Scholark: ಫೀಸ್‌ಗಳಿಂದ ಬೇಸತ್ತು ಫ್ರೀ ಕಾಲೇಜು ಪ್ರಿಪರೇಷನ್ ವೇದಿಕೆ ನಿರ್ಮಿಸಿದ 16ರ ವಿದ್ಯಾರ್ಥಿ! ಈಗ 10 ಸಾವಿರ ಬಳಕೆದಾರರು!
ಕಾಲೇಜಿಗೆ ಪ್ರವೇಶ ಪಡೆಯುವುದು ಎಂದರೆ ಈಗ ಹಲವಾರು ಪ್ರೊಸೆಸ್, ತರಲೆ ತಾಪತ್ರಯಗಳು. ಅರ್ಜಿ ಸಲ್ಲಿಸುವುದು ಸಾಕಾಗದು. ಜಿಪಿಎ, ಪ್ರವೇಶ ಮಾನದಂಡಗಳು, ಎಸ್‌ಎಟಿ, ಎಪಿ ಪರೀಕ್ಷೆಗಳು, ಕಾಲೇಜುಗಳ ಮಾಹಿತಿ, ಅಭ್ಯಾಸ ಪ್ರಶ್ನೆಗಳು ಸೇರಿದಂತೆ ವಿದ್ಯಾರ್ಥಿಗಳು ಹಲವು ವಿಷಯಗಳನ್ನು ಹುಡುಕಬೇಕಾಗುತ್ತದೆ. ಈ ಮಾಹಿತಿಗಾಗಿ ಬೇರೆ ಬೇರೆ ವೆಬ್‌ಸೈಟ್‌ಗಳನ್ನು ಹುಡುಕುವುದು, ಮಾಹಿತಿ ಅರ್ಥಮಾಡಿಕೊಳ್ಳುವುದು ಮತ್ತು ಸೂಕ್ತ ಸಂಪನ್ಮೂಲಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಅದರಲ್ಲೂ ಹಲವು ಆನ್‌ಲೈನ್ ಸಂಪನ್ಮೂಲಗಳು ಶುಲ್ಕ ವಿಧಿಸುವುದು ವಿದ್ಯಾರ್ಥಿಗಳಿಗೆ ಮತ್ತೊಂದು ಸಮಸ್ಯೆ. ಅಮೆರಿಕದ ವರ್ಜೀನಿಯಾದ 16 ವರ್ಷದ ವಿದ್ಯಾರ್ಥಿ ಶ್ರೀಯನ್ ಅವಧಾನೂಲ ಅವರಿಗೂ ಇದೇ ಅನುಭವ. ಆದರೆ ಸಮಸ್ಯೆಯನ್ನು ದೂರುತ್ತಾ ಕುಳಿತುಕೊಳ್ಳುವ ಬದಲು, ಅದಕ್ಕೊಂದು ಪರಿಹಾರವನ್ನು ತಾವೇ ನಿರ್ಮಿಸಲು ಅವರು ಮುಂದಾದರು.
ಅದರ ಫಲವೇ 'Scholark' ಎಂಬ ಉಚಿತ ಡಿಜಿಟಲ್ ವೇದಿಕೆ. 2025ರಲ್ಲಿ ಆರಂಭವಾದ ಈ ವೇದಿಕೆಯನ್ನು ಈಗಾಗಲೇ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಳಸಿದ್ದಾರೆ ಎಂದು ಶ್ರೀಯನ್ ಹೇಳಿದ್ದಾರೆ.
