ದಕ್ಷಿಣ ಕೊರಿಯಾ ಮುಳುಗಿಸಲು ಉತ್ತರ ಕೊರಿಯಾ ಸ್ಕೆಚ್?
ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳು ಇಡೀ ಜಗತ್ತಿನಲ್ಲೇ ಇರುವ ದೊಡ್ಡ ಶತ್ರುಗಳು. ಯಾಕಂದ್ರೆ ಈ 2 ದೇಶಗಳ ನಡುವೆ ಇರುವಷ್ಟು ವೈರತ್ವ ಪ್ರಪಂಚದ ಯಾವುದೇ ದೇಶಗಳ ಮಧ್ಯೆ ಇಲ್ಲ. ಅಷ್ಟು ದ್ವೇಷ ಮಾಡುವ ಈ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ಕಣ್ಣಿಟ್ಟು ಕೂತಿರುತ್ತಾರೆ. ಹೀಗೆ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಕಣ್ಣಿಟ್ಟು ಕೂತಾಗಲೇ ಬೆಚ್ಚಿಬೀಳಿಸುವ ಮಾಹಿತಿ ಸಿಕ್ಕಿದೆ.
ಅಂದಹಾಗೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಸದಾ ಒಂದೇ ಚಿಂತೆ ಕಾಡುತ್ತಿರುತ್ತೆ. ಅದು ಯಾವಾಗ, ಹೇಗೆ ಹೊಸ ಅಸ್ತ್ರ ಕಂಡುಹಿಡಿಯಬೇಕು ಅಂತಾ. ಹೀಗೆ ನೂರಾರು ಪರಮಾಣು ಕ್ಷಿಪಣಿಗಳನ್ನ ತನ್ನ ಉಗ್ರಾಣದಲ್ಲಿ ರಕ್ಷಿಸಿ ಇಟ್ಟುಕೊಂಡಿರುವ ಕಿಮ್ ಜಾಂಗ್ ಉನ್, ಇದೀಗ ಬೇರೆಯದ್ದೇ ಸ್ಕೆಚ್ ಹಾಕಿದ್ದಾನಂತೆ. ಅದು ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಸಂಶೋಧನೆಗಳನ್ನೇ ಮುಳುಗಿಸಿ, ತಾನು ಬೆಳೆಯಲು ಸ್ಕೆಚ್ ಹಾಕಿದ್ದಾನಂತೆ ಈತ. ಹಾಗಾದ್ರೆ ಕಿಮ್ ರೂಪಿಸಿರುವ ಕುತಂತ್ರ ಏನು?

ಶತ್ರು ಮುಳುಗಿಸಿ, ತಾನು ಬೆಳೆಯಲು ಸ್ಕೆಚ್!
ಅಂದಹಾಗೆ ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆ (NIS) ಈಗ ನೀಡಿರುವ ವರದಿ ಬೆಚ್ಚಿಬೀಳಿಸಿದೆ. ಅದೇನೆಂದರೆ ಈಗಾಗಲೇ ತನ್ನ ಕ್ಷಿಪಣಿ ಪರೀಕ್ಷೆ ಮೂಲಕ ಇಡೀ ಜಗತ್ತಲ್ಲಿ ಹವಾ ಇಟ್ಟಿರುವ ಕಿಮ್ ಜಾಂಗ್ ಉನ್, ಈಗ ಉತ್ತರ ಕೊರಿಯಾ ನೌಕಾಸೇನೆ ಅಭಿವೃದ್ಧಿಗೆ ಮುಂದಾಗಿದ್ದಾನೆ. ಆದರೆ ಇದಕ್ಕಾಗಿ ಕಿಮ್ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಅಡ್ಡದಾರಿ. ದಕ್ಷಿಣ ಕೊರಿಯಾ ಮುಳುಗಿಸಿ ಉ.ಕೊರಿಯಾ ಅಭಿವೃದ್ಧಿ ಮಾಡಲು ಸ್ಕೆಚ್ ಹಾಕಿದ್ದಾನಂತೆ ಕಿಮ್ ಜಾಂಗ್ ಉನ್.
ಮೇಲ್ ಮೂಲಕ ಕಿಮ್ ಆಟ!
ಹೌದು, ಈಗ ಸಿಕ್ಕಿರುವ ಮಾಹಿತಿ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಸೂಕ್ಷ್ಮ ನೌಕಾ ಅಧ್ಯಯನಗಳನ್ನು ಕದಿಯಲು ಉತ್ತರ ಕೊರಿಯಾ ಯತ್ನಿಸುತ್ತಿದೆ ಎನ್ನಲಾಗಿದೆ. ಈ ಮೂಲಕ ಉ.ಕೊರಿಯಾ ನೌಕಾಸೇನೆಗೆ ಬೇಕಿರುವ ತಂತ್ರಜ್ಞಾನ ರೂಪಿಸಲು ಕಿಮ್ ಜಾಂಗ್ ಉನ್ ಮುಂದಾಗಿದ್ದಾನೆ. ಇದಕ್ಕಾಗಿ ದಕ್ಷಿಣ ಕೊರಿಯಾದ ಹಡಗು ತಯಾರಿಕಾ ಕಂಪನಿಗಳ ಮೇಲೆ ಉತ್ತರ ಕೊರಿಯಾ ಹ್ಯಾಕರ್ಸ್ ಕಣ್ಣಿಟ್ಟಿದ್ದಾರೆ. ಮಾಹಿತಿ ಕದಿಯಲು ಉ.ಕೊರಿಯಾ ಹ್ಯಾಕರ್ಸ್ ಸುಳ್ಳು ಸಂದೇಶ ಇರುವ ಮೇಲ್ ಕಳುಹಿಸಿ ಸ್ಕೆಚ್ ಹಾಕುತ್ತಿದ್ದಾರಂತೆ.

