ರಾಜಾಜ್ಞೆಗೆ ಬೆದರಿ 320 ಕೆಜಿ ತೂಕ ಇಳಿಸಿದ ಶಾಯರಿ

ಇದು ಯಾವುದೋ ಚಂದಮಾಮಾ ಕಥೆಯಲ್ಲ. ಸೌದಿಯ ರಿಯಾದ್ ನಲ್ಲಿ ನಡೆದ ಈಗಿನ ಕಥೆ. ಯುವಕನ ದೇಹ ಕಂಡು ರಾಜನಿಗೇ ಎಷ್ಟು ರೇಜಿಗೆಯಾಗಿತ್ತು ಅಂದರೆ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದರು.
ದಢೂತಿ ದೇಹದ ಖಲೀದ್ ಮೊಹಸೀನ್ ಅಲ್ ಶಾಯರಿ ತೂಕ ಕಳೆದುಕೊಂಡ ಯುವಕ. ಸೌದಿ ರಾಜನ ಹೆಸರು ಅಬ್ದುಲ್ಲಾ. ಆಸ್ಪತ್ರೆಯ ಹೆಸರು King Fahd Medical City (KFMC). ಯುವಕ ಅಲ್ ಶಾಯರಿ ಈಗ 610 ರಿಂದ 290 ಕೆಜಿಗೆ ಇಳಿದಿದ್ದು, ಆರೋಗ್ಯವಾಗಿದ್ದಾನೆ. ದಾಖಲೆಯ ಸಂಗತಿಯೆಂದರೆ ಕೇವಲ 4 ತಿಂಗಳಲ್ಲಿ ಅಲ್ ಶಾಯರಿ ತೂಕ ಇಳಿಸಿಕೊಂಡಿದ್ದಾನೆ.
ಅಲ್ ಶಾಯರಿ ತೂಕ ಇಳಿಸಿಕೊಂಡ ಸ್ವಾರಸ್ಯಕರ ಕಥೆ :
ದಢೂತಿ ಯುವಕ ಅಲ್ ಶಾಯರಿ ಈಗ ಮುಂದಿನ ಹಂತದ ಚಿಕಿತ್ಸೆಗೊಳಗಾಗಲು ಸಿದ್ಧತೆ ನಡೆಸಿದ್ದಾನೆ. ಆತನ ಹೃದಯ ಮತ್ತು ಶ್ವಾಸಕೋಶಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಈತನಿಗಾಗಿ ವಿಶೇಷ ಚೇರ್ ತಯಾರಿಸಲಾಗಿದ್ದು, ಅದು ಅತಿ ದೊಡ್ಡ ಮೆಡಿಕಲ್ ಚೇರ್ ಎಂಬ ಹೆಗ್ಗಳಿಕೆ ಪಡೆದಿದೆ.
21 ವೈದ್ಯಕೀಯ ಸಲಹೆಗಾರರು, 15 ನರ್ಸ್ ಗಳು ಮತ್ತು ಅಲ್ ಶಾಯರಿ ತಾಯಿ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ. ಹೊಟ್ಟೆ ಭಾಗದಿಂದಲೇ 170 ಕೆಜಿ ತೆಗೆಯಲಾಗಿದೆ. ಅದಕ್ಕೂ ಮುನ್ನ ದೇಹದ ಇತರೆ ಭಾಗಗಳಿಂದ 150 ಕೆಜಿ ತೆಗೆಯಲಾಗಿದೆ. ಅಂದಹಾಗೆ, ಅಮೆರಿಕದಿಂದ ತರಿಸಿಕೊಳ್ಳಲಾದ ವಿಶೇಷ ಆಹಾರವನ್ನು ಅಲ್ ಶಾಯರಿ ನೀಡಲಾಗಿದೆ.
KFMC ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮುನ್ನ ವೈದ್ಯರೇ ಜಜಾನ್ ನಲ್ಲಿರುವ ಅಲ್ ಶಾಯರಿಯ ಮನೆಗೆ ತೆರಳಿ ಅಲ್ಲೇ ಚಿಕಿತ್ಸೆ ನೀಡತೊಡಗಿದರು. ಸ್ವಲ್ಪ ಅಲುಗಾಡುವಂತಾದ ಮೇಲಷ್ಟೇ ಅಲ್ ಶಾಯರಿಯನ್ನು ರಿಯಾದ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ಅಲ್ ಶಾಯರಿಯ ಈ ಹಿಂದೆ ಮೂರು ಹಾಸಿಗೆಗಳ ಮೇಲೆ ಬಿದ್ದುಕೊಳ್ಳುತ್ತಿದ್ದ. ಈಗ ಆರಾಮವಾಗಿ ಒಂದೇ ಹಾಸಿಗೆಯಲ್ಲಿ ಪವಡಿಸುತ್ತಾನೆ.












Click it and Unblock the Notifications