ಕಂಪ್ಯೂಟರ್‌ನಲ್ಲಿ ತೆರೆದಿದ್ದ ಹಲವು ಟ್ಯಾಬ್‌ಗಳು
ವರ್ಜೀನಿಯಾದ ಹೆನ್ರಿಕೋ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಶ್ರೀಯನ್ ಅವರಿಗೆ ಶಾಲೆಯ ವ್ಯಾಸಂಗದ ಜೊತೆಗೆ ಹಲವು ಚಟುವಟಿಕೆಗಳಲ್ಲೂ ಭಾಗವಹಿಸುವ ಜವಾಬ್ದಾರಿ ಇತ್ತು. ಐಬಿ ಪಠ್ಯಕ್ರಮ, ವಾರ್ಸಿಟಿ ಸಾಕರ್ ಮತ್ತು ಸ್ಪರ್ಧಾತ್ಮಕ ಪಿಕಲ್‌ಬಾಲ್ ಜೊತೆಗೆ ಅವರು ಕಾಲೇಜು (college) ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದರು. ಕಾಲೇಜುಗಳ ವೆಬ್‌ಸೈಟ್, ಜಿಪಿಎ ಲೆಕ್ಕಾಚಾರ, ಎಸ್‌ಎಟಿ ಸಂಪನ್ಮೂಲಗಳು ಮತ್ತು ಪರೀಕ್ಷಾ ತಯಾರಿ ಸೇರಿದಂತೆ ಹಲವು ವಿಷಯಗಳಿಗೆ ಅವರು ಬೇರೆ ಬೇರೆ ವೆಬ್‌ಸೈಟ್‌ಗಳನ್ನು ಅವಲಂಬಿಸಬೇಕಾಗಿತ್ತು.
"ನನ್ನ ಕಂಪ್ಯೂಟರ್‌ನಲ್ಲಿ ಜಿಪಿಎ ಕ್ಯಾಲ್ಕುಲೇಟರ್, ಕಾಲೇಜು ವೆಬ್‌ಸೈಟ್‌ಗಳು, ಎಸ್‌ಎಟಿ ಸಂಪನ್ಮೂಲಗಳು ಹೀಗೆ ಸಾಕಷ್ಟು ಟ್ಯಾಬ್‌ಗಳು ತೆರೆದಿರುತ್ತಿದ್ದವು. ಇದೆಲ್ಲವೂ ತುಂಬಾ ಗೊಂದಲಮಯವಾಗಿತ್ತು" ಎಂದು ಶ್ರೀಯನ್ ಹೇಳುತ್ತಾರೆ. ಮಾಹಿತಿ ಇಲ್ಲದ ಸಮಸ್ಯೆ ಇರಲಿಲ್ಲ. ಮಾಹಿತಿ ಇದ್ದರೂ ಅದು ವಿವಿಧ ಕಡೆ ಚದುರಿಕೊಂಡಿತ್ತು. ಕೆಲವು ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿತ್ತು. ಇನ್ನು ಕೆಲವು ಸಂಪನ್ಮೂಲಗಳು ಹಣ ಪಾವತಿಸಿದ ನಂತರವಷ್ಟೇ ಲಭ್ಯವಾಗುತ್ತಿದ್ದವು.
ಹೀಗಾಗಿ ತಮ್ಮ ಮೊದಲ ವರ್ಷದ ಹೈಸ್ಕೂಲ್‌ನಲ್ಲಿದ್ದಾಗಲೇ, "ಇದಕ್ಕೆ ನಾನೇ ಒಂದು ಸರಳ ವೇದಿಕೆ ನಿರ್ಮಿಸಿದರೆ ಹೇಗೆ?" ಎಂದು ಅವರು ಯೋಚಿಸಿದರು.