ಹೀಗೆ ಈಗಾಗಲೇ ದಕ್ಷಿಣ ಕೊರಿಯಾ ಹಡಗು ತಯಾರಕಾ ಕಂಪನಿಗಳ ನೌಕರರು ಸಾಕಷ್ಟು ಸುಳ್ಳು ಮೇಲ್‌ಗಳನ್ನ ಪಡೆದಿದ್ದಾರೆ. ಇದರಿಂದ ಎಚ್ಚೆತ್ತಿರುವ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ, ಇಂತಹ ಮೇಲ್ ಬಂದರೆ ಅದನ್ನ ಓಪನ್ ಮಾಡಬೇಡಿ ಎಂದಿದೆ. ಏಕೆಂದರೆ ಈ ಮೇಲ್ ಓಪನ್ ಮಾಡಿದರೆ ಸಾಕು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಇರುವ ಎಲ್ಲ ಮಾಹಿತಿ ಕಳುವಾಗುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಎಚ್ಚರಿಕೆ ವಹಿಸಿ ಎಂದು ಸೂಚನೆ ನೀಡಿದೆ. ಆದರೂ ಇಷ್ಟೊತ್ತಿಗೆ ಅದೆಷ್ಟು ಮಾಹಿತಿ ಕಿಮ್ ಜಾಂಗ್ ಉನ್ ಪಾಲಾಗಿದೆಯೋ ಗೊತ್ತಿಲ್ಲ.
ಅಂದಹಾಗೆ ಕಿಮ್ ಜಾಂಗ್ ಉನ್ ಸುಮ್ಮನೆ ಕೂರುವ ಸರ್ವಾಧಿಕಾರಿ ಅಲ್ಲ. ಅಕಸ್ಮಾತ್ ಆ ವ್ಯಕ್ತಿ ಸುಮ್ಮನೆ ಕೂತಿದ್ರೆ ಆತನನ್ನ ಸರ್ವಾಧಿಕಾರಿ ಅಂತಾ ಕರೆಯಲು ಆಗುತ್ತಾ ಇರಲಿಲ್ಲ. ಏನಾದ್ರೂ ಕಿತಾಪತಿ ಮಾಡ್ತಾ, ಶತ್ರುಗಳ ವಿರುದ್ಧ ಕಾಲು ಕೆರೆದು ಜಗಳಕ್ಕೆ ನಿಲ್ಲುವುದು ಈತನ ಬ್ಯುಸಿನೆಸ್. ಹೀಗಾಗಿ ಮತ್ತೊಂದು ಖತರ್ನಾಕ್ ಪ್ಲ್ಯಾನ್ ಮಾಡಿ, ದಕ್ಷಿಣ ಕೊರಿಯಾ ಹಡಗು ಕಂಪನಿಗಳ ಬುಡಕ್ಕೆ ಬತ್ತಿ ಇಟ್ಟಿದ್ದಾನೆ. ಆದರೆ ತಕ್ಷಣ ಎಚ್ಚೆತ್ತಿರುವ ದಕ್ಷಿಣ ಕೊರಿಯಾ ಅನಾಹುತವನ್ನ ತಪ್ಪಿಸಲು ಎಚ್ಚರಿಕೆ ಸಂದೇಶ ರವಾನಿಸಿದೆ. ಹೀಗಿದ್ದರೂ ಬೇರೆ ಯಾವುದೋ ಕಳ್ಳ ಮಾರ್ಗ ಹುಡುಕಿ ಕಿಮ್ ಕಿತಾಪತಿ ಮಾಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಈಗಾಗಲೇ ಹದಗೆಟ್ಟು ಹೋಗಿರುವ ಪರಿಸ್ಥಿತಿ ಈಗಿನ ಬೆಳವಣಿಗೆಗಳ ಪರಿಣಾಮ ಇನ್ನಷ್ಟು ಹಾಳಾಗುತ್ತಿದೆ.












Click it and Unblock the Notifications