Axiom-4 Mission: ‘ಜೈ ಹಿಂದ್.. ಜೈ ಭಾರತ್...’ ಇತಿಹಾಸ ಸೃಷ್ಟಿಸಿದ ಭಾರತೀಯ ವಿಜ್ಞಾನಿ ಶುಭಾಂಶು ಶುಕ್ಲಾ!
ಭಾರತೀಯ ಬಾಹ್ಯಾಕಾಶ ಲೋಕದಲ್ಲಿ ಇಂದಿನ ದಿನ ಎಂದಿಗೂ ಮರೆಯಲು ಆಗದು, ಜಾಗತಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತೀಯ ಬಾಹ್ಯಾಕಾಶ ಲೋಕಕ್ಕೆ ನಮ್ಮ ವಿಜ್ಞಾನಿಗಳು ದೊಡ್ಡ ಮಟ್ಟದ ಕೊಡುಗೆಯನ್ನ ನೀಡುತ್ತಿದ್ದಾರೆ. ಅದೇ ರೀತಿ ಇಂದು ಭಾರತೀಯರ ಹೆಮ್ಮೆಯ ಇಸ್ರೋ ಸಂಸ್ಥೆಯ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಅಲ್ಲದೆ ಹೀಗೆ ಬಾಹ್ಯಾಕಾಶಕ್ಕೆ ಹಾರುವ ಸಮಯದಲ್ಲೂ, 'ಜೈ ಹಿಂದ್.. ಜೈ ಭಾರತ್...' ಘೋಷಣೆ ಮೊಳಗಿಸುವ ಮೂಲಕ 143.81 ಕೋಟಿ ಭಾರತೀಯರಿಗೆ ಹೆಮ್ಮೆ ತಂದಿದ್ದಾರೆ.
ಹೌದು, ಆಕ್ಸಿಯಮ್-4 ಮಿಷನ್ ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿ ಮೂಲದ ವಿಜ್ಞಾನಿ ಟಿಬೊರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ವಿಸ್ಕಿ ಸೇರಿದಂತೆ ಒಟ್ಟಾರೆ 4 ಜನರಿದ್ದ ತಂಡ ಬಾಹ್ಯಾಕಾಶಕ್ಕೆ ಹಾರಿದೆ. ಹಾಗಾದ್ರೆ ಬಾಹ್ಯಾಕಾಶಕ್ಕೆ ರಾಕೆಟ್ ಹಾರುವ ಸಮಯದಲ್ಲಿ ಕ್ಯಾಮೆರಾ ಸೆರೆ ಹಿಡಿದಿರುವ ಅದ್ಭುತ ಫೋಟೋ ಇಲ್ಲಿವೆ ಮುಂದೆ ಓದಿ.

ಎಲ್ಲಿಂದ ಉಡಾವಣೆ ಮಾಡಲಾಯಿತು?
ಆಕ್ಸಿಯಮ್-4 ಮಿಷನ್ ಫ್ಲೊರಿಡಾದಲ್ಲಿರುವ ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ. ಆಕ್ಸಿಯಮ್-4 ಮಿಷನ್ ಮಹತ್ವದ ಸಂಶೋಧನೆಗಳು ಸೇರಿದಂತೆ ಮನುಷ್ಯರು ಭವಿಷ್ಯದಲ್ಲಿ ಬಾಹ್ಯಾಶದಲ್ಲಿ ಬದುಕುವಂತೆ ಮಾಡಲು ವೈಜ್ಞಾನಿಕ ತನಿಖೆ ನಡೆಸಲಿದೆ. ಫ್ಲೊರಿಡಾದಲ್ಲಿ ಇರುವ, ನಾಸಾ ಸಂಸ್ಥೆಯ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಸ್ಥಳೀಯ ಕಾಲಮಾನ ಬೆಳಗ್ಗೆ 2.31ಕ್ಕೆ ಉಡಾವಣೆಯನ್ನ ಮಾಡಲಾಗಿದೆ.