ಜಿಪಿಎ ಕ್ಯಾಲ್ಕುಲೇಟರ್‌ನಿಂದ ಆರಂಭ
ಮೊದಲಿಗೆ ಶ್ರೀಯನ್ ಸರಳವಾದ ಜಿಪಿಎ ಕ್ಯಾಲ್ಕುಲೇಟರ್ ಮತ್ತು ಕಾಲೇಜು ಪ್ರವೇಶದ ಸಾಧ್ಯತೆಯನ್ನು ಅಂದಾಜು ಮಾಡುವ ಸಾಧನವನ್ನು ನಿರ್ಮಿಸಿದರು. ನಂತರ ಅದಕ್ಕೆ ಎಪಿ ಪರೀಕ್ಷೆಯ ತಯಾರಿ ಮತ್ತು ಕಾಲೇಜು ಪ್ರವೇಶಕ್ಕೆ ಸಂಬಂಧಿಸಿದ ವಿವಿಧ ಸಂಪನ್ಮೂಲಗಳನ್ನು ಸೇರಿಸುತ್ತಾ ಹೋದರು. ಸುಮಾರು ಎರಡೂವರೆ ವರ್ಷದಿಂದ ಮೂರು ವರ್ಷಗಳ ಅವಧಿಯಲ್ಲಿ ಅವರು ವೇದಿಕೆಯನ್ನು ನಿರಂತರವಾಗಿ ಅಭಿವೃದ್ಧಿಪಡಿಸಿದರು. ತಮಗೆ ಎದುರಾದ ಸಮಸ್ಯೆಗಳಿಗೆ ಪರಿಹಾರ (solution) ಕಂಡುಕೊಳ್ಳುವಾಗ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತಾ ಹೋದರು.
"ಕಾಲೇಜುಗಳ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಆ ಮಾಹಿತಿ ಒಂದೇ ಕಡೆ ಇರಲಿಲ್ಲ. ನಾನು ಬಳಸಬಹುದಾದ ಒಂದು ವೇದಿಕೆಯನ್ನು ಎಲ್ಲರಿಗೂ ಬಳಸುವಂತೆ ಏಕೆ ನಿರ್ಮಿಸಬಾರದು ಎಂದು ಯೋಚಿಸಿದೆ" ಎಂದು ಅವರು ನೆನಪಿಸಿಕೊಂಡಿದ್ದಾರೆ.
ಕಾಲೇಜುಗಳ ವೆಬ್‌ಸೈಟ್‌ಗಳಲ್ಲಿ ಕೆಲವೊಮ್ಮೆ ಪ್ರವೇಶ ಪ್ರಮಾಣ, ಅಗತ್ಯಗಳು ಮತ್ತು ಅಂಕಿಅಂಶಗಳ ದೊಡ್ಡ ಪ್ರಮಾಣದ ಮಾಹಿತಿಯನ್ನು ನೀಡಲಾಗುತ್ತದೆ. ಆದರೆ ವಿದ್ಯಾರ್ಥಿಗೆ ಬೇಕಾದ ನಿರ್ದಿಷ್ಟ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಾಗಬಹುದು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಯನ್ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಜೋಡಿಸಲು ಪ್ರಯತ್ನಿಸಿದರು.
50 ಪ್ರಶ್ನೆಗಳ ಬಳಿಕ ಎದುರಾದ 49.99 ಡಾಲರ್ ಶುಲ್ಕ
ಶ್ರೀಯನ್‌ಗೆ ಉಚಿತ ವೇದಿಕೆ ನಿರ್ಮಿಸುವ ಆಲೋಚನೆ ಮತ್ತಷ್ಟು ಬಲವಾಗಲು ಕಾರಣವಾದದ್ದು ಅವರ ಒಂದು ಅನುಭವ. ಎಪಿ ಕಂಪ್ಯೂಟರ್ ಸೈನ್ಸ್ ಪ್ರಿನ್ಸಿಪಲ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಅವರು ಆನ್‌ಲೈನ್‌ನಲ್ಲಿದ್ದ ಒಂದು ಸಂಪನ್ಮೂಲವನ್ನು ಬಳಸಿದ್ದರು. ಸುಮಾರು 50 ಅಭ್ಯಾಸ ಪ್ರಶ್ನೆಗಳನ್ನು ಪೂರ್ಣಗೊಳಿಸಿದ ಬಳಿಕ, ತಮ್ಮ ಫಲಿತಾಂಶವನ್ನು ನೋಡಲು 49.99 ಡಾಲರ್‌ಗಳ ಚಂದಾದಾರಿಕೆ ಪಡೆಯಬೇಕು ಎಂಬ ಸಂದೇಶ ಅವರಿಗೆ ಎದುರಾಯಿತು.
