ಪ್ರವಾಸ ಹೊರಟಿರುವ ಸೌದಿ ರಾಜನ ಲಗೇಜಿನ ತೂಕ 506 ಟನ್ !
ದುಬಾರಿ.... ಕ್ಷಮಿಸಿ.... ಐಶಾರಾಮಿ ಪ್ರವಾಸಕ್ಕೆ ಹೆಸರವಾಸಿಯಾದ ಸೌದಿ ಅರೇಬಿಯಾದ ರಾಜರು ಹಾಗೂ ರಾಜಮನೆತನಗಳ ವ್ಯಕ್ತಿಗಳು ಆಗಾಗ ಇಂಥ ವಿಶೇಷ ಪ್ರವಾಸಗಳ ಮೂಲಕ ಜನಮನ ಸೆಳೆಯುವುದು ಸಾಮಾನ್ಯ.
ರಿಯಾದ್, ಮಾರ್ಚ್ 1: ಇದೇ ವಾರಾಂತ್ಯಕ್ಕೆ ಸೌದಿ ಅರೇಬಿಯಾದ ರಾಜ 'ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್ ಸೌದ್' ಮಲೇಷ್ಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಪ್ರವಾಸಕ್ಕಾಗಿ ಅವರು ತಮ್ಮೊಂದಿಗೆ ಕೊಂಡೊಯ್ಯುತ್ತಿರುವ ಲಗೇಜಿನ ಭಾರ ಎಷ್ಟು ಗೊತ್ತೆ? ಬರೋಬ್ಬರಿ 506 ಟನ್!! ಕಳೆದ 48 ವರ್ಷಗಳಲ್ಲಿ ಸೌದಿ ರಾಜನೊಬ್ಬ ಮಲೇಷ್ಯಾಕ್ಕೆ ಪ್ರವಾಸ ಹೋಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಹೇಳಿ ಕೇಳಿ ಮಹಾರಾಜರ ಪ್ರವಾಸ. ಹಾಗೆಂದ ಮೇಲೆ ಭಾರೀ ಲಗೇಜು ಇರಲೇಬೇಕಲ್ಲ ಅನ್ನುವವರಿಗೂ ಇದು ಹುಬ್ಬೇರುವಂತೆ ಮಾಡಿದ್ದು ಸುಳ್ಳಲ್ಲ. ಇಷ್ಟು ಭಾರದ ಲಗೇಜಿನಲ್ಲಿ ಏನೇನಿದೆ ಎಂಬ ಕುತೂಹಲಗಳು ಏಳುವುದು ಸಹಜ.[80 ಗಿಡುಗಗಳ ಜೊತೆ ವಿಮಾನದಲ್ಲಿ ರಾಜಕುಮಾರನ ಪ್ರಯಾಣ: ಹೀಗೂ ಉಂಟೇ! ]
ಅದರಲ್ಲೂ ಕೇವಲ 9 ದಿನಗಳ ಪ್ರವಾಸಕ್ಕೆ ಇಷ್ಟೆಲ್ಲಾ ತೂಕದ ಲಗೇಜು ಬೇಕೇ ಎಂಬ ಪ್ರಶ್ನೆಯೂ ಏಳಬಹುದು. ಇದಕ್ಕೆಲ್ಲಾ ಖುದ್ದು ಸೌದಿ ಅರೇಬಿಯಾದ ರಾಜಮನೆತನದ ವ್ಯವಸ್ಥಾಪಕ ಸಿಬ್ಬಂದಿಯೇ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ. ಅದರ ವಿವರ ಇಲ್ಲಿದೆ.

ಚಿನ್ನದ ಆಭರಣಗಳು
ದುಬಾರಿ ಬೆಲೆ ಬಾಳುವ, ಚಿನ್ನದ ದಾರ ಅಥವಾ ಲೇಪನದಿಂದ ಕೂಡಿದ ತರಹೇವಾರಿ ಬಟ್ಟೆಗಳು, ಚಿನ್ನದ ಉಂಗುರ ಹಾಗೂ ವಿವಿಧ ಆಭರಣಗಳು, ಅವರ ದೈನಂದಿನ ಉಪಯೋಗಕ್ಕಾಗಿ ವಿಶೇಷ ಯಂತ್ರೋಪಕರಣಗಳು ಇವೆ. ಮಲೇಷ್ಯಾ ಗಣ್ಯರನ್ನು ಭೇಟಿಯಾದಾಗ ನೀಡುವ ಉಡುಗೊರೆಗಳ ಸಂಗ್ರಹವೂ ಇದೆ. ಆದರೆ, ಇಷ್ಟಕ್ಕೇ 500 ಟನ್ ಆಗುತ್ತಾ ಎಂಬ ಪ್ರಶ್ನೆಯೂ ಏಳಬಹುದಲ್ಲವೇ? ಮುಂದಿದೆ ನೋಡಿ ಉತ್ತರ.