26,000 ಕಿಲೋ ಮೀಟರ್ ಸ್ಪೀಡ್!
ಆಕ್ಸಿಯಮ್-4 ಮಿಷನ್ ಉಡಾವಣೆಗೆ ಸ್ಪೇಸ್ ಎಕ್ಸ್ ಕೂಡ ಸಾಥ್ ನೀಡಿತ್ತು, ಹೀಗೆ 4 ವಿಜ್ಞಾನಿಗಳನ್ನು ಹೊತ್ತು ಹೊರಟ ರಾಕೆಟ್ ಭೂಮಿಯಿಂದ ಸುಮಾರು 200 ಕಿಲೋ ಮೀಟರ್ ಎತ್ತರದಲ್ಲಿ ಬರೋಬ್ಬರಿ 26,000 ಕಿಲೋ ಮೀಟರ್ ವೇಗದಲ್ಲಿ ಮೇಲಕ್ಕೆ ನುಗ್ಗುತ್ತಿರುವ ದೃಶ್ಯವು ಸಂಚಲನ ಸೃಷ್ಟಿಸುವಂತೆ ಇತ್ತು. ಭೂಮಿಯ ಗುರತ್ವ ಬಲದಿಂದ ತಪ್ಪಿಸಿಕೊಂಡು ಹೊರ ಹೋಗಲು ಇಷ್ಟು ವೇಗ ಅಗತ್ಯವಿರುತ್ತದೆ.

10 ನಿಮಿಷದಲ್ಲಿ ಬಾಹ್ಯಾಕಾಶಕ್ಕೆ ಎಂಟ್ರಿ!
ಮನುಷ್ಯರು ಹಾಗೂ ಭೂಮಿ ಮೇಲೆ ಇರುವ ವಸ್ತುಗಳೆಲ್ಲಾ ಭೂಮಿ ಗುರತ್ವದ ಬಲದಲ್ಲಿ ಬಂಧಿತವಾಗಿದ್ದು, ಯಾವುದೇ ಕಾರಣಕ್ಕೂ ಸುಲಭವಾಗಿ ನಾವು ಭೂಮಿಯಿಂದ ಹೊರಗೆ ಹೋಗುವುದಕ್ಕೆ ಆಗಲಾರದು. ಈ ಕಾರಣಕ್ಕೆ ಅತಿಹೆಚ್ಚು ವೇಗದಲ್ಲಿ ರಾಕೆಟ್ ಚಲಾಯಿಸಿ, ಬಾಹ್ಯಾಕಾಶ ನೌಕೆಯನ್ನು ನಭಕ್ಕೆ ಕಳುಹಿಸುತ್ತಾರೆ ವಿಜ್ಞಾನಿಗಳು. ಇಂದು ಉಡಾವಣೆಯಾದ ರಾಕೆಟ್ ಕೂಡ ಬರೋಬ್ಬರಿ 26,000 ಕಿಲೋ ಮೀಟರ್ ವೇಗದಲ್ಲಿ ಮೇಲಕ್ಕೆ ನುಗ್ಗಿ, ಕೇವಲ 10 ನಿಮಿಷದಲ್ಲಿ ಬಾಹ್ಯಾಕಾಶಕ್ಕೆ ಎಂಟ್ರಿ ಕೊಟ್ಟಿತ್ತು!

'ಜೈ ಹಿಂದ್... ಜೈ ಭಾರತ್...'
ಶುಭಾಂಶು ಶುಕ್ಲಾ ಅವರು ಇಂದು ಮಾಡಿರುವ ಸಾಧನೆ 40 ವರ್ಷಗಳ ಇತಿಹಾಸ ಅಳಿಸಿ ಹಾಕಿದೆ. ಹೇಗೆ ಅಂದ್ರೆ, 1984ರ ಸಮಯದಲ್ಲಿ ರಾಕೇಶ್ ಶರ್ಮಾ ಅವರು ಸೋವಿಯತ್ ರಷ್ಯಾ ಯೋಜನೆಯಲ್ಲಿ ಭಾಗಿಯಾಗಿ ಬಾಹ್ಯಾಕಾಶಕ್ಕೆ ಹಾರಿದ್ದರು. ಹೀಗೆ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ಹಾರಿ, 4 ದಶಕಗಳ ನಂತರ ಅಂದ್ರೆ 40 ವರ್ಷಗಳ ನಂತರ ಭಾರತೀಯ ವಿಜ್ಞಾನಿ ಒಬ್ಬರು ಮತ್ತೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದೇ ಸಮಯದಲ್ಲಿ, ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಭೂಮಿ ಬಿಟ್ಟು ಹೊರ ಹೋಗುವಾಗಲೂ 'ಜೈ ಹಿಂದ್... ಜೈ ಭಾರತ್...' ಎಂದಿದ್ದಾರೆ ಶುಭಾಂಶು ಶುಕ್ಲಾ ಅವರು. ಈ ಮೂಲಕ ಭಾರತೀಯರಿಗೆ ಇದು ಹೆಮ್ಮೆಯ ಕ್ಷಣವಾಗಿದೆ.












Click it and Unblock the Notifications