ಇದು ಅವರನ್ನು ತುಂಬಾ ನಿರಾಶೆಗೊಳಿಸಿತು. ಆ ಅನುಭವ ಒಂದೇ ವೆಬ್‌ಸೈಟ್‌ಗೆ ಸೀಮಿತವಾಗಿರಲಿಲ್ಲ. ಹೀಗಾಗಿ ತಾವು ನಿರ್ಮಿಸುತ್ತಿರುವ Scholark ಅನ್ನು ಉಚಿತವಾಗಿಯೇ ಇರಿಸಿಕೊಳ್ಳಲು ನಿರ್ಧರಿಸಿದರು.
Scholark ನಿರ್ಮಿಸಲು ಶ್ರೀಯನ್‌ಗೆ ಆರಂಭದಲ್ಲಿ ತಾಂತ್ರಿಕ ಜ್ಞಾನ ಸೀಮಿತವಾಗಿತ್ತು. ಆನ್‌ಲೈನ್ ಕಾರ್ಯಕ್ರಮಗಳ ಮೂಲಕ ಅಗತ್ಯ ಕೌಶಲ್ಯಗಳನ್ನು ಕಲಿತ ಅವರು, ಸಾಫ್ಟ್‌ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ಮಾಡುವ ತಮ್ಮ ತಂದೆಯಿಂದಲೂ ಮಾರ್ಗದರ್ಶನ ಪಡೆದರು. ವೆಬ್‌ಸೈಟ್ ನಿರ್ಮಾಣಕ್ಕೆ HTML, CSS ಮತ್ತು ಮುಖ್ಯವಾಗಿ JavaScript ಬಳಸಿದರು.
ಯೋಜನೆ ದೊಡ್ಡದಾಗುತ್ತಿದ್ದಂತೆ ಸಾವಿರಾರು ಸಾಲುಗಳ ಕೋಡ್‌ನಲ್ಲಿ ಕಂಡುಬರುವ ದೋಷಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯ ಸಹಾಯವನ್ನೂ ಬಳಸಲು ಆರಂಭಿಸಿದರು. ಎಪಿ ಪರೀಕ್ಷೆಯ ಅಭ್ಯಾಸ ಪ್ರಶ್ನೆಗಳನ್ನು ಸಿದ್ಧಪಡಿಸುವುದಕ್ಕೂ ಅವರು ಸ್ವತಃ ಸಾಕಷ್ಟು ಪ್ರಯೋಗ ನಡೆಸಿದರು. ಪರೀಕ್ಷಾ ಮಂಡಳಿ ಪ್ರಶ್ನೆಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅನೇಕ ರಾತ್ರಿ ನಿದ್ದೆಯಿಲ್ಲದೆ ಕೆಲಸ ಮಾಡಿದ್ದಾಗಿ ಅವರು ಹೇಳಿದ್ದಾರೆ.
