಾನೆ, ವಿದ್ಯಾರ್ಥಿಗಳು ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಪೆರಾಡೆನಿಯಾ ವಿಶ್ವವಿದ್ಯಾಲಯದ ಹೊರಗೆ ಪ್ರತಿಭಟನೆ ನಡೆಸಿದರು. ಸರ್ಕಾರ ವಿಧಿಸಿರುವ ವಾರಾಂತ್ಯದ ಕರ್ಫ್ಯೂ ಅನ್ನು ಧಿಕ್ಕರಿಸುವ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಬಳಸಿದರು.
ರಾಜಧಾನಿ ಕೊಲಂಬೊದಲ್ಲಿ ವಿರೋಧ ಪಕ್ಷದ ನಾಯಕರು ನಡೆಸಿದ ಮೆರವಣಿಗೆಯಲ್ಲಿ ನೂರಾರು ಜನರು ಸೇರಿದ್ದರು. ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರ ಮನೆಯ ಬಳಿ ಪ್ರತಿಭಟನೆಗೆ ಮುಂದಾದ ಗುಂಪನ್ನು ರೈಫಲ್‌ಗಳನ್ನು ಹೊಂದಿರುವ ಪೊಲೀಸರು ಮತ್ತು ಸೈನಿಕರು ತಡೆದಿದ್ದಾರೆ.
ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ವಿರುದ್ಧದ ಪ್ರತಿಭಟನೆಯನ್ನು ಹತ್ತಿಕ್ಕಲು ಶ್ರೀಲಂಕಾ ಸರ್ಕಾರ ಶನಿವಾರ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಯೂಟ್ಯೂಬ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿದೆ. ಭಾನುವಾರ ಮಧ್ಯಾಹ್ನ ಪ್ರಧಾನಿ ಪುತ್ರ ನಮಲ್ ರಾಜಪಕ್ಸೆ ವಿರುದ್ಧವಾಗಿ ಮಾತನಾಡಿದ ನಂತರ ನಿಷೇಧವನ್ನು ಹಿಂತೆಗೆದುಕೊಳ್ಳಲಾಯಿತು.
ಶನಿವಾರ ಸಂಜೆ 6 ರಿಂದ ಪ್ರಾರಂಭವಾದ 36 ಗಂಟೆಗಳ ಕರ್ಫ್ಯೂ ಸೋಮವಾರ ಬೆಳಿಗ್ಗೆ 6 ರವರೆಗೆ ಮುಂದುವರಿಯುತ್ತದೆ. ಇನ್ನು ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಕನಿಷ್ಠ 664 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಏರುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕರೆನ್ಸಿ ಶ್ರೀಲಂಕಾದಲ್ಲಿ ಅಗತ್ಯ ಸರಕುಗಳ ಬೆಲೆಗಳನ್ನು ಗಗನಕ್ಕೇರಿಸಿದೆ. ಆರ್ಥಿಕ ಕುಸಿತದ ಸಮಯದಲ್ಲಿ, ದ್ವೀಪ ರಾಷ್ಟ್ರದ ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೆಚ್ಚಾಗಿ, ಅನೇಕರು ಬರಿಗೈಯಲ್ಲಿ ಹಿಂದಕ್ಕೆ ಬರುವಂತಾಗಿದೆ. ಒಂದೋ ಅಂಗಡಿಯಲ್ಲಿ ಸರಕು ಮುಗಿದಿದೆ, ಅಥವಾ ಅವರ ಬಳಿ ಅಷ್ಟು ಹಣವಿಲ್ಲ ಎಂಬ ಕಾರಣಕ್ಕಾಗಿ ಹಿಂದಕ್ಕೆ ಬರುವಂತಾಗುತ್ತಿದೆ.
ಒಂದು ಕಿಲೋಗ್ರಾಂ ಸಕ್ಕರೆ 240 ರೂ ಆಗಿದ್ದರೆ, ತೆಂಗಿನ ಎಣ್ಣೆ ಲೀಟರ್‌ಗೆ 850 ರೂ.ಗೆ ಭಾರೀ ಏರಿಕೆ ಕಂಡಿದೆ. ಒಂದು ಮೊಟ್ಟೆಯ ಬೆಲೆ ತಿಳಿದಿರೆ ನಿಮಗೆ ನಿಜಕ್ಕೂ ಆಶ್ಚರ್ಯವಾಗುವುದು ಖಂಡಿತ. ಶ್ರೀಲಂಕಾದಲ್ಲಿ ಒಂದು ಮೊಟ್ಟೆಯ ಬೆಲೆಯು 30 ರೂ ಆಗಿದೆ. 1 ಕೆಜಿ ಹಾಲಿನ ಪುಡಿಯ ಪ್ಯಾಕ್‌ನ ಬೆಲೆಯು 1900 ರೂಪಾಯಿ ಆಗಿದೆ.












Click it and Unblock the Notifications