ಅತಿ ಉದ್ದನೆಯ ಕಾರುಗಳೂ ಉಂಟು
ಎರಡು ಎಲಿವೇಟರ್ ಗಳನ್ನೂ ಜೊತೆಗೆ ಕೊಂಡೊಯ್ಯಲಾಗುತ್ತಿದೆ. ಇವುಗಳೊಂದಿಗೆ, ಮರ್ಸಿಡಿಸ್ ಬೆಂಜ್ ಎಸ್ 600 ಮಾದರಿಯ ಲೈಮೋಸಿನ್ಸ್ ಕಾರುಗಳನ್ನೂ ಲಗೇಜು (ಕಾರ್ಗೋ) ವಿವರಣೆಯಲ್ಲಿ ಸೇರಿಸಲಾಗಿದೆ. ರಾಜನ ಈ 506 ಟನ್ ನಲ್ಲಿ ಸಿಂಹ ಪಾಲು ಈ ಎಲಿವೇಟರ್ ಹಾಗೂ ಲೈಮೋಸಿನ್ಸ್ ಕಾರುಗಳದ್ದೇ ಆಗಿದೆ.

ಇಪ್ಪತ್ತೈದು ರಾಜಕುಮಾರರು
ಮಲೇಷ್ಯಾ ಪ್ರವಾಸದಲ್ಲಿ ಸೌದಿ ಅರೇಬಿಯಾದ ರಾಜನೊಂದಿಗೆ, ಅವರ ಸಂಪುಟದ 10 ಸಚಿವರು, 1,500 ಸಿಬ್ಬಂದಿ, 25 ರಾಜಕುಮಾರರು ಹಾಗೂ 100 ಭದ್ರತಾ ಸಿಬ್ಬಂದಿ ಇರಲಿದ್ದಾರೆ. ಇವರೆಲ್ಲರ ಲಗೇಜುಗಳು ಹಾಗೂ ಭದ್ರತಾ ಸಿಬ್ಬಂದಿಗೆ ಬೇಕಾದ ಮದ್ದು, ಗುಂಡು ಇತರ ಸರಂಜಾಮುಗಳೂ ಜತೆಗೆ ಸಾಗಲಿವೆ. ಇದೂ ಸಹಾ ಕಾರ್ಗೋ ಪಟ್ಟಿಯಲ್ಲಿ ಸೇರಿಕೊಂಡಿವೆ.

ಹೋಟೆಲ್ ಬುಕ್ ಮಾಡಿಕೊಂಡಿದ್ದ ರಾಜ
ಈ ಹಿಂದೆಯೂ ಇಂಥ ದುಬಾರಿ ಪ್ರವಾಸ ಕೈಗೊಳ್ಳುವ ಮೂಲಕ ಸೌದಿ ರಾಜ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. 2015ರಲ್ಲಿ ವಾಷಿಂಗ್ಟನ್ ಗೆ ಭೇಟಿ ನೀಡಿದ್ದಾಗ, ಜಾರ್ಜ್ ಟೌನ್ ನಲ್ಲಿ ಉಳಿದುಕೊಂಡಿದ್ದರು. ಆಗ, ಅಲ್ಲಿನ ಪ್ರತಿಷ್ಠಿತ ಹೋಟೆಲ್ ಆದ ಫೋರ್ ಸೀಸನ್ಸ್ ಹೋಟೆಲ್ ನ ಎಲ್ಲಾ 222 ಕೊಠಡಿಗಳನ್ನೂ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಬುಕ್ ಮಾಡಿದ್ದರು ಅವರು.

ಮೂರು ದಿನಗಳ ಕಾಲ ವಾಣಿಜ್ಯ ಮಳಿಗೆ ಮುಚ್ಚಿದ್ದರು
2015ರಲ್ಲೇ ಫ್ರಾನ್ಸ್ ನ ಫ್ರೆಂಚ್ ರೈವೇರಿಯಾ ಬೀಚ್ ಗೆ ಈ ರಾಜ ಭೇಟಿ ನೀಡಿದ್ದಾಗ, ಅಲ್ಲೂ ಪ್ರತಿಷ್ಠಿತ ಹೋಟೇಲುಗಳನ್ನು ಬುಕ್ ಮಾಡಿದ್ದ ಇವರು, ಮೂರು ದಿನಗಳ ಕಾಲ ಫ್ರಾನ್ಸ್ ರೈವೇರಿಯಾದ ಎಲ್ಲಾ ವಾಣಿಜ್ಯ ಮಳಿಗೆಗಳನ್ನೂ ಭದ್ರತೆಯ ಕಾರಣಗಳಿಗಾಗಿ ಮೂರು ದಿನಗಳ ಕಾಲ ಮುಚ್ಚುವಂತೆ ಆದೇಶಿಸಬೇಕೆಂದು ಫ್ರಾನ್ಸ್ ಸರ್ಕಾರಕ್ಕೆ ಮನವಿ ಮಾಡಿತ್ತು. ಭದ್ರತಾ ಕಾರಣಗಳನ್ನು ಮುಂದಿಟ್ಟಿದ್ದರಿಂದ ಆ ಊರಿನ ಎಲ್ಲಾ ವಾಣಿಜ್ಯ ಮಳಿಗೆಗಳನ್ನೂ ಮುಚ್ಚಿ, ಜನರ ಸಂಚಾರವನ್ನು ಆದಷ್ಟು ಕಡಿಮೆ ಮಾಡುವಂಥ ಕ್ರಮ ಕೈಗೊಳ್ಳಲಾಗಿತ್ತು. ಅಂಥ ಪ್ರಭಾವಿ ರಾಜ, ಸೌದಿ ಅರೇಬಿಯಾ ಅರಸ.












Click it and Unblock the Notifications