ಸುಮಾರು 50 ಪ್ರಶ್ನೆಗಳನ್ನು ಸ್ವತಃ ರಚಿಸಿ, ಅವುಗಳ ಮಾದರಿಯನ್ನು ಆಧರಿಸಿ ಹೊಸ ಪ್ರಶ್ನೆಗಳನ್ನು ರಚಿಸಲು ತಮ್ಮ ಎಐ ವ್ಯವಸ್ಥೆಯನ್ನು ತರಬೇತುಗೊಳಿಸಿದರು. ಇದರಿಂದ ಪ್ರಶ್ನೆಗಳ ಗುಣಮಟ್ಟ ಮತ್ತಷ್ಟು ಸುಧಾರಿಸಿತು. ವಿಶೇಷವೆಂದರೆ, ತಾವು ನಿರ್ಮಿಸಿದ ಆರಂಭಿಕ ಆವೃತ್ತಿಯನ್ನೇ ತಮ್ಮ ಎಪಿ ಕಂಪ್ಯೂಟರ್ ಸೈನ್ಸ್ ಪ್ರಿನ್ಸಿಪಲ್ಸ್ ಪರೀಕ್ಷೆಯ ತಯಾರಿಗೂ ಬಳಸಿಕೊಂಡರು. ಆ ಪರೀಕ್ಷೆಯಲ್ಲಿ ಐದು ಅಂಕಗಳಲ್ಲಿ ನಾಲ್ಕು ಅಂಕಗಳನ್ನು ಪಡೆದಿದ್ದಾಗಿ ಶ್ರೀಯನ್ ಹೇಳಿದ್ದಾರೆ.
ಕಾಲೇಜು ಪ್ರವೇಶದ ಅಂದಾಜು ಕೂಡ
ನಂತರ Scholarkನಲ್ಲಿ ಕಾಲೇಜು ಯೋಜನೆಗೆ ಸಂಬಂಧಿಸಿದ ಇನ್ನಷ್ಟು ಸಂಪನ್ಮೂಲಗಳನ್ನು ಸೇರಿಸಲಾಯಿತು. ವಿದ್ಯಾರ್ಥಿಗಳು ನೀಡುವ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಿರುವ ಪ್ರವೇಶ ಮಾಹಿತಿಯೊಂದಿಗೆ ಹೋಲಿಸಿ ಕಾಲೇಜು ಪ್ರವೇಶದ ಅಂದಾಜು ನೀಡುವ ವೈಶಿಷ್ಟ್ಯವೂ ಸೇರ್ಪಡೆಯಾಯಿತು.
ಈ ವೈಶಿಷ್ಟ್ಯಕ್ಕೂ ಶ್ರೀಯನ್ ಅವರ ವೈಯಕ್ತಿಕ ಅನುಭವವೇ ಕಾರಣ. ವಿವಿಧ ಕಾಲೇಜು ಪ್ರವೇಶ ವೆಬ್‌ಸೈಟ್‌ಗಳು ಒಂದೇ ವಿದ್ಯಾರ್ಥಿಗೆ ಬೇರೆ ಬೇರೆ ರೀತಿಯ ಅಂದಾಜುಗಳನ್ನು ನೀಡುವುದನ್ನು ಅವರು ಗಮನಿಸಿದ್ದರು. ಆ ಅಂದಾಜುಗಳು ಯಾವ ಮಾಹಿತಿಯ ಆಧಾರದ ಮೇಲೆ ಬರುತ್ತವೆ ಎಂಬುದು ಸ್ಪಷ್ಟವಾಗಿರಲಿಲ್ಲ.
ಆದ್ದರಿಂದ Scholarkನಲ್ಲಿ ಅಂದಾಜಿನ ಹಿಂದೆ ಇರುವ ಮಾಹಿತಿಯನ್ನು ಬಳಕೆದಾರರಿಗೆ ತೋರಿಸಲು ಅವರು ಪ್ರಯತ್ನಿಸಿದ್ದಾರೆ. ಆದರೆ ಈ ಫಲಿತಾಂಶವನ್ನು ಅಂತಿಮ ಅಥವಾ ಶೇ.100ರಷ್ಟು ನಿಖರ ಎಂದು ಪರಿಗಣಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಇದು ಶೇ.100ರಷ್ಟು ನಿಖರ ಎಂದು ನಾನು ಹೇಳುವುದಿಲ್ಲ. ಯಾವುದೂ ಶೇ.100ರಷ್ಟು ನಿಖರವಾಗಿರುವುದಿಲ್ಲ. ಸುಧಾರಣೆಗೆ ಯಾವಾಗಲೂ ಅವಕಾಶ ಇರುತ್ತದೆ" ಎನ್ನುತ್ತಾರೆ.
ಸ್ನೇಹಿತರಿಂದ ಆರಂಭವಾಗಿ 10 ಸಾವಿರ ಬಳಕೆದಾರರ ತನಕ
ಆರಂಭದಲ್ಲಿ ಶ್ರೀಯನ್ Scholark ಅನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು. ಏನು ಚೆನ್ನಾಗಿದೆ, ಏನು ಸರಿಪಡಿಸಬೇಕು ಎಂಬ ಬಗ್ಗೆ ಅವರು ಪ್ರಾಮಾಣಿಕ ಅಭಿಪ್ರಾಯ ನೀಡುವಂತೆ ಕೇಳಿಕೊಂಡರು. ಆ ಪ್ರತಿಕ್ರಿಯೆಗಳ ಆಧಾರದ ಮೇಲೆ ವೇದಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು. ಆದರೆ ಕೆಲವೇ ದಿನಗಳಲ್ಲಿ ಅವರಿಗೆ ಪರಿಚಯವಿಲ್ಲದ ವಿದ್ಯಾರ್ಥಿಗಳೂ Scholark ಬಳಸಲು ಆರಂಭಿಸಿದರು.
2025ರಲ್ಲಿ ವೇದಿಕೆ ಆರಂಭವಾದ ಬಳಿಕ 10 ಸಾವಿರಕ್ಕೂ ಹೆಚ್ಚು ಬಳಕೆದಾರರು ಅದನ್ನು ಬಳಸಿದ್ದಾರೆ. ಎಪಿ ಪರೀಕ್ಷೆಗಳ ಸಮಯದಲ್ಲಿ ಉಚಿತ ಅಧ್ಯಯನ ಸಂಪನ್ಮೂಲಗಳನ್ನು ಹುಡುಕುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣ ಬಳಕೆದಾರರ ಪ್ರಮಾಣವೂ ಏರಿಕೆಯಾಯಿತು. ತಮ್ಮ ವೈಯಕ್ತಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆರಂಭಿಸಿದ ಯೋಜನೆ ಇಷ್ಟೊಂದು ವಿದ್ಯಾರ್ಥಿಗಳನ್ನು ತಲುಪುತ್ತದೆ ಎಂದು ತಾವು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಯೇ ನಿರ್ಮಿಸಿದ ವೇದಿಕೆ
Scholarkನ ವಿಶೇಷತೆ ಹಲವು. ಮೊದಲನೆಯದು ಅದರ ಉಚಿತ ಬಳಕೆ. ಎರಡನೆಯದು ಅದನ್ನು ನಿರ್ಮಿಸಿದ ವ್ಯಕ್ತಿಯೇ ಇನ್ನೂ ವಿದ್ಯಾರ್ಥಿಯಾಗಿರುವುದು. ವಿದ್ಯಾರ್ಥಿಗಳಿಗೆ ಯಾವ ಮಾಹಿತಿ ಬೇಕು, ಅದನ್ನು ಹೇಗೆ ಸುಲಭವಾಗಿ ತೋರಿಸಬೇಕು ಮತ್ತು ಯಾವ ರೀತಿಯ ವಿನ್ಯಾಸ ಅವರಿಗೆ ಅನುಕೂಲವಾಗುತ್ತದೆ ಎಂಬುದನ್ನು ತಾನು ವಿದ್ಯಾರ್ಥಿಯಾಗಿರುವುದರಿಂದಲೇ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಎಂದು ಶ್ರೀಯನ್ ಹೇಳಿದ್ದಾರೆ. "ನಾನೂ ವಿದ್ಯಾರ್ಥಿಯೇ. ವಿದ್ಯಾರ್ಥಿಗೆ ಏನು ನೋಡಬೇಕು ಎಂಬುದು ನನಗೆ ಗೊತ್ತು" ಎಂಬುದು ಅವರ ಮಾತು.


Click it and Unblock the Notifications
